Advertisement

ವ್ಯಾಪಾರ ಬಿಕ್ಕಟ್ಟು ಭಾರತ-ಅಮೆರಿಕ ಪಟ್ಟು

10:20 AM Feb 26, 2020 | mahesh |

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಭಾರತ ಭೇಟಿ ಹಲವು ರೀತಿಯಲ್ಲಿ ಮಹತ್ವ ಪಡೆದಿದೆ. ಈ ಎರಡು ದಿನಗಳ ಐತಿಹಾಸಿಕ ಭೇಟಿಯ ವೇಳೆ ಮಹತ್ವದ ವ್ಯಾಪಾರ ಒಪ್ಪಂದಗಳಾಗಲಿವೆ ಎಂಬ ನಿರೀಕ್ಷೆಯಿತ್ತಾದರೂ, ಸದ್ಯಕ್ಕೆ ಎಂದಿನಂತೆ ರಕ್ಷಣೆ- ಭದ್ರತೆ ಕುರಿತ ವಿಚಾರದಲ್ಲಿ ಮಾತ್ರ ಗಮನಾರ್ಹ ಒಪ್ಪಂದಗಳು ಆಗುವ ನಿರೀಕ್ಷೆಗಳಿವೆ. ಇನ್ನುಳಿದ ವಲಯಗಳಲ್ಲಿ, ಎರಡೂ ದೇಶಗಳ ನಡುವೆ ಜಟಿಲ ಬಿಕ್ಕಟ್ಟುಗಳು ಇದ್ದೇ ಇವೆ. ಭಾರತ-ಅಮೆರಿಕದ ನಡುವೆ ಸೃಷ್ಟಿಯಾಗಿರುವ ವ್ಯಾಪಾರ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ…

Advertisement

ಸಸ್ಯಾಹಾರಿ ಹಸು ಮತ್ತು ವಾಲ್‌ನಟ್ಟಿಗೆ ಪೆಟ್ಟು
ಕೃಷಿ ಮತ್ತು ಡೈರಿ ಉತ್ಪನ್ನಗಳ ವಿಚಾರದಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಇರುವ ಬಿಕ್ಕಟ್ಟನ್ನು ಟ್ರಂಪ್‌ ಆಡಳಿತ “ಅತ್ಯಂತ ಕ್ಲಿಷ್ಟ ಸಮಸ್ಯೆ’ ಎಂದು ಬಣ್ಣಿಸುತ್ತದೆ. 2018ರಲ್ಲಿ ಅಮೆರಿಕವು ಭಾರತದ ಸ್ಟೀಲ್‌ ಮತ್ತು ಅಲ್ಯುಮಿನಿಯಂ ಮೇಲಿನ ಜಾಗತಿಕ ಹೆಚ್ಚುವರಿ ಸುಂಕವನ್ನು ಏರಿಸಿಬಿಟ್ಟಿತು. ಇದರಿಂದ ಆಕ್ರೋಶಗೊಂಡ ಭಾರತ ಪ್ರತ್ಯುತ್ತರ ನೀಡಲು, ಅಮೆರಿಕದಿಂದ ರಫ್ತಾಗುವ 28 ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಏರಿಸಿಬಿಟ್ಟಿತು. ಇದರಲ್ಲಿ ಅಮೆರಿಕದ ಕೃಷಿ ಉತ್ಪನ್ನಗಳೂ ಇದ್ದವು(ಸೇಬು, ಬಟಾಣಿ, ಬಾದಾಮಿ, ಗೋಡಂಬಿ, ಕಡಲೆ, ಗೋದಿ ಮತ್ತು ವಾಲ್‌ನಟ್‌). ಈಗ ಅಮೆರಿಕದಿಂದ ಭಾರತಕ್ಕೆ ಬರುವ ವಾಲ್‌ನಟ್‌ಗಳ ಮೇಲೆ 120 ಪ್ರತಿಶತ ಸುಂಕವಿದೆ! ಈ ಪ್ರಮಾಣ ಅತಿಯಾಯಿತು ಎಂದು ಅಮೆರಿಕ ಬೇಸರ ವ್ಯಕ್ತಪಡಿಸುತ್ತಲೇ ಇದೆ. ಇನ್ನು ಭಾರತದ ಮಾರುಕಟ್ಟೆಯಲ್ಲಿ ಹಾಲಿನ ಉತ್ಪನ್ನಗಳನ್ನು ಹರಿಬಿಡಲು ಅಮೆರಿಕ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ಆದರೆ ಭಾರತಕ್ಕೂ ಕೆಲವು ಅಡಚಣೆಗಳಿವೆ. ಉದಾಹರಣೆಗೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗಿ ಭಾರತ, ಡೈರಿ ಉತ್ಪನ್ನಗಳು ಸಸ್ಯಾಹಾರಿ ಹಸುವಿನಿಂದ ತಯಾರಾಗಿರಬೇಕು ಎಂದು ಸಹಜವಾಗಿಯೇ ಬಯಸುತ್ತದೆ. ಆದರೆ, ಅಮೆರಿಕದ ಬಹುತೇಕ ಹಸುಗಳಿಗೆ ಹುಲ್ಲಿನ ಜತೆಗೆ ಮಾಂಸಾಹಾರವನ್ನೂ ಸೇರಿಸಿ ಕೊಡಲಾಗುತ್ತದೆ. ಹೀಗಾಗಿ, ಭಾರತದ ಬೇಡಿಕೆಗೆ ತಕ್ಕಂತೆ ಹಸುಗಳನ್ನು ಸಾಕಲು ಅಮೆರಿಕದ ರೈತರಿಗೆ ಸಾಧ್ಯವಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದಲ್ಲೇ ಕೋಟ್ಯಂತರ ಕುಟುಂಬಗಳು ಡೈರಿ ಉದ್ಯಮದಲ್ಲಿ ಬದುಕು ಕಟ್ಟಿಕೊಂಡಿದ್ದು, ಡೈರಿ ಉತ್ಪನ್ನಗಳನ್ನು ಆಮದು ಮಾಡಿಕೊಂಡರೆ ವಿವಾದ-ವಿರೋಧ ಎದುರಿಸಬೇಕಾಗುತ್ತದೆ.

