Advertisement

ಸ್ಫೋಟ ಪ್ರಕರಣದ 3ನೇ ಆರೋಪಿಗೆ ಕ್ಷಮಾದಾನ

11:56 AM Dec 08, 2018 | Team Udayavani |

ಬೆಂಗಳೂರು: ಮೈಸೂರು ನ್ಯಾಯಾಲಯದ ಆವರಣದ ಶೌಚಾಲಯದಲ್ಲಿ 2016ರ ಆಗಸ್ಟ್‌ 1ರಂದು ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ “ಮಾಫಿ ಸಾಕ್ಷಿದಾರ’ (ಅಪ್ರೂವರ್‌) ಆಗಿ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಒಪ್ಪಿಕೊಂಡ ಪ್ರಕರಣದ 3ನೇ ಆರೋಪಿ ಮೊಹಮ್ಮದ್‌ ಆಯೂಬ್‌ಗ ಹೈಕೋರ್ಟ್‌ ಶುಕ್ರವಾರ ಕ್ಷಮಾದಾನ ನೀಡಿದೆ.

Advertisement

ಈ ಕುರಿತಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಮಾನ್ಯ ಮಾಡಿದ ನ್ಯಾ. ಕೆ.ಎನ್‌.ಫ‌ಣೀಂದ್ರ ಹಾಗೂ ನ್ಯಾ.ಕೆ.ಸೋಮಶೇಖರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಆರೋಪಿಗೆ ಕ್ಷಮಾದಾನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು. ಕ್ಷಮಾದಾನ ಕೋರಿ ಆಯೂಬ್‌ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ. ಆದರೆ, ವಿಶೇಷ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಎನ್‌ಐಎ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ವೇಳೆ ಎನ್‌ಐಎ ಪರ ವಕೀಲ ಪಿ.ಪ್ರಸನ್ನಕುಮಾರ್‌ ವಾದ ಮಂಡಿಸಿ, ಮೈಸೂರು ನ್ಯಾಯಾಲಯ ಆವರಣದಲ್ಲಿನ ಬಾಂಬ್‌ ಸ್ಫೋಟ ಪ್ರಕರಣದ 3ನೇ ಆರೋಪಿ ಮೊಹಮ್ಮದ್‌ ಆಯೂಬ್‌, ಪ್ರಕರಣದ ಇತರೆ ಆರೋಪಿಗಳು ತನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಮನೆಯನ್ನು ಸ್ಫೋಟಕಗಳ ತಯಾರಿಕೆಗೆ ಬಳಸಿಕೊಂಡಿದ್ದಾರೆ.

ಒಂದೊಮ್ಮೆ ನನಗೆ ಕ್ಷಮಾದಾನ ನೀಡಿದರೆ, ಪ್ರಕರಣದ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಈ ಸಂಬಂಧ ತನ್ನ ಬಳಿ ಇರುವ ಎಲ್ಲ ಮಾಹಿತಿ ಮತ್ತು ವಿಷಯಗಳನ್ನು ತನಿಖಾಧಿಕಾರಿಗಳಿಗೆ ಒದಗಿಸಲು ಸಿದ್ಧ ಎಂದು ವಿಚಾರಣೆ ವೇಳೆ ಹೇಳಿದ್ದಾನೆ. ಅದರಂತೆ ಆತನಿಗೆ ಕ್ಷಮಾದಾನ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು. 

ಆರೋಪಿ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ. ಆದರೆ, ಆರೋಪಿಯು ನೆಲ್ಲೂರು, ಚಿತ್ತೂರು, ಕೊಲ್ಲಂ, ಎರ್ನಾಕುಲಂ, ಮಧುರೈಗಳಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಗಳಲ್ಲೂ ಆರೋಪಿಯಾಗಿದ್ದು, ಆತನಿಗೆ ಕ್ಷಮಾದಾನ ನೀಡಿದರೆ, ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ವಿಶೇಷ ನ್ಯಾಯಾಲಯ, ಆತನ ಅರ್ಜಿ ವಜಾಗೊಳಿಸಿದೆ. ಈ ಕ್ರಮ ಸರಿಯಲ್ಲ ಎಂದು ಎನ್‌ಐ ಪರ ವಕೀಲರು ದೂರಿದರು.

