Advertisement

ದೇಗುಲದ ಗೋಪುರವೇ ವಲಸೆ ಕಾರ್ಮಿಕರ ಮಕ್ಕಳಿಗೆ ಜ್ಞಾನದೇಗುಲ

10:15 AM Nov 17, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1912 ಶಾಲೆ ಆರಂಭ
ಶಾಲೆ ಪ್ರಾರಂಭದಲ್ಲಿ ಮರಳು-ಮಣ್ಣಿನ ಪಾಠ

ಕಟಪಾಡಿ: ಅಗ್ರಹಾರ ಏಣಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಹೆಚ್ಚಿನ ವಲಸೆ ಕೂಲಿ ಕಾರ್ಮಿಕರ ಮಕ್ಕಳಿಗೆ ಜ್ಞಾನ ದೇಗುಲವಾಗಿರುವುದೇ ವಿಶೇಷತೆ.

1912ರಲ್ಲಿ ಯೇಣಗುಡ್ಡೆ ಕಡವಿನ ಬಾಗಿಲು ಹೊಳೆದಂಡೆಯ ದಾಸ್ತಾನು ಕೊಠಡಿಯಲ್ಲಿ ವೈ. ನಂದ್ಯಪ್ಪ ಹೆಗ್ಡೆ ಅವರಿಂದ ಮರಳು-ಮಣ್ಣಿನ ಪಾಠ ಆರಂಭಗೊಂಡು ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಗೋಪುರದಲ್ಲಿ ಇರುವ ಈ ಶಾಲೆಗೆ ನಿರಂತರ 60 ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿದ್ದರು.  ಮಾಲಿಂಗ ಹೆಗ್ಡೆ, ಕೃಷ್ಣಯ್ಯ ಹೆಗ್ಡೆ ಸ್ಥಾಪಕರಾಗಿದ್ದರು. ಹೊಂಗಾರದ ಬೀಜ(ಪೊಂಗಾರ್‌) ಮತ್ತು ಕರವೀರ ಕಾಯಿಯು ಅಕ್ಷರ ಜ್ಞಾನವನ್ನು ನೀಡುತ್ತಿದ್ದ ದಿನಗಳನ್ನು ಕೆಲವು ಹಳೆ ವಿದ್ಯಾರ್ಥಿಗಳು ಈ ಸಂದರ್ಭ ಸ್ಮರಿಸಿರುತ್ತಾರೆ.

ಉಡುಪಿ ಶ್ರೀ ಕೃಷ್ಣ ಮಠದ ನಂಟು
ಉಡುಪಿ ಶ್ರೀ ಕೃಷ್ಣ ಮಠದಿಂದ ಚಿಣ್ಣರ ಸಂತರ್ಪಣೆಯ ಶ್ರೀ ಕೃಷ್ಣ ಪ್ರಸಾದದ ರೂಪದಲ್ಲಿ ಅಕ್ಕಿಯು ಪ್ರತೀ ತಿಂಗಳು ಈ ಶಾಲೆಗೆ ಬರುತ್ತಿದ್ದು, ಮಕ್ಕಳ ಮಧ್ಯಾಹ್ನದ ಅನ್ನದಾಸೋಹವಾಗುತ್ತಿದೆ. ಸಮವಸ್ತ್ರವೂ ಮಠದಿಂದಲೇ ನೀಡಲಾಗುತ್ತಿದೆ. ಕೃಷ್ಣಜನ್ಮಾಷ್ಟಮಿಯ ಸಂದರ್ಭವೂ ಮುದ್ದುಕೃಷ್ಣ ವೇಷ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನೂ ಶ್ರೀ ಮಠವೇ ನೀಡುತ್ತಿದೆ.

Advertisement

ಮೂಲಭೂತ ಸವಲತ್ತುಗಳು
ಅಕ್ಷರ ದಾಸೋಹ ಕಟ್ಟಡ, ಸುಸಜ್ಜಿತ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹೊಂದಿದ್ದು, ಸ್ವಂತ ಸ್ಥಳವನ್ನು ಹೊಂದಿಲ್ಲ. ದೇಗುಲದ ಗೋಪುರದಲ್ಲಿ ಶಾಲಾ ತರಗತಿ ಕೊಠಡಿಗಳನ್ನು ಹೊಂದಿದೆ.

