ಬಾಗಲಕೋಟೆ: ರಾಜ್ಯದ ಕಲ್ಯಾಣಕ್ಕೆ ಎಲ್ಲರೂ ಸೇರಿ ಕೆಲಸ ಮಾಡಬೇಕು. ನಮಗೆ ರಾಜ್ಯದ ಹಿತ ಮುಖ್ಯ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಸರ್ಕಾರ ನಡೆಸುವಂತಾಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ, ಲಿಂಗಾಯತ ಬೇರೆ, ಬೇರೆ ಎಂಬ ವಾದ ಬದಿಗಿಡಬೇಕು. ಎಲ್ಲರೂ ಒಂದೇ. ಇಡೀ ಕರ್ನಾಟಕ ಒಂದಾಗಬೇಕು. ಪ್ರತ್ಯೇಕತೆ ಬರಬಾರದು. ಎಲ್ಲ ದಲಿತರು, ಬ್ರಾಹ್ಮಣರು ಒಂದಾಗಬೇಕು. ಅಖಂಡ ಕರ್ನಾಟಕವಾಗಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಹಾಗೂ ಸಿಎಂ ಯಡಿಯೂರಪ್ಪ ಮಧ್ಯೆ ಯಾವುದೇ ವೈಮನಸ್ಸಿಲ್ಲ. ಆಂತರಿಕ ಕಲಹವೂ ಇಲ್ಲ. ಯಡಿಯೂ ರಪ್ಪ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು. ರಾಮ ಮಂದಿರ ಕುರಿತು ಕೋರ್ಟ್ ತೀರ್ಪಿಗೆ ನಾವು ಕಾಯುತ್ತಿದ್ದೇವೆ.
ನನಗೆ ರವಿಶಂಕರ ಗುರೂಜಿ ಅವರಿಂದ ಕರೆ ಬಂದಿತ್ತು. ಸಂಧಾನ ಯಶಸ್ವಿಯಾ ಗಿದ್ದು, ಕೆಲ ಮುಸ್ಲಿಂ ಸಮುದಾಯದವರು ಸಂಧಾ ನಕ್ಕೆ ಒಪ್ಪಿಲ್ಲ ಎಂದು ಹೇಳಿದ್ದಾರೆ. ಈ ವಿವಾದ ಸಂಧಾ ನದ ಮೂಲಕ ಬಗೆಹರಿದರೆ ಒಳ್ಳೆಯದು. ಆಗ ಎಲ್ಲೆಡೆ ಭಾವೈಕ್ಯತೆ ಬೆಳೆಯುತ್ತದೆ ಎಂಬುದು ತಮ್ಮ ನಿಲುವು ಎಂದರು.
ಯಾವುದೇ ಕ್ರಮ ಆಗಬಾರದು: ಶಾಸಕ ಬಸನ ಗೌಡ ಪಾಟೀಲ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಆಗಬಾರದು. ಅವರು ಕೆಟ್ಟ ಉದ್ದೇಶದಿಂದ ಹೇಳಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡಲಿ ಎಂದು ಹೇಳಿದ್ದಾರೆ. ನಾನು ಬಿಜೆಪಿಗೆ ಪತ್ರ ಬರೆದು ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಮಹಾರಾಷ್ಟ್ರಕ್ಕೆ ಬಾಗಲಕೋಟೆ ಜಿಲ್ಲೆಯಿಂದ ಕೃಷ್ಣಾ ನದಿ ನೀರು ಬಿಡುವ ಕುರಿತಾದ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಸಮಂಜಸ ವಾಗಿದೆ. ನಮ್ಮ ನಾಡಿನಲ್ಲಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಇರಬೇಕು. ಪರಸ್ಪರ ಸಹಕಾರ ಬೆಳೆಯಬೇಕು. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನ ಜನರೆಲ್ಲರೂ ಎಲ್ಲರೂ ಅನ್ಯೋನ್ಯವಾಗಿರಬೇಕು.
-ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಉಡುಪಿ ಪೇಜಾವರ ಮಠ