ರೋಮ್ : ’80 ರೂ.(1ಯುರೋ)ಗೆ ಮನೆ ಖರೀದಿಗೆ ಇದೆ’… ಇದು ಅಚ್ಚರಿಯಾದರೂ ನಿಜ. ಆದರೆ, ಭಾರತದ ನಗರಗಳಲ್ಲಿ ಅಲ್ಲ. 80 ರೂ.ಗೆ ಮನೆ ಬಾಡಿಗೆಗೆ ಸಿಗಬೇಕಿದ್ದರೆ ಇಟಲಿಯ ಬಿಸಾಸ್ಸಿಯಾಕ್ಕೆ ಹೋಗಬೇಕು. ಇಟಲಿಯ ಕಂಪಾನಿಯಾ (Campania) ಪ್ರದೇಶದಲ್ಲಿ ಇರುವ ಸುಂದರ ನಗರ ಬಿಸಾಸ್ಸಿಯಾದಲ್ಲಿ ಈ ಅಚ್ಚರಿ ಇದೆ ಎಂದು ‘ಸಿಎನ್‌ಎನ್’ ವರದಿ ಮಾಡಿದೆ.
80 ರೂ.ಗೆ ಸಿಗುವ ಮನೆಗಳು ಚೊಕ್ಕಟವಾಗಿ, ಗಟ್ಟಿಮುಟ್ಟಾಗಿದೆಯೋ ಎಂದು ಪ್ರಶ್ನೆ ಮಾಡಿದರೆ ಇಲ್ಲವೆನ್ನಲೇಬೇಕು. ಇಲ್ಲಿ ವಾಸಿಸುತ್ತಿರುವ ಸಣ್ಣ ಸಮುದಾಯವೊಂದರ ಯುವಜನತೆ ಉತ್ತಮ ಅವಕಾಶ ಹುಡುಕಿಕೊಂಡು ಬೇರೆಡೆಗೆ ತೆರಳಿದ್ದಾರೆ. ಹೀಗಾಗಿ, ಇಲ್ಲಿ ಇರುವವರು ಕೂಡ ತಮ್ಮ ಮನೆಗಳನ್ನು ಸಿಕ್ಕಿದ ದರಕ್ಕೆ ಮಾರಲು ಮುಂದಾಗಿದ್ದಾರೆ.
ಸತತವಾಗಿ ಉಂಟಾಗುತ್ತಿರುವ ಭೂಕಂಪ ಇಲ್ಲಿನವರ ನೆಮ್ಮದಿ ಕಸಿದುಕೊಂಡಿದೆ. ಈ ನಗರದ ಮೇಯರ್ ಫ್ರಾನ್ಸೆಕೋ ತರ್ತಾಂಗ್ಲಿಯಾ ಊರು ಬಿಟ್ಟು ಹೋದ ಕುಟುಂಬಸ್ಥರು ಮತ್ತು ಸ್ನೇಹಿತರನ್ನು ಹೇಗಾ ದರೂ ಮಾಡಿ ಮತ್ತೆ ಕರೆಯಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.
‘ಇಲ್ಲಿ ನಾವು ವಿಶೇಷ ಸ್ಥಿತಿಯಲ್ಲಿದ್ದೇವೆ. ಇದು ಅತ್ಯಂತ ಪ್ರಾಚೀನ ನಗರ. ಮನೆಗಳೂ ಕೂಡ ಜತೆಯಾಗಿವೆ. ಕೆಲವೊಂದು ಮನೆಗಳಿಗೆ ಇಲ್ಲಿ ಒಂದೇ ಬಾಗಿಲು ಮೂಲಕ ಪ್ರವೇಶ ಮಾಡಲಾಗುತ್ತದೆ’ ಎಂದಿದ್ದಾರೆ ಮೇಯರ್.
2019ರಲ್ಲಿ ಮೆಡಿಟರೇನಿಯನ್ ಸಮುದ್ರ ಪ್ರದೇಶದ ದ್ವೀಪ ಸಮೂಹಗಳಲ್ಲಿ ಒಂದಾಗಿರುವ ಸಂಬುಕಾದಲ್ಲಿ ಕೂಡ ಅದ್ದೂರಿ ಬಂಗಲೆಗಳ ಸಮೂಹವನ್ನೇ 1 ಡಾಲರ್‌ಗೆ ಮಾರುವ ಬಗ್ಗೆ ಘೋಷಣೆ ಮಾಡಿ ಜಗತ್ತಿನಾದ್ಯಂತ ಸುದ್ದಿಯಾಗಿತ್ತು.