Advertisement

ಸೋಣ ತಿಂಗಳ ಮುಕ್ತಾಯಕ್ಕೆ ಅಜ್ಜಿ ಓಡಿಸುವ ಸಂಪ್ರದಾಯ

10:47 PM Sep 06, 2019 | Sriram |

ಹೆಬ್ರಿ: ಶ್ರಾವಣ ಮಾಸದಲ್ಲಿ ಎಲ್ಲೆಡೆ ಹೊಸ್ತಲ ಪೂಜೆ ಆರಂಭವಾಗುತ್ತಿದ್ದಂತೆಯೇ ಸೋಣ ತಿಂಗಳ ಮುಕ್ತಾಯಕ್ಕೆ ಸಾಮಾನ್ಯವಾಗಿ ಕುಂದ ಕನ್ನಡ ಮಾತನಾಡುವವರ ಮನೆಗಳಲ್ಲಿ ಅಜ್ಜಿ ಓಡಿಸುವ ಸಂಪ್ರದಾಯ ಆಚರಣೆ ವಿಶೇಷ ಮಹತ್ವ ಪಡೆದು ಕೊಂಡಿದೆ.

Advertisement

ಒಂದು ತಿಂಗಳು ಆಚರಿಸುವ ಹೊಸ್ತಿಲ ಪೂಜೆಗೆ ಹುರುಳಿ ಹೂವು ವಿಶೇಷ ಮಾನ್ಯತೆ ಪಡೆಯುತ್ತದೆ. ಕೇವಲ ಹುರುಳಿ ಹೂ, ನೀರ್‌ಕಡ್ಡಿ ಮಾತ್ರವಲ್ಲದೆ ಹುಧ್ದೋಳ್‌ ಹೂ, ರಥ ಪುಷ್ಪ ಹೀಗೆ ಹಲವು ಬಗೆಯ ಹೂವಿನಿಂದ ಹೊಸ್ತಿಲ ಪೂಜೆ ಮಾಡುತ್ತಾರೆ. ತುಳಸಿಗೂ ಜೇಡಿಮಣ್ಣಿನ ಉಂಡೆಯಿಂದ ರಂಗೋಲಿ ಬರೆದು ಹೂಗಳನ್ನಿಟ್ಟು ಪೂಜಿಸುತ್ತಾರೆ. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಹೊಸ್ತಿಲು ಪೂಜೆ ಅಜ್ಜಿ ಓಡಿಸುವ ಕ್ರಮದೊಂದಿಗೆ ಸಂಪನ್ನಗೊಳ್ಳುತ್ತದೆ.

ಕೆಲವೆಡೆ ಆ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಮೊದಲು ಅಜ್ಜಿ ಓಡಿಸುವ ಸಂಪ್ರದಾಯ ಮುಗಿಸುತ್ತಾರೆ. ಈ ಆಚರಣೆಗೆ ಅಜ್ಜಿ ಓಡಿಸುವ ಕೋಲನ್ನು ಬಳಸಲಾಗುತ್ತದೆ.

ಆಚರಣೆ ಹೇಗೆ ?
ಪ್ರತಿನಿತ್ಯದ ಪೂಜೆಯಂತೆ ತುಳಸಿಕಟ್ಟೆ ಹಾಗೂ ಅಜ್ಜಿ ಹೊಸ್ತಿಲನ್ನು ಸಿಂಗರಿಸುತ್ತಾರೆ. ಹೊಸ್ತಿಲ ಮೇಲೆ ಬಾಳೆ ಎಲೆಯಲ್ಲಿ ಉದ್ದಿನ ದೋಸೆ,ಅರಳು,ಬೆಲ್ಲ, ಬೆಂಕಿಯಲ್ಲಿ ಕಾಯಿಸಿದ ಹಲಸಿನ ಬೀಜ ಮೊದಲಾದ ವಸ್ತುಗಳನ್ನು ಇಟ್ಟು ಪೂಜಿಸಿ, ಪೂರ್ವಜರನ್ನು ಸ್ಮರಿಸುತ್ತಾರೆ.ತದನಂತರ ಬಾಗಿಲ ಮೂಲೆಯಲ್ಲಿ ಪೂಜಿಸಿದ ವ್ಯಕ್ತಿ ಅಡಗಿಕೊಂಡಿದ್ದು, ಬಾಳೆ ಎಲೆಯಲ್ಲಿರಿಸಿದ ತಿನಿಸುಗಳನ್ನು ಬಾಳೆ ಎಲೆಯ ಸಹಿತವಾಗಿ ಮನೆಯ ಸದಸ್ಯರು ಕದ್ದೊಯ್ಯಲು ಪ್ರಯತ್ನಿಸುತ್ತಾರೆ. ಆಗ ಕದ್ದೊಯ್ಯುವ ವ್ಯಕ್ತಿಗೆ ಅಜ್ಜಿ ಕೋಲಿನಿಂದ ಹೊಡೆಯಲು ಪ್ರಯತ್ನಿಸಿದಾಗ ಅಜ್ಜಿ ಓಡಿತು ! ಆಜ್ಜಿ ಓಡಿತು! ಎಂದು ಕೂಗಿ ಸಂಭ್ರಮಿಸುತ್ತಾರೆ. ಆ ಪ್ರಸಾದವನ್ನು ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಸವಿಯುವುದು ಈ ಸಂಪ್ರದಾಯದ ವಿಶೇಷ.

ಮರೆಯಾಗುತ್ತಿರುವ ಸಂಪ್ರದಾಯ
ಆಧುನಿಕತೆಯ ಪ್ರಭಾವದಿಂದ ಇಂದು ಹೆಚ್ಚಿನ ಮನೆಗಳಲ್ಲಿ ಹೊಸ್ತಿಲುಗಳೇ ಇಲ್ಲ ದಂತಾಗಿ ಹಬ್ಬ ಆಚರಿಸದಿರುವುದು ಬೇಸರದ ಸಂಗತಿ. ಕೆಲವರು ಪ್ಲ್ರಾಟ್‌ಗಳಲ್ಲಿ ವಾಸಿಸುತ್ತಿ ರುವುದರಿಂದ ಇಂತಹ ಆಚರಣೆಗಳು ಕಷ್ಟವೆನ್ನುತ್ತಾರೆ. ಆದರೂ ಕೆಲವೊಂದು ಮನೆಗಳಲ್ಲಿ ಒಂದು ತಿಂಗಳು ಆಚರಿಸಬೇಕಾದ ಸಂಪ್ರದಾಯವನ್ನು ಸಮಯವಿಲ್ಲ ಎಂಬ ಕಾರಣಕ್ಕೆ ಕೇವಲ 3 ದಿನದಲ್ಲಿ ಮುಗಿಸುತ್ತಾರೆ. ಆದರೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪರಿಚಯಿಸುವ ಇಂತಹ ಆಚರಣೆಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಿ ಆಚರಿಸುವ ಅಗತ್ಯವಿದೆ.
-ಸುಮಿ ಸುದರ್ಶನ ಶೆಟ್ಟಿ,
ಗೃಹಿಣಿ , ಅನಂತ ನಗರ ಹೆಬ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next