ವೀಸಾ ಮತ್ತು ಸೇವಾ ವಲಯ
ಸೇವಾ ವಲಯದಲ್ಲಿ ಭಾರತ ಜಗತ್ತಿನಲ್ಲೇ ಅತ್ಯಂತ ಸ್ಪರ್ಧಾತ್ಮಕ ರಾಷ್ಟ್ರವಾಗಿ ಬದಲಾಗಿದೆ. ಅದರಲ್ಲೂ ಭಾರತದ ಐಟಿ ಪರಿಣತರು ಜಗತ್ತಿನಾದ್ಯಂತ ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ಅಮೆರಿಕದಲ್ಲಿ ಎಚ್‌1ಬಿ ವಿವಾದ ಭುಗಿಲೆದ್ದಾಗ ಅಪೀಲು ಸಲ್ಲಿಸಿದ 10 ಕಂಪನಿಗಳಲ್ಲಿ, ನಾಲ್ಕು ಕಂಪನಿಗಳು ಭಾರತದ್ದು. ಎಚ್‌-1 ಬಿ ವಿಚಾರವನ್ನು ಟ್ರಂಪ್‌ ಸರ್ಕಾರ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಭಾರತದ ಆಕ್ರೋಶಕ್ಕೆ ಪ್ರಮುಖ ಕಾರಣ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪೆನಿಗಳು ಭಾರತೀಯ ವೃತ್ತಿಪರರನ್ನು ಅಗತ್ಯ ಪ್ರಮಾಣದಲ್ಲಿ ಕರೆದೊಯ್ಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆನ್‌ಸೈಟ್‌ ಮೇಲೆ ಉದ್ಯೋಗ ನೀಡಬೇಕಾಗುತ್ತದೆ. ಇದರಿಂದಾಗಿ, ಅವುಗಳ ಲಾಭಕ್ಕೆ ಹೊಡೆತ ಬೀಳುತ್ತದೆ. ಅಮೆರಿಕದ ಪೌರತ್ವ ಮತ್ತು ಇಮಿಗ್ರೇಷನ್‌ ಸೇವೆಯ ಅಂಕಿ ಅಂಶಗಳ ಪ್ರಕಾರ, ಎಚ್‌1ಬಿ-ವೀಸಾ ಪಿಟೀಷನ್ನುಗಳ ನಿರಾಕರಣೆಯ ಪ್ರಮಾಣವು 6 ಪ್ರತಿಶತದಿಂದ, 24 ಪ್ರತಿಶತಕ್ಕೆ ಏರಿದೆ. ಐಟಿ ಸೇವಾ ವಲಯವು ಭಾರತದ ಅತಿದೊಡ್ಡ ವ್ಯಾಪಾರ ಮಾರ್ಗವಾಗಿರುವುದರಿಂದ, ಅಮೆರಿಕ ಎದುರೊಡ್ಡುತ್ತಿರುವ ಸವಾಲುಗಳು ಸಮಸ್ಯೆಗೆ ಕಾರಣವಾಗಿವೆ.

