ಕಲಬುರಗಿ: ಹತ್ತು ದಿನಗಳ ಹಿಂದೆ ಅಕ್ಟೋಬರ್ 22ರಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ವೈಜನಾಥ ಪಾಟೀಲ ಅವರನ್ನು ಭೇಟಿಯಾದಾಗ, 371ನೇ (ಜೆ) ವಿಧಿ ಪರಿಣಾಮಕಾರಿ ಜಾರಿಗೆ ಸಂಬಂಧಿಸಿಂದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಣಬೇಕು.
ಜತೆಗೆ ದಿಲ್ಲಿಗೆ ಹೋಗಿ ಚಿಂಚೋಳಿ ಸಕ್ಕರೆ ಕಾರ್ಖಾನೆಸಂಬಂಧ ಸಚಿವರನ್ನು ಹಾಗೂ ಸುಪ್ರಿಂಕೋರ್ಟ್ ವಕೀಲರನ್ನು ಬೇಟಿಯಾಗಬೇಕಿದೆ ಎಂದಿದ್ದರು. ಆದರೆ ಅವರೇ ಶನಿವಾರ ಕಾಣದ ಲೋಕಕ್ಕೆ ಹೋಗಿದ್ದಾರೆ. ಸಾವಿನ ದಿನಗಳಲ್ಲೂ ವೈಜನಾಥ ಪಾಟೀಲರ ಮನ ಈ ಭಾಗದ ಅಭಿವೃದ್ಧಿಗೆ ಮಿಡಿಯುತ್ತಿತ್ತು ಎನ್ನುವುದನ್ನು ಇದು ನಿರೂಪಿಸುತ್ತದೆ. ಕೆಲವು ವರ್ಷಗಳಿಂದ ನಡೆಯಲು ಬಾರದಿದ್ದರೂ ವ್ಹಿಲ್ ಚೇರ್ ಮೇಲೆ ಬಂದು ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದರು ವೈಜನಾಥ ಪಾಟೀಲ.
ಇದನ್ನು ಗಮನಿಸಿದರೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂತಹ ಹೋರಾಟಗಾರ ಮತ್ತೆ ಸಿಗಲಿಕ್ಕಿಲ್ಲ ಎನಿಸದೇ ಇರದು. 371(ಜೆ) ವಿಧಿ ತಿದ್ದುಪಡಿಗಾಗಿ ಮಾಜಿ ಸಚಿವ ವಿಶ್ವನಾಥ ಪಾಟೀಲ ಮುದ್ನಾಳ, ಮಾಜಿ ಶಾಸಕ ಹಣಮಂತರಾವ ದೇಸಾಯಿ, ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ, ಗುರುಶಾಂತ ಪಟ್ಟೇದಾರ, ಡಾ| ರಾಜು ಕುಳಗೇರಿ ಮತ್ತಿತತರ ನಾಯಕರೊಂದಿಗೆ ನೆರೆಯ ಮಹಾರಾಷ್ಟ್ರದ ವಿದರ್ಭ, ಆಂಧ್ರಪ್ರದೇಶದ ತೆಲಂಗಾಣ ಪ್ರದೇಶಗಳಿಗೆ ಹೋಗಿ 371(ಜೆ) ಜಾರಿ ವಿಧಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಅಧ್ಯಯನ ಕೈಗೊಂಡು ಹೈದ್ರಾಬಾದ ಕರ್ನಾಟಕ ಭಾಗಕ್ಕೂ ವಿಧಿ ಜಾರಿಯಾಗಬೇಕೆಂದು ಸದನದ ಒಳಗೆ ಹಾಗೂ ಹೊರಗೆ ಕೊಪ್ಪಳದಿಂದ ಹಿಡಿದು ಬೀದರ್‌ವರೆಗೂ ಚಳವಳಿ ರೂಪಿಸಿದರು. ಎರಡು ದಶಕಗಳಿಗೂ ಅಧಿಕ ಕಾಲ ಹೋರಾಟ ಮುನ್ನಡೆಸಿಕೊಂಡು ಬಂದು, ಕೊನೆಗೆ ಜಾರಿಯಾಗುವತ್ತ ಶ್ರಮಿಸಿದರು. ಜಾರಿಯಾದ ನಂತರವೂ ಕೆಲವು ಲೋಪ-ದೋಷಗಳ ವಿರುದ್ಧವೂ ಬೀದಿಗಿಳಿಯಲು ಹಿಂದೇಟು ಹಾಕಲಿಲ್ಲ.
