ಸಾಮಾನ್ಯವಾಗಿ ಮನೆಗೆ ಅತಿಥಿಗಳು ಬರಲಿದ್ದಾರೆ ಎಂದು ತಿಳಿದಾಕ್ಷಣ ನಮ್ಮೊಳಗೆ ಏನೋ ಒಂದು ರೀತಿಯ ಸಂತೋಷ ಇದ್ದೇ ಇರುತ್ತದೆ. ಅದರಲ್ಲೂ ನೂತನ ಸದಸ್ಯನ ಆಗಮನ ಎಂದರೆ ಹೇಳೋದೆ ಬೇಡ. ಹಾಗೆಯೇ ನಮ್ಮ ಮನೆಗೆ ಒಬ್ಬ ಹೊಸ ಸದಸ್ಯ ಬರುವ ವಿಷಯ ಅಕ್ಕ ನನ್ನ ಬಳಿ ಹೇಳಿದಳು. ಮೊದಲು ಹೇಳುವಾಗ ತಲೆಗೆ ಹೋಗಲೇ ಇಲ್ಲ, ಆಮೇಲೆ ತಿಳಿಯಿತು ಆ ಒಬ್ಬ ಹೊಸ ಸದಸ್ಯ ಯಾರೂ ಅಂತ. ಈ ಸುದ್ದಿ ತಿಳಿದು ನನ್ನ ಖುಷಿಗೆ ಪಾರವೇ ಇರಲಿಲ್ಲ.
ನಮ್ಮ ಚಿಕ್ಕ ಸಂಸಾರಕ್ಕೆ ಮತ್ತೂಂದು ಪುಟ್ಟ ಸದಸ್ಯನ ಆಗಮನ ತಿಳಿಯುತ್ತಿದ್ದಂತೆಯೇ ಎಲ್ಲರೂ ಸಂಭ್ರಮಿಸಲು ಶುರು ಮಾಡಿದರು. ಒಂದು ಎರಡು ಹೀಗೇ ತಿಂಗಳು ಲೆಕ್ಕ ಹಾಕುತ್ತಾ ಖುಷಿಯಲ್ಲೇ ಕಾಲ ಕಳೆದೆವು. ಒಂದು ಕಡೆ ಗಂಡು ಮಗುವಿನ ನಿರೀಕ್ಷೆಯಿದ್ದರೆ ಇನ್ನೊಂದೆಡೆ ಹೆಣ್ಣು ಮಗುವಿನ ನಿರೀಕ್ಷೆ. ಅಕ್ಕ ಮತ್ತು ಭಾವ ಗಂಡು ಮಗು ಎಂದು, ನಾನು ಹೆಣ್ಣು ಎಂದು ಪ್ರತಿದಿನವು ಚರ್ಚೆಗಳು ನಡೆಯುತ್ತಿದ್ದವು. ಚರ್ಚೆ ಎಷ್ಟೇ ದೊಡ್ಡದಿದ್ದರೂ ಅದರ ಫಲಿತಾಂಶ ಖುಷಿಯೇ ಆಗಿತ್ತು…
ಹೇಗೋ ಒಂಭತ್ತು ತಿಂಗಳು ತುಂಬಿತು. ಅಕ್ಕನ ಮಗು ಯಾವಾಗ ಚಿಕ್ಕಿ ಎಂದು ಕೂಗುವುದೋ ಎಂಬ ಕುತೂಹಲದಿಂದ ದಾರಿ ಕಾಯುತ್ತಾ ಇದ್ದೆ. ಎಲ್ಲರೂ ಕಾಯುತ್ತಿದ್ದ ಸುಂದರ ಕ್ಷಣ ಬಂದೇ ಬಿಟ್ಟಿತ್ತು. ಕೊನೆಗೂ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಯಿತು. ಅಕ್ಕಾ ಭಾವ ಆಸೆ ಪಟ್ಟಂತೆ ಗಂಡು ಮಗುವಿನ ಜನನವಾಯಿತು. ಮಗುವಿನ ಜನನದ ಸಂಗತಿಗೆ ಬೇರೆ ಯಾವ ಸಂಗತಿಯೂ ಸರಿಸಾಟಿಯಿಲ್ಲ. ಆ ಮುದ್ದು ಕಂದಮ್ಮನನ್ನು ಕಂಡು ಅಕ್ಕನ ಕಣ್ಣಲ್ಲಿ ಕಣ್ಣೀರು ತುಂಬಿತು. ನಾನಂತೂ ಆಸ್ಪತ್ರೆ ಎಂದೂ ನೋಡದೆ ಸಂತೋಷದಿಂದ ಕುಣಿದಾಡಿಯೇಬಿಟ್ಟೆ.