ಡಿಜಿಟಲ್‌ ಆರ್ಥಿಕತೆ, ಎಚ್ಚೆತ್ತ ಭಾರತ
2018ರಲ್ಲಿ ಜಸ್ಟಿಸ್‌ ಶ್ರೀಕೃಷ್ಣ ಸಮಿತಿ ಶಿಫಾರಸಿನ ಆಧಾರದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ, ಭಾರತೀಯರ ಬ್ಯಾಂಕಿಂಗ್‌ ಮಾಹಿತಿಯನ್ನು(ಪಾವತಿ ಸಂಬಂಧಿ ಡಾಟಾ) ಭಾರತದಲ್ಲೇ ಸಂಗ್ರಹಿಸಿಡಬೇಕೆಂದು ಕಡ್ಡಾಯಗೊಳಿಸಿತು. ಇದರನ್ವಯ, ಭಾರತೀಯರ ಪಾವತಿ ದಾಖಲೆಗಳು ಭಾರತದ ಸರ್ವರ್‌ಗಳಲ್ಲೇ ಸಂಗ್ರಹ‌ವಾಗುತ್ತಿವೆ. ಡಾಟಾ ಈಸ್‌ ದಿ ನ್ಯೂ ಗೋಲ್ಡ್‌ ಎನ್ನುವುದನ್ನು ಅರಿತಿರುವ ಭಾರತವು, ಡಾಟಾವನ್ನು ಪ್ರಾದೇಶೀಕರಣಗೊಳಿಸುವುದೇ ಒಳ್ಳೆಯ ಮಾರ್ಗವೆಂದು ಅರಿತಿದೆ. ಆದರೆ ಅಮೆರಿಕ, ಡಿಜಿಟಲ್‌ ವ್ಯವಹಾರಕ್ಕೆ ಭಾರತದ ಈ ನಡೆ ಅಡ್ಡಿಯೆಂದು ಭಾವಿಸುತ್ತದೆ. ಭಾರತದಲ್ಲಿರುವ ಅಮೆರಿಕದ ಪೇಮೆಂಟ್‌ ಕಂಪನಿಗಳು ಈಗ ಭಾರತದಲ್ಲೇ ಸರ್ವರ್‌ ಸ್ಥಾಪಿಸುವುದು ಕಡ್ಡಾಯವಾಗಿದೆ. ಇದರಿಂದ ಮೂಲಸೌಕರ್ಯಕ್ಕೆ ಹೆಚ್ಚಿನ ಹಣ ಹೂಡಬೇಕಾಗುತ್ತಿದೆ ಎಂದೂ ಅವು ದೂರುತ್ತಿವೆ. ಇನ್ನೊಂದೆಡೆ, ಭಾರತದಲ್ಲಿ ಡಿಸೆಂಬರ್‌ 2019ರಲ್ಲಿ ಪರಿಚಯಿಸಲಾದ ಇ-ಕಾಮರ್ಸ್‌ ಮತ್ತು ದತ್ತಾಂಶ ರಕ್ಷಣೆ ಬಿಲ್‌ ಬಗ್ಗೆಯೂ ಅಮೆರಿಕ ಗೋಳಾಡುತ್ತದೆ. ಅಮೆಜಾನ್‌ನಂಥ ಅಮೆರಿಕ ಮೂಲದ ಸಂಸ್ಥೆಗಳು ತಮ್ಮದೇ ಈಕ್ವಿಟಿ ಇರುವ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರುವುದನ್ನು ಭಾರತದ ನಿಷೇಧಿಸಿ, ದಿಟ್ಟ ಕ್ರಮ ಕೈಗೊಂಡಿದೆ.

ವೈದ್ಯಕೀಯ ಉತ್ಪನ್ನ ಹಾಗೂ ದರಮಿತಿ
ಅಮೆರಿಕವು ತನ್ನ ವೈದ್ಯಕೀಯ ಪರಿಕರಗಳನ್ನು ದುಬಾರಿ ಬೆಲೆಗೆ ಮಾರುಕಟ್ಟೆಗೆ ಹರಿಸಲು ಭಾರತ ಬಿಡುತ್ತಿಲ್ಲ. ಹೀಗಾಗಿ ವೈದ್ಯಕೀಯ ಉತ್ಪನ್ನಗಳ ಮೇಲೆ ಭಾರತ ವಿಧಿಸುವ ದರಮಿತಿಯ ಮೇಲೂ ಅಮೆರಿಕಕ್ಕೆ ಅಸಮಾಧಾನವಿದೆ. ಭಾರತವು ತನ್ನ ಮೆಡಿಕಲ್‌ ಉತ್ಪನ್ನಗಳ ಮೇಲಿನ ದರ ಮಿತಿಯನ್ನು ತೆಗೆದುಹಾಕಬೇಕು ಎಂಬುದು ಅಮೆರಿಕದ ಬಹುದಿನಗಳ ಬೇಡಿಕೆಯಾಗಿದೆ. ಆದರೆ ಭಾರತ ಇದಕ್ಕೆ ಸಿದ್ಧವಿಲ್ಲ. ಏಕೆಂದರೆ ಭಾರತೀಯರಿಗೆ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆಯನ್ನು ನೀಡಬೇಕು ಎನ್ನುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಅದರಲ್ಲೂ ಕೊರೊನರಿ ಸ್ಟೆಂಟ್‌ಗಳು ಮತ್ತು ಕೃತಕ ಮಂಡಿಗಳ ದರದ ಮೇಲೆ ಭಾರತ ಮಿತಿ ಹೇರಿದೆ. ಇದರಿಂದಾಗಿ, 2015ರಿಂದ ಸ್ಟೆಂಟ್‌ಗಳ ಅಳವಡಿಸಿಕೊಂಡ ಭಾರತೀಯರ ಸಂಖ್ಯೆ 71.3 ಪ್ರತಿಶತಕ್ಕೆ ಏರಿದೆ. ಅದಕ್ಕೂ ಮುನ್ನ, ಅಂದರೆ 2013ರಲ್ಲಿ ದುಬಾರಿ ಬೆಲೆಗಳ ಕಾರಣದಿಂದಾಗಿ ಸ್ಟೆಂಟ್‌ ಅಳವಡಿಸಿಕೊಂಡ ಭಾರತೀಯರ ಸಂಖ್ಯೆ ಕೇವಲ 40.7 ಪ್ರತಿಶತದಷ್ಟಿತ್ತು.

Advertisement

ಹಾರ್ಲಿ ವಿಷಯದಲ್ಲಿ ಅಸಮಾಧಾನ
ಐಷಾರಾಮಿ ಹಾರ್ಲಿ ಡೇವಿಡ್‌ಸನ್‌ ಮೇಲಿನ ಆಮದು ತೆರಿಗೆಯನ್ನು ಭಾರತ ಗಣನೀಯವಾಗಿ ತಗ್ಗಿಸಬೇಕು ಎಂದು ಟ್ರಂಪ್‌ ಆಗ್ರಹಿಸುತ್ತಾ ಬಂದಿದ್ದಾರೆ. ಈ ಹಿಂದೆ ಹಾರ್ಲಿ ಡೇವಿಡಸನ್‌ ಮೇಲಿನ ಆಮದು ತೆರಿಗೆ 100 ಪ್ರತಿಶತದಷ್ಟಿತ್ತು. ಈಗ ಭಾರತ ಈ ಪ್ರಮಾಣವನ್ನು 50 ಪ್ರತಿಶತಕ್ಕೆ ಇಳಿಸಿದೆಯಾದರೂ, ಅಮೆರಿಕ ಈ ದರವೂ ಅತಿಯಾಯಿತು ಎನ್ನುತ್ತಿದೆ. ಈ ವಿಷಯವಾಗಿ ಟ್ರಂಪ್‌ ಭಾರತವನ್ನು tariff kingಎಂದು ಅಣಕಿಸಿದ್ದರು!

