ದಾವಣಗೆರೆ: ಧೂಮಪಾನ ಮುಕ್ತ ನಗರ… ಎಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶುಕ್ರವಾರ ಜಿಲ್ಲಾ ತಂಬಾಕು ನಿಯಂತ್ರಣ ತಂಡ ನಗರದ ವಿವಿಧ ಭಾಗದಲ್ಲಿ ದಾಳಿ ನಡೆಸಿ, ಒಟ್ಟಾರೆ 18 ಪ್ರಕರಣ ದಾಖಲಿಸಿ, 1,750 ರೂಪಾಯಿ ದಂಡ ವಸೂಲು ಮಾಡಿದೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಪೊಲೀಸ್ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆ, ಮಹಾನಗರ ಪಾಲಿಕೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಧಿಕಾರ ಸಹಯೋಗದೊಂದಿಗೆ ದಾಳಿ ಕಾರ್ಯಾಚರಣೆ ನಡೆದಿದೆ.
ಗುಂಡಿ ಮಹಾದೇವಪ್ಪ ವೃತ್ತ, ಬಾಪೂಜಿ ಹಾಸ್ಟೆಲ್ ಮತ್ತು ಬಿಐಇಟಿ ಕಾಲೇಜಿನ ಸುತ್ತಮುತ್ತಲಿನ ಹೊಟೇಲ್ ,ಬಾರ್ ಮತ್ತು ರೆಸ್ಟೋರೆಂಟ್, ಪಾನ್ ಶಾಪ್, ಬಸ್ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಸೇವಿಸುವವರ ವಿರುದ್ಧ ಒಟ್ಟು 18 ಪ್ರಕರಣ ದಾಖಲಿಸಿಕೊಂಡು 1,.750 ರೂಪಾಯಿ ದಂಡ ವಸೂಲು ಮಾಡಲಾಗಿದೆ.
ಧೂಮಪಾನ ನಿಷೇಧದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ಅಂಗಡಿ ಮಾಲಿಕರಿಗೆ ತಾಕೀತು ಮಾಡಲಾಯಿತು. ಕೋಟ್ಪಾ ಕಾಯಿದೆಯ ಸೆಕ್ಷನ್ 6ಎ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರುವುದು ಹಾಗೂ ಮಕ್ಕಳಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡಿಸುವುದನ್ನು ನಿಷೇಧಿಸಿರುವುದರ ಬಗ್ಗೆ ಹಾಗೂ ಶಾಲಾ ಕಾಲೇಜು,
ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಿರುವುದು, ಸೆಕ್ಷನ್ 4 ರ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧ ಮತ್ತು ತಂಬಾಕು ಉತ್ಪನ್ನಗಳ ಪ್ಯಾಕ್‌ಗಳ ಮೇಲೆ ಎಚ್ಚರಿಕೆ ಚಿನ್ನೆ ಇಲ್ಲದೆ ಮಾರಾಟ ಮಾಡುವುದನ್ನು ನಿಷೇಧ ಇರುವ ಬಗ್ಗೆ ತಂಡದ ಸದಸ್ಯರು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ನೇತೃತ್ವದ ತಂಡದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಗಂಗಾಧರ್, ತಂಬಾಕು ನಿಯಂತ್ರಣ ತಂಡದ ವಿಭಾಗೀಯ ಸಂಯೋಜಕ ಮಹಾಂತೇಶ್, ಆರೋಗ್ಯ ನಿರೀಕ್ಷಕರಾದ ಆರ್. ಪಿ. ಕುಪಸ್ತ, ಆನಂದಮೂರ್ತಿ, ಲೋಕೇಶ್, ಓಂಕಾರಯ್ಯ, ರಾಚಪ್ಪ, ಶಿಕ್ಷಣ ಇಲಾಖೆಯ ಜಿ. ಪ್ರಕಾಶ್, ಪೊಲೀಸ್ ಸಿಬ್ಬಂದಿ ಇದ್ದರು.