Advertisement

ಶೌಚಗೃಹಕ್ಕಿಲ್ಲ ಉದ್ಘಾಟನೆ ಭಾಗ್ಯ

11:44 AM May 26, 2019 | Team Udayavani |

ಬಂಕಾಪುರ: ಕೇಂದ್ರ ಸರ್ಕಾರ ಸ್ವಚ್ಛ ಭಾರತ್‌ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗಬೇಕು. ಬಯಲು ಶೌಚಮುಕ್ತ ಹಳ್ಳಿಗಳ ನಿರ್ಮಾಣಕ್ಕೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಒಂದು ಕಡೆಯಾದರೆ, ಶೌಚಗೃಹ ನಿರ್ಮಿಸಿ ವರ್ಷವಾದರೂ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸದೆ ಸರ್ಕಾರದ ಉದ್ದೇಶ ಈಡೇರಿಸುವಲ್ಲಿ ಅಧಿಕಾರಿಗಳು ವಿಫಲವಾಗುತ್ತಿದ್ದಾರೆ ಎನ್ನುವುದಕ್ಕೆ ಇದು ಕೈಗನ್ನಡಿ.

Advertisement

ದೀಪದ ಕೆಳಗೆ ಕತ್ತಲೆ ಎನ್ನುವಂತೆ ಪುರಸಭೆಯಿಂದ ಕೂಗಳತೆ ದೂರದಲ್ಲಿ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ 5.5 ಲಕ್ಷ ರೂ. ಅನುದಾನದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಗೊಂಡು ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ನೀಡಲು ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವುದು ವಿಪರ್ಯಾಸ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಟ್ಟಣಗಳ ಸ್ವಚ್ಛತೆಗೆ ಕೋಟ್ಯಾಂತರ ರೂ. ಅನುದಾನ ಬಿಡುಗಡೆಗೊಳಿಸಿ ಬಯಲು ಬಹಿರ್ದೆಸೆ ಮುಕ್ತ ಪಟ್ಟಣವನ್ನಾಗಿಸಲು ವೈಯಕ್ತಿಕ ಶೌಚಾಲಯಕ್ಕೆ ಧನ ಸಹಾಯ, ಸಾರ್ವಜನಿಕರ ಬಳಕೆಗೆ ಶೌಚಾಗೃಹ ನಿರ್ಮಾಣಕ್ಕೆ ಹಣ ವ್ಯಯ ಮಾಡುತ್ತಿದೆ. ಆದರೆ, ಪುರಸಭೆ ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಲಕ್ಷಾಂತರ ರೂ. ವ್ಯಯಿಸಿ ನಿರ್ಮಾಣಗೊಂಡಿರುವ ಕಟ್ಟಡ ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಸರ್ಕಾರದ ಯೋಜನೆಗಳು ಯಶಸ್ವಿಯಾಗುತ್ತಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣ 30 ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆ ಹೊಂದಿದ್ದು, 35 ಹಳ್ಳಿಗಳ ನಿಕಟ ಸಂಪರ್ಕವನ್ನು ಹೊಂದಿದೆ. ಪ್ರತಿ ಮಂಗಳವಾರ ಸಂತೆ ನಡೆಯುತ್ತಿದ್ದು, ಸಂತೆಗೆಂದು ಬಂದ ಜನತೆಗೆ, ವ್ಯಾಪಾರಸ್ಥರಿಗೆ, ಶೌಚಕ್ಕೆ ಎತ್ತ ಹೋಗಬೇಕು ಎನ್ನುವುದು ತಿಳಿಯದೆ ಅನಿವಾರ್ಯವಾಗಿ ಬಯಲೇ ಗತಿ ಎನ್ನುವಂತಾಗಿದೆ. ಇನ್ನು ಹರಿಜನಕೇರಿಯ ಹಳೆ ಖಸಾಯಿಖಾನೆ ಹಿಂಭಾಗದಲ್ಲಿ ನಿರ್ಮಿಸಲಾದ ಪಟ್ಟಣದ ಏಕೈಕ ಸಾರ್ವಜನಿಕ ಶೌಚಾಲಯವೂ ನಿರ್ವಹಣೆಯಿಲ್ಲದೆ ಬೀಗ ಜಡಿಯಲಾಗಿದೆ. ಹೀಗಾಗಿ ಹರಿಜನಕೇರಿಯಲ್ಲಿರುವ ಬಹುತೇಕ ಕುಟುಂಬಗಳು ಈಗಲೂ ಬಯಲು ಶೌಚ ಅವಲಂಬಿಸಿವೆ.

ವಿವಿಧ ಕೆಲಸ ಕಾರ್ಯಗಳಿಗೆ ಹಳ್ಳಿಗಳಿಂದ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಮಹಿಳೆಯರಿಗೆ ಅನಾನೂಕುಲವಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕ ಶೌಚಗೃಹಗಳನ್ನು ಬಳಕೆಗೆ ಮುಕ್ತಗೊಳಿಸಬೇಕೆಂಬುದು ಸಾರ್ವಜನಿಕರ ಆಶಯ.

Advertisement

•ಸದಾಶಿವ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next