Advertisement
ಮೂರನೇ ಹಂತದ ಮೀನುಗಾರಿಕೆ ಜೆಟ್ಟಿ ನಿರ್ಮಾಣ ಕಾಮಗಾರಿಯ ಹಳೆಯ ಟೆಂಡರ್‌ನ್ನು ರದ್ದುಮಾಡಿ, ಅಲ್ಲಿ ಬಾಕಿ ಉಳಿದ ಕಾಮಗಾರಿಯನ್ನು 22 ಕೋ.ರೂ. ವೆಚ್ಚದಲ್ಲಿ ಕೈಗೊಳ್ಳುವ ಯೋಜನ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ. ಈ ಮೂಲಕ 2010ರಲ್ಲಿ ಆರಂಭವಾಗಿ ಹೆಚ್ಚಿನ ಕೆಲಸ ಮುಗಿದರೂ, ಕೆಲವು ಕಾಮ ಗಾರಿ ಬಾಕಿಯಾಗಿ ನನೆಗುದಿಗೆ ಬಿದ್ದಿದ್ದ ಮೀನುಗಾರರ ಬಹುನಿರೀಕ್ಷಿತ ಯೋಜನೆ ಈಗ ಮುನ್ನೆಲೆಗೆ ಬಂದಿದೆ. 28 ಕೋ.ರೂ. ವೆಚ್ಚದ ಯೋಜನ ವರದಿ ಮೊದಲು ಸಿದ್ಧಪಡಿಸಿದ್ದರೂ, ಆರ್ಥಿಕ ಇಲಾಖೆಯ ಸೂಚನೆಯ ಮೇರೆಗೆ ಈಗ 22 ಕೋ.ರೂ.ಗಳ ಯೋಜನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
ಮೊದಲ ಹಂತದ ಮಂಗಳೂರು ಮೀನು ಗಾರಿಕೆ ಬಂದರಿನ ನಿರ್ಮಾಣವನ್ನು 1986ರಲ್ಲಿ ಪ್ರಾರಂಭಿಸಿ, 1991ರಲ್ಲಿ ಪೂರ್ಣ ವಾಗಿತ್ತು. 147.80 ಲಕ್ಷ ರೂ. ಗಳಲ್ಲಿ 138 ಮೀ. ಉದ್ದದ ಜೆಟ್ಟಿ, 675 ಚ.ಮೀ ವಿಸ್ತೀರ್ಣದ ಮೀನು ಹರಾಜು ಪ್ರಾಂಗಣ ಸಹಿತ ಇತರ ವ್ಯವಸ್ಥೆ ಒದಗಿಸಲಾಗಿತ್ತು.
Related Articles
Advertisement
ಅನಂತರ ಯಾಂತ್ರೀಕೃತ ದೋಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಮೀನುಗಾರಿಕೆ ಬಂದರಿನ 2ನೇ ಹಂತದ ಕಾಮಗಾರಿಯನ್ನು 2003ರಲ್ಲಿ ಕೈಗೊಳ್ಳಲಾಯಿತು. 67 ಮೀ. ಉದ್ದದ ಜೆಟ್ಟಿಯನ್ನು 144.67 ಲಕ್ಷ ರೂ. ವೆಚ್ಚದಲ್ಲಿ 2004ರಲ್ಲಿ ಪೂರ್ಣಗೊಳಿಸಲಾಯಿತು. ಮೀನು ಹರಾಜು ಪ್ರಾಂಗಣ, ಬಂದರಿನ ರಸ್ತೆಗಳ ಕಾಂಕ್ರೀಟ್‌ಕರಣ, ಕುಡಿಯುವ ನೀರು ಸಹಿತ ಇತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಆನಂತರ ಮೂರನೇ ಹಂತದ ಜೆಟ್ಟಿ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು.
2010ರ ಯೋಜನೆ-ಹೊಸ ಗುತ್ತಿಗೆಮೀನುಗಾರಿಕೆ ಬಂದರಿನ 1 ಹಾಗೂ 2ನೇ ಜೆಟ್ಟಿ ನಿರ್ಮಾಣವಾದ ಬಳಿಕ ಬೋಟುಗಳು ಹಾಗೂ ಮೀನುಗಾರರಿಗೆ ವಿವಿಧ ಸಮಸ್ಯೆ-ಸವಾಲುಗಳು ಇವೆ ಎಂಬ ಕಾರಣಕ್ಕೆ 2010ರಲ್ಲಿ ಮೂರನೇ ಹಂತದ ಜೆಟ್ಟಿ ನಿರ್ಮಾಣಕ್ಕೆ ಸರಕಾರ ಮನಸ್ಸು ಮಾಡಿತ್ತು. ಆದರೆ, ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಇಚ್ಛಾಶಕ್ತಿ ಇಲ್ಲದೆ ಈ ಯೋಜನೆ ಬಹುತೇಕ ಆದರೂ, ಪೂರ್ಣವಾಗಲು ಇನ್ನೂ ಸಾಧ್ಯವಾಗಿಲ್ಲ. ಅಂತಿಮವಾಗಿ, ಇಲ್ಲಿಯವರೆಗೆ ಆಗಿರುವ ಕಾಮಗಾರಿಯ ಹಳೆಯ ಗುತ್ತಿಗೆದಾರರಿಂದ ಟೆಂಡರ್ ಮುಕ್ತಾಯಗೊಳಿಸಿ, ಬಾಕಿ ಉಳಿದ ಕಾಮಗಾರಿಯನ್ನು ಹೊಸ ಗುತ್ತಿಗೆ ಮೂಲಕ ನಡೆಸಲು ಮೀನುಗಾರಿಕೆ-ಬಂದರು ಇಲಾಖೆ ನಿರ್ಧರಿಸಿದೆ. ಶೀಘ್ರ ಸಚಿವ ಸಂಪುಟ ಅನುಮೋದನೆ
ಮಂಗಳೂರಿನ 3ನೇ ಹಂತದ ಜಟ್ಟಿ ನಿರ್ಮಾಣಕ್ಕೆ 22 ಕೋಟಿ ರೂ.ಗಳ ಯೋಜನ ವರದಿ ಸಿದ್ಧಗೊಂಡಿದೆ. ಮುಂದಿನ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ದೊರೆಯಲಿದೆ. ಆ ಮುಖೇನ ಮೀನುಗಾರರಿಗೆ ಬಹುನಿರೀಕ್ಷಿತ ಯೋಜನೆಯೊಂದು ಪೂರ್ಣ ಮಟ್ಟದಲ್ಲಿ ಲಭ್ಯವಾಗಲಿದೆ.
- ಕೋಟ ಶ್ರೀನಿವಾಸ ಪೂಜಾರಿ, ಬಂದರು ಹಾಗೂ ಮೀನುಗಾರಿಕೆ ಸಚಿವರು.