ಭಾರತದ ವೈವಿಧ್ಯತೆಯ ಪರಿಚಯಿಸುತ್ತಿದ್ದಾರೆ ಮೋದಿ
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದಿಂದ, ವಿದೇಶಿ ಗಣ್ಯರನ್ನು ಸತ್ಕರಿಸುವ ಜಾಗಗಳಲ್ಲಿ ವೈವಿಧ್ಯತೆ ಬಂದಿದೆ. ಇಲ್ಲಿಯವರೆಗೂ ವಿದೇಶಿ ಗಣ್ಯರನ್ನೆಲ್ಲ ಕೇವಲ ದೆಹಲಿ-ಆಗ್ರಾ ಭೇಟಿಗಷ್ಟೇ ಸೀಮಿತಗೊಳಿಸಲಾಗುತ್ತಿತ್ತು. ದೆಹಲಿ ಹೊರತುಪಡಿಸಿದರೆ, ಹೆಚ್ಚಾಗಿ ಗಾಂಧಿನಾಡು ಗುಜರಾತ್‌ಗೆà ವಿದೇಶಿ ನಾಯಕರು ಭೇಟಿ ನೀಡಿದ್ದಾರೆ. ಆದರೆ 2014ರಿಂದ ವಿದೇಶಿ ನಾಯಕರು ಭಾರತದ ಇತರೆ ನಗರಗಳು, ರಾಜ್ಯಗಳಿಗೂ ಭೇಟಿ ನೀಡಲಾರಂಭಿಸಿದ್ದಾರೆ. ತನ್ಮೂಲಕ ಮೋದಿ ಸರ್ಕಾರ ವಿದೇಶಿ ಗಣ್ಯರಿಗೆ ಭಾರತದ ವೈವಿಧ್ಯತೆಯನ್ನು ಪರಿಚಯಿಸುತ್ತಿದೆ. ಇದು ಜಾಗತಿಕ ರಂಗದಲ್ಲಿ ಭಾರತೀಯ ಸಂಸ್ಕೃತಿಯ, ಪರಂಪರೆಯ ವೈವಿಧ್ಯತೆಯನ್ನು ಪರಿಚಯ ಮಾಡಿಸುವ ಅತ್ಯುತ್ತಮ ಪ್ರಯತ್ನ ಎಂಬ ಶ್ಲಾಘನೆಗೆ ಪಾತ್ರವಾಗಿದೆ.

ಇತ್ತೀಚೆಗಷ್ಟೇ(ಫೆ.13-14ರಂದು) ಭಾರತ ಪ್ರವಾಸ ಕೈಗೊಂಡ ಪೋರ್ಚುಗಲ್‌ ಅಧ್ಯಕ್ಷ ಸೌಜಾ ಮುಂಬೈ ಮತ್ತು ಗೋವಾಕ್ಕೆ ಭೇಟಿ ನೀಡಿದರು. ಅಲ್ಲದೇ ಸೌಜಾ ಮುಂಬೈನಲ್ಲಿ ಆಯೋಜನೆಗೊಂಡಿದ್ದ ಇಂಡಿಯಾ ಪೋರ್ಚುಗಲ್‌ ಬ್ಯುಸಿನೆಸ್‌ ಫೋರಂನಲ್ಲಿ ಭಾಗವಹಿಸಿದ್ದರು.

2019ರ ಅಕ್ಟೋಬರ್‌ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಪ್ರಧಾನಿ ಮೋದಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಆತಿಥ್ಯ ನೀಡಿದರು. ಅಲ್ಲದೇ ತಮಿಳುನಾಡಿನ ವಿಶ್ವಪಾರಂಪರಿಕ ಸ್ಥಳಗಳನ್ನೂ ತೋರಿಸಿದರು.

2018ರಲ್ಲಿ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮೆಕರಾನ್‌ ತಮ್ಮ ಅಧಿಕೃತ ಭೇಟಿಯ ವೇಳೆ ಉತ್ತರ ಪ್ರದೇಶದ ಮಿರ್ಜಾಪುರ್‌ಗೆ ಭೇಟಿ ಕೊಟ್ಟರು.

2018ರ ಜುಲೈ ತಿಂಗಳಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ ನೋಯ್ಡಾದಲ್ಲಿ ಜಗತ್ತಿನ ಅತಿದೊಡ್ಡ ಮೊಬೈಲ್‌ ಫ್ಯಾಕ್ಟರಿಯನ್ನು ಉದ್ಘಾಟಿಸಿದರು. ದಕ್ಷಿಣ ಕೊರಿಯಾದ ಫ‌ಸ್ಟ್‌ ಲೇಡಿ ಕಿಮ್‌ ಜಂಗ್‌ ಸೂಕ್‌ ಅಯೋಧ್ಯೆಯಲ್ಲಿ ನಡೆದ ದೀಪಾವಳಿ ಆಚರಣೆಯ ವಿಶೇಷ ಅತಿಥಿಯಾಗಿದ್ದರು.