Advertisement

ಅಲ್ಲದೇ ಆಯೂಬ್‌ ನೀಡುವ ಮಾಹಿತಿಗಳು ಪ್ರಕರಣದ ಮುಂದಿನ ತನಿಖೆಗೆ ಮುಖ್ಯವಾಗಿವೆ. ಒಂದು ವೇಳೆ ಆತ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ವಿಫ‌ಲನಾದರೆ, ಆತನಿಗೆ ನೀಡಿದ ಕ್ಷಮಾದಾನ ತಾನಾಗಿಯೇ ರದ್ದಗಾಲಿದೆ. ಆ ರೀತಿ ಆದರೆ, ಪುನಃ ಆತನನ್ನು ಪ್ರಕರಣದ ಆರೋಪಿಯೆಂದು ಪರಿಗಣಿಸಲಾಗುತ್ತದೆ ಎಂದು ಎನ್‌ಐಎ ಪರ ವಕೀಲರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ಇದನ್ನು ಒಪ್ಪಿದ ನ್ಯಾಯಪೀಠ, ಪ್ರಕರಣದಲ್ಲಿ ಆಯೂಬ್‌ ಪ್ರಮುಖ ಆರೋಪಿಯಾಗಿದ್ದಾನೆ. ಆತನ ಹೇಳಿಕೆಗಳು ಮುಖ್ಯ ಹಾಗೂ ನಿರ್ಣಾಯ ಸಾಕ್ಷಿಯಾಗಿದ್ದು, ಅದು ಪ್ರಕರಣದ ತನಿಖೆಗೆ ಸಹಕಾರಿಯಾಗಲಿದೆ. ಆರೋಪಿ ತನ್ನ ಹೇಳಿಕೆಯಿಂದ ವಿಮುಖನಾದದರೆ ಹೇಗೆ ಎಂಬ ವಿಚಾರಣಾ ನ್ಯಾಯಾಲಯದ ಅನುಮಾನ ಈ ಹಂತದಲ್ಲಿ “ಅಪಕ್ವವಾಗುತ್ತದೆ’. ಹೀಗಾಗಿ, ಆರೋಪಿಗೆ ಕ್ಷಮದಾನ ನೀಡಬಹುದಾಗಿದೆ ಎಂದು ಹೇಳಿತು.

ಬೇಸ್‌ ಮೂವ್‌ಮೆಂಟ್‌ ಸದಸ್ಯ: ಆರೋಪಿ ಮೊಹಮ್ಮದ್‌ ಆಯೂಬ್‌ “ಬೇಸ್‌ ಮೂವ್‌ಮೆಂಟ್‌’ನ ಸದಸ್ಯ, ಇತರೆ ಆರೋಪಿಗಳೊಂದಿಗೆ ಆತ ಬೇಸ್‌ ಮೂವ್‌ಮೆಂಟ್‌ಗೆ “ಲಿಖೀತ ನಿಷ್ಠೆ’ (ಬೈತ್‌) ಮಾಡಿಕೊಂಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಎನ್‌ಐಎ ಮೇಲ್ಮನವಿಯಲ್ಲಿ ಹೇಳಲಾಗಿದೆ.

ಏನಿದು ಸ್ಫೋಟ ಪ್ರಕರಣ?: 2016ರ ಆಗಸ್ಟ್‌ 1ರಂದು ಸಂಜೆ 4.10ಕ್ಕೆ ಮೈಸೂರು ನ್ಯಾಯಾಲಯ ಆವರಣದಲ್ಲಿರುವ ಶೌಚಾಲಯದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. 2016ರ ಸೆ.15ರಂದು ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿತ್ತು. ಅದರಂತೆ ಸೆ.20ರಂದು ಎನ್‌ಐಎ ಹೊಸ ಎಫ್ಐರ್‌ ದಾಖಲಿಸಿಕೊಂಡಿತ್ತು. ಅದೇ ವರ್ಷ ನ.25ರಂದು ಎನ್‌ಐಎ ಆಯೂಬ್‌ನನ್ನು ಬಂಧಿಸಿತ್ತು.

ಡಿ.23ರಂದು ಆಯೂಬ್‌ ಮ್ಯಾಜಿಸ್ಟ್ರೇಟ್‌ ಎದುರು ಹೇಳಿಕೆ ನೀಡಿದ್ದ. ಈ ಮಧ್ಯೆ 2017ರ ಮೇ 17ರಂದು ಪರಪ್ಪನ ಅಗ್ರಹಾರ ಜೈಲಿನ ಡಿಐಜಿ ಮೂಲಕ ವಿಶೇಷ ನ್ಯಾಯಾಧೀಶರಿಗೆ ಪತ್ರ ಬರೆದಿದ್ದ ಆತ ಆಪ್ರೂವರ್‌ ಆಗಲು ಅನುಮತಿ ಕೇಳಿದ್ದ. ಇದನ್ನು ಬೆಂಬಲಿಸಿ ಎನ್‌ಐಎ ಸಹ ಆರೋಪಿಗೆ ಕ್ಷಮದಾನ ನೀಡುವಂತೆ ಕೋರಿತ್ತು. ಆದರೆ, ಅದನ್ನು ವಿಶೇಷ ನ್ಯಾಯಾಲಯ ತಿರಿಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಎನ್‌ಐಎ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next