Advertisement
ಎಲ್ಲರೂ “ಕಾಲ ಬದಲಾಗಿದೆ’ ಅನ್ನುತ್ತಾರೆ. ಆದರೆ ನಿಜವಾಗಿಯೂ ಬದಲಾಗಿರುವುದು, ಬದಲಾಗುತ್ತಿರುವುದು ನಾವು, ನಮ್ಮ ಮನಸ್ಸು, ನಾವು ಯೋಚಿಸುವ ರೀತಿ, ನಮ್ಮ ಬದುಕು ಎಂದರೊಬ್ಬರು ಆತ್ಮೀಯರು. ಯುಗವೊಂದು ಬದಲಾಗುವಾಗ ಅಲ್ಲಿನ ಎಲ್ಲ ವಿದ್ಯಮಾನಗಳೂ ಬದಲಾಗುತ್ತವೆಯಂತೆ.
Related Articles
ಇದೆಲ್ಲವೂ ನೆನಪಾದದ್ದು ಸಂಕ್ರಾಂತಿಯ ನೆಪದಲ್ಲಿ. ಕೃಷಿ ಚಟುವಟಿಕೆಗಳನ್ನಾಧರಿಸಿ ರೂಪುಗೊಂಡ ಹಬ್ಬವೊಂದು ಅಬ್ಬರವಾಗಿ ಬದಲಾಗಿದೆ. ಅದೊಂದೇ ಹಬ್ಬವಲ್ಲ, ನಮ್ಮ ಎಲ್ಲ ಆಚರಣೆಗಳೂ ಬದಲಾಗಿವೆ. ಉತ್ತು ಬಿತ್ತಿದ ಪ್ರಯುಕ್ತ ಭೂಮಿತಾಯಿ ಯಥೇತ್ಛ ಫಸಲನ್ನು ಕೊಟ್ಟ ಸಂಭ್ರಮದಲ್ಲಿ ಭೂ ತಾಯಿಗೂ, ಕೊಟ್ಟಿಗೆಯಲ್ಲಿನ ಜಾನುವಾರುಗಳಿಗೂ ಸಲ್ಲಬೇಕಾದ ಕೃತಜ್ಞತೆಯನ್ನು ಸಲ್ಲಿಸುವ ನಿಟ್ಟಿನಲ್ಲೇ ಆಚರಣೆಗೆ ಬಂದ ಹಬ್ಬ ಸಂಕ್ರಾಂತಿ. ಹಿರಿಯರು ಮಾಡಿದ್ದೆಲ್ಲವಕ್ಕೂ ಸ್ಪಷ್ಟ ಕಾರಣ ಇದೆ ಎಂಬುವವರು ಹಬ್ಬಕ್ಕೂ ವೈಜ್ಞಾನಿಕ ನೆಲೆಗಟ್ಟನ್ನು ಸೂಚಿಸಿದ್ದಾರೆಂಬುದೂ ನಿಜ.
Advertisement
ಬದಲಾದ ಹಬ್ಬಗಳುಆದರೆ, ಇಂದಿನ ಹಬ್ಬದ ಉತ್ಸಾಹವೇ ಬೇರೆ. ಹಬ್ಬಕ್ಕೆ ಹೊಸಬಟ್ಟೆ ತೆಗೆದುಕೊಂಡ್ರಾ ಎಂಬ ಪ್ರಶ್ನೆಯನ್ನು ವರ್ಷದ ಎಷ್ಟು ಹಬ್ಬಗಳಲ್ಲಿ ಕೇಳಿಸಿಕೊಂಡಿರುತ್ತೇವೋ ನಮಗೇ ಗೊತ್ತಿಲ್ಲ. ಪ್ರತಿ ಹಬ್ಬಕ್ಕೂ ಹೊಸದೇ ಆಗಬೇಕೆಂಬ ಅಲಿಖೀತ ನಿಯಮವೊಂದು ನಮ್ಮನ್ನು ಆವರಿಸಿಕೊಂಡದ್ದು ಅದು ಯಾವಾಗಲೋ? ವರ್ಷಗಳು ಉರುಳಿದಂತೆ ನಮ್ಮ ಸುತ್ತಲಿನ ಜನ ಶ್ರೀಮಂತರಾದರೋ, ಬದುಕೇ ಅವರನ್ನು ಹಾಗೆ ಬದಲಾಯಿಸುವುದೋ ಅರ್ಥವಾಗದ ವಿಚಾರ. ನಾಳೆಗೆ ಅನ್ನದ ದಾರಿ ನೋಡಬೇಕಷ್ಟೇ ಎಂಬಂತೆ ಬದುಕುವವರೂ ಕೂಡಾ, ಹಬ್ಬ ಎಂದಾಕ್ಷಣ ಸಾವಿರಾರು ರೂಪಾಯಿಗಳನ್ನು ಸುರಿಯುವ ಉತ್ಸಾಹದಲ್ಲಿರುತ್ತಾರೆ. ಸಂಭ್ರಮ ಇರಬೇಕು ದಿಟ. ಆದರೆ ಒಲ್ಲದ ಮನಸ್ಸಿನಿಂದ ಕರೆಯಲೇ ಬೇಕಾದ ಬಾಂಧವರನ್ನು ಕರೆಯುವ ಪರಿಯೊಂದೆಡೆಯಾದರೆ, ಅಬ್ಟಾ! ಈ ಹಬ್ಬಗಳು ಯಾಕಾದ್ರೂ ಬರುತ್ತವೋ..ಒಂದಿಷ್ಟೂ ಬಿಡುವು ಸಿಗಲ್ಲ. ಬೆಳಗ್ಗೆ ಅಡುಗೆ ಮನೆ ಸೇರಿದರೆ ಮಧ್ಯಾಹ್ನದವರೆಗೂ ಆಚೆ ಬರೋದಕ್ಕೇ ಸಮಯ ಆಗಿಲ್ಲ ಎಂಬ ಉದ್ಗಾರದೊಂದಿಗಲ್ಲ. (ಹಾಗೆ ಹೇಳುವವರ ವಾಟ್ಸ್‌ಆ್ಯಪ್‌ನ ಸ್ಟೇಟಸ್ ಗಮನಿಸಿದರೆ ಸತ್ಯಾಂಶದಲ್ಲಿ ಕೊಂಚ ವ್ಯತ್ಯಾಸ ಇದ್ದರೂ ಇದ್ದೀತು!) ಕೂಡು ಕುಟುಂಬಗಳಲ್ಲಿ ಜೀವನ ನಡೆಯುತ್ತಿದ್ದ ಸಮಯದಲ್ಲಿ ಜವಾಬ್ದಾರಿಗಳೂ ಹಂಚಿ ಹೋಗುತ್ತಿದ್ದವು. ಎಲ್ಲರೂ ಸೇರಿ ಹಬ್ಬ ಮಾಡುವುದರಲ್ಲಿ ನಿಜವಾದ ಉಲ್ಲಾಸವೂ ಇದ್ದಿರಬಹುದು. ಇಂದು ಮನೆಮನೆಗಳಲ್ಲಿ ಪುಟ್ಟ ಪುಟ್ಟ ಕುಟುಂಬಗಳು. ಸದ್ಯ ಇನ್ನಾರೋ ಆಹ್ವಾನಿಸಿದರೆ ಸಾಕು, ಮನೆಯಲ್ಲಿ ಅಡುಗೆ ಮಾಡ್ಕೊಳ್ಳೋದು ತಪ್ಪುತ್ತೆ ಎಂಬ ನಿರಾಳತೆ ಕೆಲವರಿಗೆ! ಆದರೆ ತಮಾಷೆಯೆನಿಸುವುದು ಏನೆಂದರೆ, ಹಬ್ಬದ ಹೆಸರಲ್ಲಿ ದೇವರೆದುರು ಇಡಲು ರಾಶಿಗಟ್ಟಲೆ ಖಾದ್ಯಗಳನ್ನು ಮಾಡುವುದು. ಪ್ರತಿಷ್ಠೆ ತೋರಿಸಿಕೊಳ್ಳಲು ಎಳ್ಳು-ಬೆಲ್ಲದ ಪ್ಯಾಕ್‌ಗೆ ಸಕ್ಕರೆ ಅಚ್ಚು ಹಾಕುವುದು, ಅದನ್ನು ಪಡೆದವರು ಅವನ್ನು ತಿನ್ನಲೂ ಆಗದೇ, ಎಸೆಯಲೂ ಆಗದೇ ಒದ್ದಾಡುವುದು! ಅವರಿಗಿಂತ ನಾವು ಕೊಟ್ಟ ಎಳ್ಳು-ಬೆಲ್ಲವೇ ಚೆನ್ನಾಗಿತ್ತು ಎಂದು ಕೊಚ್ಚಿಕೊಳ್ಳುವುದು… ಮನೆಮನೆಯ ಕಥೆ ಇದೇ ಅಲ್ಲವೇ?