ಕಳೆದ ವರ್ಷದ ಜನವರಿ ತಿಂಗಳಲ್ಲಿ ಪ್ರವಾಸಿ ಭಾರತೀಯ ದಿವಸ್‌ ಕಾರ್ಯಕ್ರಮಕ್ಕೆ ಬಂದ ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಕುಮಾರ್‌ ಅವರು ಕಾಶಿ ವಿಶ್ವನಾಥನ ದರ್ಶನ ಪಡೆದರು.

2018ರಲ್ಲಿ ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಿಡ್ನೂ ಅಮೃತಸರದಲ್ಲಿನ ಸ್ವರ್ಣ ಮಂದಿರ, ಗುಜರಾತ್‌ನ ಸಾಬರಮತಿ ಆಶ್ರಮ ಮತ್ತು ಮುಂಬೈಗೆ ಭೇಟಿ ಕೊಟ್ಟರು. ಆದರೆ, ಜಸ್ಟಿನ್‌ ಟ್ರಿಡ್ನೂ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಪರ ಧೋರಣೆ ತೋರಿಸಿದ ಕಾರಣ, ಭಾರತ ಅವರಿಗೆ ಸೂಕ್ತ ಆತಿಥ್ಯ ನೀಡದೇ, ಪರೋಕ್ಷವಾಗಿ ಎಚ್ಚರಿಕೆ ನೀಡಿತ್ತು.

2017ರಲ್ಲಿ ಟ್ರಂಪ್‌ರ ಪುತ್ರಿ ಇವಾಂಕಾ ಟ್ರಂಪ್‌, ಹೈದ್ರಾಬಾದ್‌ನಲ್ಲಿ ನಡೆದ ಜಾಗತಿಕ ಔದ್ಯಮಿಕ ಶೃಂಗದಲ್ಲಿ ಭಾಗವಹಿಸಿದ್ದರು. ಹೈದ್ರಾಬಾದ್‌ ನಗರಿ ಇವಾಂಕಾರನ್ನು ಭರ್ಜರಿಯಾಗಿಯೇ ಸ್ವಾಗತಿಸಿತು.

2016ರಲ್ಲಿ ಫ್ರಾನ್ಸ್‌ನ ಅಂದಿನ ಅಧ್ಯಕ್ಷ ಫ್ರಾಂಕ್ವಾ ಓಲಾಂದ್‌ ಚಂಡೀಗಢಕ್ಕೆ ಭೇಟಿ ನೀಡಿದರು. ಅಲ್ಲಿ ಮೋದಿ ಜತೆಗೂಡಿ ರಾಕ್‌ ಗಾರ್ಡನ್‌ ಅನ್ನು ವೀಕ್ಷಿಸಿದರು.

2015ರಲ್ಲಿ ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಬೆಂಗಳೂರಿನ ಬಾಶ್‌ ಸಂಶೋಧನಾ ಸಂಸ್ಥೆಗೆ ಆಹ್ವಾನಿತರಾಗಿದ್ದರು. ಈ ವೇಳೆಯಲ್ಲಿ ಅವರು ಬೆಂಗಳೂರು ಮತ್ತು ಭಾರತೀಯ ಯುವ ಪೀಳಿಗೆಯ ಪ್ರತಿಭೆಯನ್ನು ಕೊಂಡಾಡಿದ್ದರು.

2015ರ ಡಿಸೆಂಬರ್‌ ತಿಂಗಳಲ್ಲಿ ಜಪಾನ್‌ ಪ್ರಧಾನಿ ಶಿಂಜೋ ಅಬೆ ವಾರಾಣಸಿಗೆ ಭೇಟಿ ಕೊಟ್ಟಿದ್ದರು. ಅವರು ಪವಿತ್ರ ಗಂಗಾ ಆರತಿಯಲ್ಲಿ ಪಾಲ್ಗೊಂಡ ಚಿತ್ರಗಳು ವೈರಲ್‌ ಆದವು.

Advertisement

Udayavani is now on Telegram. Click here to join our channel and stay updated with the latest news.

Next