Advertisement

ಸುಗ್ಗಿ ಸಂಭ್ರಮಕ್ಕಾಗಿ ವ್ಯಾಪಾರ ಭರಾಟೆ ಜೋರು

12:46 AM Jan 13, 2020 | Lakshmi GovindaRaj |

ಬೆಂಗಳೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆ ರಾಶಿ ರಾಶಿ ಕಪ್ಪು ಮತ್ತು ಬಿಳಿ ಕಬ್ಬುಗಳ ರಾಶಿ ಮಾರುಕಟ್ಟೆಗಳಿಗೆ ಪೂರೈಕೆಯಾಗಿ ಕಳೆಗಟ್ಟಿವೆ. ನಗರದ ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳು ಹಬ್ಬದ ಖರೀದಿ ಭರಾಟೆಯೂ ಜೋರಾಗಿ ನಡೆದಿದೆ.

Advertisement

ಎಳ್ಳು-ಬೆಲ್ಲ ಮಿಶ್ರಣ, ಬಣ್ಣ ಬಣ್ಣದ ಸಕ್ಕರೆ ಅಚ್ಚು , ಅವರೆಕಾಯಿ, ಗೆಣಸು, ಕಡಲೇಕಾಯಿ ಖರೀದಿ ಭಾನುವಾರದಿಂದಲೇ ಜೋರಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬು ಹಾಗೂ ಎಳ್ಳು- ಬೆಲ್ಲ ಮಿಶ್ರಣದ ಬೆಲೆ ಕಡಿಮೆ ಇದ್ದು, ಗ್ರಾಹಕರು ಸುಗ್ಗಿ ಹಬ್ಬ ಆಚರಣೆ ಹಿಗ್ಗು ಹೆಚ್ಚಿಸಿದೆ.

ಜಯನಗರ 4ನೇ ಬ್ಲಾಕ್‌ನ ವಾಣಿಜ್ಯ ಸಂಕೀರ್ಣ, ಗಾಂ ಧಿಬಜಾರ್‌, ಮಲ್ಲೇಶ್ವರ, ಯಶವಂತಪುರ, ರಾಜಾ ಜಿನಗರ, ಕೆಂಗೇರಿ ಉಪನಗರ, ಮಡಿವಾಳ, ಬನಶಂಕರಿ, ಸಾರಕ್ಕಿ, ಕೆ.ಆರ್‌.ಪುರ ಹೀಗೆ ನಗರದ ಬಹುತೇಕ ಕಡೆ ಸಿದ್ಧಪಡಿಸಿದ ಎಳ್ಳು-ಬೆಲ್ಲ ಮಿಶ್ರಣ, ಸಕ್ಕರೆ ಅಚ್ಚುಗಳ ಮಾರಾಟಕ್ಕೆಂದೇ ಪ್ರತ್ಯೇಕ ಮಳಿಗೆ ತೆರೆಯಲಾಗಿದೆ. ಇದಲ್ಲದೆ ಪ್ರಾವಿಷನ್‌ ಸ್ಟೋರ್‌ ಮತ್ತಿತರ ಮಳಿಗೆಗಳಲ್ಲೂ ಮಾರಾಟವಾಗುತ್ತಿದೆ.

ಕಬ್ಬು ಪ್ರತಿ ಜೊತೆಗೆ 50-60 ರೂ., ಮಿಶ್ರಣ ಎಳ್ಳುಬೆಲ್ಲ ಪ್ಯಾಕ್‌ ಕೆ.ಜಿ.ಗೆ 250 ರೂ., ಎಳ್ಳು ಕೆ.ಜಿ.ಗೆ 170-260 ರೂ., ಅಚ್ಚು ಬೆಲ್ಲ 20, ಜೀರಿಗೆ ಮಿಠಾಯಿ 100 ಗ್ರಾಂ 20 ರೂ., ಸಕ್ಕರೆ ಅಚ್ಚು ಕೆ.ಜಿ. 80-100 ರೂ., ಕಪ್ಪು ಎಳ್ಳು 200-250 ರೂ. ವಿಳ್ಯೆದೆಲೆ ಕಟ್ಟು 20-30 ರೂ., ಕೊಬ್ಬರಿ ಕೆ.ಜಿ.ಗೆ 400-450 ರೂ. ಬೆಲೆ ಇದೆ. ಕೆ.ಆರ್‌.ಮಾರುಕಟ್ಟೆಯಲ್ಲಿ ಕೆಲ ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಬೀನ್ಸ್, ಹೀರೇಕಾಯಿ, ಹಾಗಲಕಾಯಿ ಬೆಲೆ ತುಸು ಹೆಚ್ಚಾಗಿದೆ.

ಹಬ್ಬಕ್ಕೆ ಮೂರು ದಿನ ಬಾಕಿ ಇದ್ದಂತೆಯೇ ಮಾರುಕಟ್ಟೆ ಯಲ್ಲಿ ಹೂವಿನ ಬೆಲೆ ಕುಸಿದಿದೆ. ಈ ಬಾರಿ ಹೂವಿನ ಇಳುವರಿ ಉತ್ತಮವಾಗಿದ್ದು, ಧಾರಣೆ ಕಡಿಮೆ ಇದೆ. ಇತರೆ ಹಬ್ಬಗಳಲ್ಲಿ ದುಬಾರಿ ಎನಿಸುತ್ತಿದ್ದ ಸೇವಂತಿಗೆ, ಸುಗಂಧರಾಜ, ಗುಲಾಬಿ, ಮಲ್ಲಿಗೆಗೆ ಬೇಡಿಕೆ ಇಲ್ಲವಾ ಗಿದೆ. ಸೇವಂತಿ ಹೂ ಕೆ.ಜಿ.ಗೆ 40-50 ರೂ., ಕನಕಾಂಬರ ಕೆ.ಜಿ. 400 ರೂ., ದುಂಡು ಮಲ್ಲಿಗೆ ಕೆ.ಜಿ.ಗೆ 1,000 ರೂ.ಗೆ ಮಾರಾಟವಾಗುತ್ತಿವೆ. ಕಳೆದ ಎರಡು ವಾರ ಗಳಿಂದ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದ ಈರುಳ್ಳಿ, ಟೊಮೊಟೊ, ಹಣ್ಣುಗಳ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

Advertisement

ಸದ್ಯ ದುಂಡು ಮಲ್ಲಿಗೆ ಬೆಳೆ ಯುವ ಋತುಮಾನವಾಗದ ಕಾರಣ ಬೆಲೆ ದುಬಾರಿ ಯಾಗಿದೆ. ಸೇವಂತಿ ಹೂವು ಬೆಂಗಳೂರು ಸುತ್ತ ಮುತ್ತ, ತಮಿಳುನಾಡು, ಆಂಧ್ರ ಪ್ರದೇಶದಿಂದ ಪೂರೈಕೆಯಾಗುತ್ತಿದೆ. ಸಂಕ್ರಾಂತಿಗಾಗಿ ಟನ್‌ಗಟ್ಟಲೇ ಕಬ್ಬು ಮಾರುಕಟ್ಟೆಗೆ ಬಂದಿದೆ.
-ಮಹೇಶ್‌, ಕೆ.ಆರ್‌.ಮಾರುಕಟ್ಟೆಯ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next