ದೇವರನ್ನೂ, ಮನೆಯನ್ನೂ ಸಿಂಗರಿಸುವ ಪರಿಯನ್ನು ಕೇಳಲೇಬೇಡಿ. ತಂದಷ್ಟೂ ಹೂವು ಸಾಲದು. ಒಂದು ದಳ ಶ್ರೀತುಳಸಿಯಿಂದ ತೃಪ್ತನಾಗುವ ಕೃಷ್ಣನಂತೆಯೇ ಅಲ್ಲವೇ ಇತರ ದೇವರುಗಳೂ ಕೂಡಾ? ನಮ್ಮ ನಮ್ಮ ಮನೆಯ ಅಂಗಳದಲ್ಲೋ, ಹೂಕುಂಡಗಳಲ್ಲೋ ಬೆಳೆದ ಹೂವುಗಳು ಸಾಲವು, ದೇವರಿಗಲ್ಲ, ನಮಗೆ. ಅದೇ ತಾನೇ ಅರಳಿದ ನಾಲ್ಕಾರು ಹೂವುಗಳಲ್ಲಿ, ಪುಟ್ಟ ದೀಪಗಳ ಮಿಣುಕು ಬೆಳಕಲ್ಲಿ ಕಾಣಬಹುದಾದ ದೇವರ ಮನೆಯ ಮಂದಹಾಸ ಮಾರುಗಟ್ಟಲೆ ಹೂವಿನಲಂಕಾರದಲ್ಲಿ ಮರೆಯಾಗುವಂತೆ ಮಾಡಿದವರಾರು? ಹಾಗೆ ನೋಡಿಕೊಂಡರೆ ಈ ಸಂಭ್ರಮವೆಲ್ಲ ನಿಜವಾದದ್ದೇ ಎಂಬ ಯೋಚನೆ ನನ್ನನ್ನು ಕಾಡುವುದಿದೆ. ಹಬ್ಬಕ್ಕೆ ತಾನು ಬಯಸಿದ ಸೀರೆಯ ಬದಲು, ಸ್ವಲ್ಪ ಕಡಿಮೆ ಮೊತ್ತದ್ದು ಕೊಡಿಸಿದನೆಂದು ಗಂಡನ ಮೇಲೆ ಮುನಿದುಕೊಂಡು, ಮನೆಮಂದಿಯ ಮೇಲೆ ಸಿಟ್ಟಾಗಿಕೊಂಡು ಮಾಡುವ ಹಬ್ಬದಲ್ಲಿ ನಿಜಕ್ಕೂ ತೃಪ್ತರಾಗುವುದು ಯಾರು? ಹಬ್ಬಕ್ಕೆ ತವರಿನಿಂದ ಏನೂ ಕೊಡಲಿಲ್ಲವೆಂದು ಕೊರಗುವುದು, ಅತ್ತೆ-ಮಾವನ ಮೇಲೆ ಅಳಿಯ ಮುನಿಸಿಕೊಳ್ಳುವುದು ಸೋಜಿಗವಲ್ಲವೇ? ಹಬ್ಬಗಳ ಹೆಸರಿನಲ್ಲಿ ದುಬಾರಿ ಉಡುಗೆಗಳನ್ನೂ ತೊಡುತ್ತಾ, ಉಡುಗೊರೆಗಳನ್ನೂ ಕೊಡುತ್ತಾ ತೆಗೆದುಕೊಳ್ಳುತ್ತಾ ಹಬ್ಬ ಬಂತೆಂದರೆ ಅಕೌಂಟೆಲ್ಲ ಖಾಲಿ ಎಂಬಲ್ಲಿಗೆ ನಮ್ಮ ಆಚರಣೆಯ ಪಥ ಯಾವ ದಿಕ್ಕಿಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಬ್ಬ, ಹಬ್ಬವಾಗಿಲ್ಲ
