ಚನ್ನಗಿರಿ: ಮರಾಠ ಸಮಾಜದಲ್ಲಿ ಹುಟ್ಟಿದ್ದ ಶಹಾಜಿ ರಾಜೇ ಭೋಸ್ಲೆ ಒಂದು ಜಾತಿಗೆ ಸೀಮಿತರಾಗದೇ ಇಡಿ ಹಿಂದೂ ಸಮಾಜದ ಪ್ರತಿಪಾದಕರಾಗಿದ್ದಾರೆ. ಆದ್ದರಿಂದ ಹೊದಿಗೆರೆಯಲ್ಲಿರುವ ಶಹಾಜಿ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕಗೊಳಿಸಲು ಹೋರಾಟದ ಅವಶ್ಯವಿದೆ ಎಂದು ಬೆಂಗಳೂರಿನ ಗವಿಪುರಂ ಗೋಸಾಯಿ ಮಹಾಸಂಸ್ಥಾನ ಮಠ, ಶ್ರೀ ಭವಾನಿ ಪೀಠದ ಮಂಜುನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊದಿಗೆರೆಯಲ್ಲಿ ಬುಧವಾರ ಶ್ರೀ ಶಹಾಜಿ ರಾಜೇ ಭೋಸ್ಲೆ ಅವರ 355ನೇ ಪುಣ್ಯರಾಧನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಶಹಾಜಿ ಮಹಾರಾಜರು ಮತ್ತು ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅಂಥವರ ಸ್ಮಾರಕಗಳ ಅಭಿವೃದ್ಧಿ ಮತ್ತು ಸಮಾಜ ಸಂಘಟಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಶಹಾಜಿ ಮಹಾರಾಜರ ಸಮಾಧಿ ಸ್ಥಳವಿದ್ದರೂ ಸಮರ್ಪಕ ಸೌಲಭ್ಯಗಳಿಲ್ಲ. ಇದನ್ನು ಅಭಿವೃದ್ಧಿಪಡಿಸುವ ಮೂಲಕ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಸರ್ಕಾರಗಳು ಮುಂದಾಗಬೇಕು ಎಂದು ಆಗ್ರಹಿಸಿದರು.
ಮರಾಠ ಸಮಾಜ ಬಾಂಧವರು ಸಾಮಾಜಿಕ, ಆರ್ಥಿಕ, ಶೈಕ್ಷಣಿವಾಗಿ ಮುಂದುವರಿಯಲು ಸಮಾಜ ಸಂಘಟನೆಯ ಮುಖಂಡರು ಸೌಲಭ್ಯಗಳನ್ನು ದೊರಕಿಸಬೇಕು. ಅದಕ್ಕೆ ಪೂರಕವಾಗಿ ಸಮಾಜದ ಯುವಕರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಶಹಾಜಿ ರಾಜೇ ಭೋಸ್ಲೆ ಹಿಂದೂ ಸಮ್ರಾಜ್ಯವನ್ನು ಸಂಘಟಿಸಲು ಅನೇಕ ಯುದ್ಧಗಳನ್ನು ಮಾಡಿದ್ದಾರೆ. ಇಂತಹ ವೀರ ಸೇನಾನಿಗಳ ಸಮಾಧಿ ರಾಜ್ಯದಲ್ಲಿದ್ದರೂ ಅಭಿವೃದ್ಧಿ ಕಾಣದೇ ಇರುವುದು ನಮ್ಮ ದುರಾದೃಷ್ಟ. ಮರಾಠ ಕನ್ನಡಿಗರು ಈ ಕುರಿತು ಅವಲೋಕನ ನಡೆಸಿ ಸಮಾಧಿ ಅಭಿವೃದ್ಧಿಗೆ ಕ್ರಮವನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಶಹಾಜಿ ರಾಜೇ ಭೋಸ್ಲೆ ಸ್ಮಾರಕ ಮತ್ತು ಅಭಿವೃದ್ಧಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ವೈ. ಮಲ್ಲೇಶ್, ವಿಠ್ಠಲರಾವ್ ಗಾಯಕ್ವಾಡ್, ಸುರೇಶ್ ಶಾಟೆ, ಮಾರುತಿರಾವ್ ಮೊಳೆ, ಯಶವಂತರಾವ್ ಜಾಧವ್, ಶ್ಯಾಮಸುಂದರ್, ಶ್ರೀಕಾಂತ್ ಚವ್ಹಾಣ್, ನಟ ಗಣೇಶ್, ಕುಬೆಂದ್ರೋಜಿರಾವ್, ಮತ್ತಿತರರಿದ್ದರು.