ಮಗುವೊಂದು ಮನೆಯಲ್ಲಿದ್ದರೆ ಪ್ರತಿದಿನ ಪ್ರತಿಕ್ಷಣ ಮನೆಯಲ್ಲಿ ಸಂತೋಷದ ವಾತಾವರಣ. ಎಷ್ಟೇ ಚಿಂತೆಯಲ್ಲಿದ್ದರೂ ಅವರು ಮಾಡುವಂತಹ ಕಿತಾಪತಿಗೆ ನಾವು ಕೋಪಿಸಿಕೊಳ್ಳುವ ಬದಲು ಅದರಲ್ಲೇ ಸಂತೋಷ ಪಡುತ್ತೇವೆ. ಮಕ್ಕಳೊಡನೆ ನಾವು ಕೂಡ ಮಗುವಾಗಿ ಬಿಡುತ್ತೇವೆ. ಮಗು ಜನಿಸುವವರೆಗೆ ಯಾವ ಮಗು ಎಂಬ ಚರ್ಚೆ ನಡಿಯುತ್ತಿದ್ದ ಮನೆಯಲ್ಲಿ ಮಗುವಿನ ಜನನದ ಬಳಿಕ ಮಗುವಿಗೆ ಯಾವ ಹೆಸರು ಎಂಬ ಮಾತುಕತೆ ಆರಂಭ. ನಾನು ಲಿತ್ವಿಕ್ ಎಂದು ಹೇಳಿದರೆ ಅಕ್ಕ ಭಾವ ಶ್ರೀವತ್ಸ ಅನ್ನುತ್ತಿದ್ದರು.
ಇಬ್ಬರಿಗೂ ಬೇಸರ ಆಗಬಾರದೆಂದು ಎರಡು ಹೆಸರು ಮಗುವಿಗೆ ಇಟ್ಟು ನಾಮಕರಣ ಮಾಡಿದರೂ. ನಿಕ್ ನೇಮ್ ಅಂತ ಸಣ್ಣಕ್ಕ ಡಿಂಪೂ ಎಂದು ಹೊಸದಾಗಿಯೇ ಹೆಸರಿಟ್ಟಳು. ಬೇಸರದ ವಿಷಯವೇನೆಂದರೆ, ನಾನು ಊರಿನಲ್ಲಿ ಇಲ್ಲದ ಕಾರಣ ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿರಲಿಲ್ಲ.
10 ದಿವಸ ಮಗುವನ್ನು ಮುದ್ದಾಡಲು ಆಗದೇ ಹೋಯಿತು. ಹೇಗೋ ಅಷ್ಟು ದಿನ ಕಳೆದು ಮನೆಗೆ ಬಂದೇ ಬಿಟ್ಟೆ. ಬಂದ ಕೂಡಲೇ ನಾನು ಮಾಡಿದ್ದ ಮೊದಲ ಕೆಲಸವೇ ಮಗುವನ್ನ ಮುದ್ದಾಡಿದ್ದು. ಎಲ್ಲೇ ಹೋಗಬೇಕಾದರೂ ಹೋಗುವ ಮೊದಲು ಅವನನ್ನ ಮಾತನಾಡಿಸದೇ ಹೋದರೆ ಆ ದಿನವಿಡೀ ನನಗೆ ಶೂನ್ಯ ಎಂದೆನಿಸುತ್ತಿತ್ತು. ಅವನ ಬಳಿ ಮಾತನಾಡದ ದಿನವೇ ಇಲ್ಲ.
ಅಕ್ಕ ಅವಳ ಗಂಡನ ಮನೆಗೆ ಹೋಗಿದ್ದರೂ ಕೂಡ ಪ್ರತಿದಿನ ವೀಡಿಯೋ ಕಾಲ್ ಮಾಡುವ ಮುಖಾಂತರ ನಮ್ಮಿಬ್ಬರ ಭೇಟಿ ಆಗುತ್ತಲೇ ಇರುತ್ತಿತ್ತು. ಜಾತ್ರೆಯಲ್ಲಿ ಅಲ್ಲಿರುವ ಆಟಿಕೆಗಳನ್ನು ನೋಡಿದಾಗೆಲ್ಲಾ ನನಗೆ ಅವನದೇ ನೆನಪಾಗುತ್ತಿತ್ತು. ಇಲ್ಲಿಯ ತನಕ ಯಾವುದೇ ಆಟಿಕೆ ಖರೀದಿಸಿದ್ದು ನೆನಪಿಲ್ಲ. ಆದರೆ ಈಗ ನಾನು ಹೋಗೋ ಪ್ರತಿ ಜಾತ್ರೆಯಿಂದ ಏನಾದರು ಆಟಿಕೆ ಅವನಿಗೋಸ್ಕರ ತೆಗೆದುಕೊಳ್ಳುವೆ. ಅಂಬೆಗಾಲಿಡಲು ಶುರು ಮಾಡಿದಾಗ ಬಿದ್ದಂತಹ ಕ್ಷಣ ಈಗಲೂ ನನ್ನ ಕಣ್ಣಿಗೆ ಹಚ್ಚೆ ಹಾಕಿದಂತೆ ಗೋಚರವಾಗುತ್ತಿದೆ.
–
ಕೃತಿಕಾ ಕೆ. ಬೆಳ್ಳಿಪ್ಪಾಡಿ