ಶಾಲೆಯ ವಿವಿಧ ಸಾಧಕರು
ವಿಜಯಾ ಬ್ಯಾಂಕ್‌ನ ಚೇರ್ಮನ್‌ ವೈ.ಎಸ್‌. ಹೆಗ್ಡೆ, ಇಂಡಿಯನ್‌ ಆರ್ಮಿಯ ಬಸಪ್ಪ ಎನ್‌. ಹದಾರಿ, ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರಪೂಜಾರಿ ಮೊದಲಾದವರು ಇದೇ ಕನ್ನಡ ಮಾಧ್ಯಮ

ಶಾಲೆಯಲ್ಲಿ ಕಲಿತವರು.
ಮಾಜಿ ಸಚಿವ ದಿ| ವಸಂತ ವಿ.ಸಾಲ್ಯಾನ್‌ ಹಾಗೂ ರಾಜ್ಯ ಸಚೇತಕರಾಗಿದ್ದ ದಿ|ಭಾಸ್ಕರ ಶೆಟ್ಟಿ ಸಹಿತ ಅನೇಕ ಗಣ್ಯರು ಈ ಶಾಲೆಯೊಂದಿಗೆ ನಿಕಟ ಬಾಂಧವ್ಯ ಇರಿಸಿಕೊಂಡಿದ್ದರು. 2015ರಲ್ಲಿ ಶತಮಾನೋತ್ಸವ ಸಂಭ್ರಮದ ಸಮಾರೋಪ ಕಂಡ ಈ ಶಾಲೆಯು ಹಲವು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುತ್ತದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಬಾಗಲಕೋಟೆಯ ತುರಡಗಿ ಮೂಲದ ನನಗೆ ಹೊರ ಜಿಲ್ಲೆಯಿಂದ ಬಂದರೂ ತಾರತಮ್ಯವೆಸಗದೆ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ಈ ಕನ್ನಡ ಮಾಧ್ಯಮ ಶಾಲೆ ನೀಡಿದೆ. ಇದೀಗ ಇಂಡಿಯನ್‌ ಆರ್ಮಿಯಲ್ಲಿ 18 ವರ್ಷದಿಂದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಶತಮಾನದ ಸಂದರ್ಭ ನನ್ನನ್ನು ಗುರುತಿಸಿ ಸಮ್ಮಾನಿಸಿದ್ದು ಬದುಕಿನ ಸಂತಸದ ಕ್ಷಣಗಳಲ್ಲೊಂದಾಗಿ.
-ಬಸಪ್ಪ ಎನ್‌. ಹದಾರಿ, ಸೈನಿಕ , ಹಳೆ ವಿದ್ಯಾರ್ಥಿ

ಶಾಲಾ ಆಡಳಿತ ಮಂಡಳಿಯ ದಕ್ಷ ಸೇವೆಯಿಂದ ಈ ಶಾಲೆ ಬೆಳೆದು ನಿಂತಿದೆ.ಐವರು ಗೌರವ ಶಿಕ್ಷಕರ ಸಹಿತ ವಿದ್ಯಾರ್ಥಿಗಳಿಗೆ ಉತ್ತಮ ಸವಲತ್ತುಗಳನ್ನು ಆಡಳಿತ ಮಂಡಳಿಯು ಸಮರ್ಥವಾಗಿ ನಿಭಾಯಿಸುತ್ತಿದೆ. 1ರಿಂದ 7ನೇ ತರಗತಿ ವರೆಗೆ ಶೇ.90ರಷ್ಟು ಹೊರ ಜಿಲ್ಲಾ ವಲಸೆ ಕೂಲಿ ಕಾರ್ಮಿಕರ ಮಕ್ಕಳೇ ನಮ್ಮ ವಿದ್ಯಾರ್ಥಿಗಳಾಗಿದ್ದಾರೆ.
-ಕೆ.ಸರೋಜಿನೀ ದೇವಿ,ಮುಖ್ಯೋಪಾಧ್ಯಾಯಿನಿ.

– ವಿಜಯ ಆಚಾರ್ಯ,ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next