ನಮ್ಮ ಬದುಕಿನ ಸಂಸ್ಕೃತಿಯನ್ನು ಕಟ್ಟಿಕೊಟ್ಟವರು ಹಳ್ಳಿಯ ಜನರಾಗಿದ್ದ ನಮ್ಮ ಪೂರ್ವಜರು. ಮನರಂಜನೆಗೂ ಬೇರೊಂದು ಮಾಧ್ಯಮವಿಲ್ಲದ ಕಾಲಕ್ಕೆ ಈ ಹಬ್ಬಗಳೆಲ್ಲ ನಿಜಾರ್ಥದಲ್ಲಿ ಹಬ್ಬಗಳಾಗಿದ್ದವು. ಇಂದು ಆಡಂಬರಕ್ಕಾಗಿ ಹಬ್ಬವೆಂಬ ವಾತಾವರಣ. “ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ಸಂದೇಶದಲ್ಲಿ ಮನಸ್ಸುಗಳನ್ನು ಬೆಸೆಯುವ ಮಿಡಿತವಿತ್ತು. ಇಂದು ಸೀರಿಯಲ್ಲುಗಳು ಜನರನ್ನು ಅನುಕರಣೆ ಮಾಡುತ್ತಿವೆಯೋ ಅಥವಾ ಜನರು ಸೀರಿಯಲ್ಲುಗಳನ್ನು ಅನುಕರಣೆ ಮಾಡುತ್ತಿದ್ದಾರೋ ಅರ್ಥವಾಗದ ಪರಿಸ್ಥಿತಿ. ಎಲ್ಲಾ ಧಾರಾವಾಹಿಗಳಲ್ಲೂ ಈ ವಾರ ಪೂರ್ತಿ ಸಂಕ್ರಾಂತಿ ಹಬ್ಬ ನೋಡಬೇಕಾಗಬಹುದು, ಹಾಗೇ ನಮ್ಮ ಸುತ್ತಮುತ್ತಲೂ! ಹಳ್ಳಿಯ ಒಂಟಿಮನೆಯಲ್ಲಿ ಒಂಟಿಯಾಗುಳಿದಿರುವ ಅಪ್ಪ-ಅಮ್ಮ, ಹಬ್ಬಹರಿದಿನಗಳೆಂದು ನಮ್ಮ ಹಳ್ಳಿಗೆ ಹೋಗಿ ಸಂಭ್ರಮಿಸುವುದಕ್ಕೆ ಬಿಡುವೇ ಇಲ್ಲದ ನಮ್ಮ ತಲೆಮಾರಿನವರು, ಹಬ್ಬವೆಂದರೆ ಹೊಸಬಟ್ಟೆ ಖರೀದಿ ಎಂಬ ಪ್ರಭಾವಕ್ಕೆ ಒಳಗಾದ ಮಕ್ಕಳು..ಇವರೆಲ್ಲರು ಒಟ್ಟು ಸೇರಿ ನಿಜಾರ್ಥದ ಹಬ್ಬ ಮಾಡುವುದು ಸಾಧ್ಯವಾದೀತೇ? ಹಳ್ಳಿಯನ್ನು ಬಿಡಲಾಗದ, ಪೇಟೆಬದುಕನ್ನು ಒಪ್ಪಲಾಗದ ನಮ್ಮ ಹಿರಿಯರ ಒಂಟಿತನ ನೀಗಿ ನಿಜಕ್ಕೂ ಅವರು ಮೊಮ್ಮಕ್ಕಳ ಕಲರವವನ್ನು ಕಿವಿ ತುಂಬಿಕೊಂಡರೆ ಅದರಿಂದ ದೊಡ್ಡ ಹಬ್ಬ ಅವರಿಗೆ ಇನ್ನೇನಿದೆ? ನಾವು ಬದಲಾಗಬೇಕಿದೆ ಈಗ, ನಮಗಾಗಿ! -ಆರತಿ ಪಟ್ರಮೆ