ಇತ್ತೀಚೆಗೆ 371(ಜೆ) ವಿಧಿ ಮೀಸಲಾತಿ ಉಲ್ಲಂಸಿ ಗ್ರಾಮ ಪಂಚಾಯಿತಿ ಡಾಟಾ ಆಪರೇಟರ್‌ಗಳ ಹುದ್ದೆಗಳನ್ನು ನೇರವಾಗಿ ಕರೆದಿರುವ ವಿರುದ್ಧ ರೊಚ್ಚಿಗೆದ್ದು ಈ ಭಾಗಕ್ಕೆ ನ್ಯಾಯ ಕಲ್ಪಿಸಿದರು. ಸಮಾಜವಾದಿ ನಾಯಕ, ತದನಂತರ ಜನತಾ ಪರಿವಾರ ನಾಯಕರೆಂದು ಗುರುತಿಸಿಕೊಂಡಿದ್ದ ವೈಜನಾಥ ಪಾಟೀಲ ಅವರದ್ದು ರಾಜಕೀಯದಲ್ಲಿ ತಮ್ಮದೇಯಾದ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಯಾವುದೇ ಕಾರಣಕ್ಕೂ ರಾಜೀಯಾಗದ ಹಾಗೂ ಇದ್ದುದ್ದನ್ನು ಇದ್ದ ಹಾಗೆ ಹೇಳುವ ದಿಟ್ಟ ರಾಜಕಾರಣಿ ಆಗಿದ್ದರು.
ರಾಜೀನಾಮೆ ನೀಡಿದ ಮೊದಲ ರಾಜಕಾರಣಿ: ಹಿಂದಿನ ಹೈದ್ರಾಬಾದ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಗೆ ಆಗ್ರಹಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈ ಭಾಗದ ಮೊದಲ ರಾಜಕಾರಣಿ ವೈಜನಾಥ ಪಾಟೀಲ ಅವರು. 1984ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ತೋಟಗಾರಿಕ ಸಚಿವರಾಗಿದ್ದ ವೈಜನಾಥ ಪಾಟೀಲ ಅವರು ಸರ್ಕಾರ ಹೈದ್ರಾಬಾದ ಕರ್ನಾಟಕ ಭಾಗವನ್ನು ಕಡೆಗಣಿಸಲಾಗುತ್ತಿದೆ. ಎಚ್‌ಕೆಆರ್‌ಡಿಬಿ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ವಾಪಸ್ಸು ಪಡೆಯದೇ ಬೇಡಿಕೆಗೆ ಅಂಟಿಕೊಂಡಿದ್ದರಲ್ಲದೇ ಹೋರಾಟ ಮುಂದುವರಿಸಿದರು. ಈ ಪರಿಣಾಮವೇ ಈ ಭಾಗದ ಪ್ರದೇಶಾಭಿವೃದ್ಧಿ ಮಂಡಳಿ ರಚನೆಗೆ ಚಾಲನೆ ಸಿಕ್ಕಿತಲ್ಲದೇ, ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚನೆಗೂ ನಾಂದಿ ಹಾಡಿತು. ಪ್ರೊ| ನಂಜುಂಡಪ್ಪ ವರದಿಯಲ್ಲಿಯೂ 371(ಜೆ) ವಿಧಿಜಾರಿಯಾಗಬೇಕೆಂಬ ಶಿಫಾರಸು ಮಾಡುವಲ್ಲಿ ವೈಜನಾಥ ಪಾಟೀಲರ ಒತ್ತಡ ಹಾಗೂ ಹೋರಾಟತವನ್ನು ಯಾರೂ ಮರೆಯುವಂತಿಲ್ಲ. ಒಂದುವರೆ ತಿಂಗಳು ಅಂದರೆ ಕಳೆದ ಸೆಪ್ಟೆಂಬರ್ 22ರಂದು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ “ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವೈಜನಾಥ್ ಪಾಟೀಲ ಅವರು ಜೀವನ ಹಾಗೂ ಹೋರಾಟದ ಕುರಿತಾಗಿ ಒಂದುವರೆ ಗಂಟೆಗೂ ಅಧಿಕ ಕಾಲ ಸುಧೀರ್ಘವಾಗಿ ಮಾತನಾಡಿದ್ದರು. ಆದರೆ ಇಷ್ಟು ಬೇಗ ಜೀವನದ ಇತಿಹಾಸದಿಂದ ಮರೆಯಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.
-ಹಣಮಂತರಾವ ಭೈರಾಮಡಗಿ