ಬೆಂಗಳೂರು: ಒಂದೂವರೆ ದಶಕದ ಹಿಂದಿನ ಮಾತು. ಕಳ್ಳತನದ ಹಿನ್ನೆಲೆಯಲ್ಲಿ ಊರಿನ ಜನ ಆ ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈಗ ಆತ ಅದೇ ಊರಿನ ಜನ ಮೆಚ್ಚಿದ ಹುಡುಗ. ಕೆಲವರು ಆ ಯುವಕನ ಕಾಲು ತೊಳೆದು ಕನ್ಯಾದಾನ ಮಾಡಲು ಮುಂದಾಗಿದ್ದಾರೆ! ಹೊಟ್ಟೆಪಾಡಿಗಾಗಿ ಮನೆಯಿಂದ ಹೊರಬಂದ ಬಾಲಕ, ಊರಲ್ಲಿ ಪುಂಡರ ಗುಂಪು ಸೇರಿ ದಾರಿ ತಪ್ಪಿದ ಮಗನಾಗುತ್ತಾನೆ. ಊಟಕ್ಕಾಗಿ ಮಾಡುತ್ತಿದ್ದ ಕಳ್ಳತನ ನಂತರ ಅದೇ ವೃತ್ತಿಯಾಗುತ್ತದೆ. ಕೊನೆಗೆ ಊರಿನ ಜನ ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸುತ್ತಾರೆ.
ಆಗ ಪರಿವೀಕ್ಷಣಾ ಕೇಂದ್ರ (ರಿಮ್ಯಾಂಡ್ ಹೋಂ)ಕ್ಕೆ ಸೇರಿಸಲಾಗುತ್ತದೆ. ಅಲ್ಲಿ ಆಕಸ್ಮಿಕವಾಗಿ ಭೇಟಿ ನೀಡುವ ಸರ್ಕಾರೇತರ ಸಂಸ್ಥೆಯ ಸದಸ್ಯರ ಮಾತಿನಿಂದ ಪರಿವರ್ತನೆಗೊಂಡು, ಆ ಸಂಸ್ಥೆಯೊಂದಿಗೆ ಸಾಗುತ್ತಾನೆ. ಇಲ್ಲಿಂದ ಆತನ ಜೀವನದ ದಿಕ್ಕು ಬದಲಾಗುತ್ತದೆ. ಕಷ್ಟಪಟ್ಟು ಓದಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾನೆ. ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ಗಳಿಸುತ್ತಾನೆ. ಪ್ರಸ್ತುತ ಬ್ಯಾಂಕ್‌ವೊಂದರ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದು, ಐಎಎಸ್‌ಗೆ ಸಿದ್ಧತೆ ನಡೆಸಿದ್ದಾನೆ.
ಈ ಶ್ರಮದಿಂದಾಗಿ ಯುವಕ ಸಮಾಜದ ಮುಖ್ಯ ವಾಹಿನಿಗೆ ಬರುವುದಷ್ಟೇ ಅಲ್ಲ; ಪೊಲೀಸರಿಗೊಪ್ಪಿಸಿದ ಊರಿನವರು, ಹಿಡಿದು ಥಳಿಸಿದ ಪೊಲೀಸರು, ಶಿಕ್ಷೆ ಅನುಭವಿಸಿದ ಕೇಂದ್ರದ ಮತ್ತು ತಾನು ಇದ್ದ ವಸತಿ ನಿಲಯದ ಸಾವಿರಾರು ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಬಂಧಿಕರೆಲ್ಲಾ ಅಪ್ಪಿಕೊಳ್ಳುತ್ತಿದ್ದಾರೆ. ಈ ಸಾಧನೆಯಿಂ ದಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸರ್ಕಾರ ಹಾಗೂ ಯೂನಿಸೆಫ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಗಳ ಪ್ರಾದೇಶಿಕ ಸಮಾವೇಶದಲ್ಲಿ ಈ ಯುವಕ ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು. ತಾವು ನಡೆದುಬಂದ ಹಾದಿಯನ್ನು ಅವರು
“ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ.
“ನಮ್ಮ ಊರು ಬೆಂಗಳೂರಿಗೆ ಹೊಂದಿಕೊಂಡ ಗೊಟ್ಟಿಗೆರೆ. ತಂದೆಗೆ ನಾವು ಮೂರು ಮಕ್ಕಳು. ನಾನೇ ಕೊನೆಯವನು. ಅಮ್ಮ ಚಿಕ್ಕವನಿದ್ದಾಗಲೇ ಅಗಲಿದ್ದರು. ಅಪ್ಪ ಮೇಸ್ತ್ರಿ ಆಗಿದ್ದರು. ಊಟ ಕೇಳಿದರೂ ತಂದೆ ಹಿಗ್ಗಾ ಮುಗ್ಗಾ ಹೊಡೆಯುತ್ತಿದ್ದರು. ಥಳಿಸಿಕೊಂಡು ಸಾಕಾಗಿ ಒಂದು ದಿನ ಮನೆ ಬಿಟ್ಟೆ. ಆಗ ನನಗೆ 8-9 ವರ್ಷ. ಹೆಚ್ಚು-ಕಡಿಮೆ ನನ್ನ ವಯಸ್ಸಿನ 10 ಹುಡುಗರ ಗುಂಪಿತ್ತು. ಅದರಲ್ಲಿ ನಾನೂ ಒಬ್ಬನಾದೆ. ಇದರೊಂದಿಗೆ ಶಾಲೆಗೆ ಗುಡ್‌ಬೈ ಹೇಳಿದಂತಾಯಿತು. ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕಳ್ಳತನ, ನಂತರ ವೃತ್ತಿ ಆಗಿಬಿಟ್ಟಿತು. ಕೆಲವು ಸಲ ಊರವರ ಕೈಗೆ ಸಿಕ್ಕಿಬೀಳುತ್ತಿದ್ದೆವು. ಆಗ ಥಳಿಸುತ್ತಿ ದ್ದರು. ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಿದ್ದೆವು.
2005ರಲ್ಲಿ ಸ್ಥಳೀಯರು ನಮ್ಮನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ನಮ್ಮ ವಿರುದ್ಧ ಕೊಲೆ ಯತ್ನ ಕೇಸು ಕೂಡ ದಾಖಲಿಸಿ ಪರಿವೀಕ್ಷಣಾ ಕೇಂದ್ರಕ್ಕೆ ತಳ್ಳಿದರು. ಆ ಕೇಂದ್ರದಲ್ಲಿ ಮಕ್ಕಳ ಪರಿವರ್ತನೆ ಬಗ್ಗೆ ಮೇಷ್ಟ್ರು ಪಾಠ ಮಾಡುತ್ತಿದ್ದರು. ಈ ಮಧ್ಯೆ ಸರ್ಕಾರೇತರ ಸಂಸ್ಥೆಯ ಕೆಲ ಸದಸ್ಯರು ಭೇಟಿ ನೀಡಿದರು. ಉತ್ತಮ ಶಿಕ್ಷಣ ಕೊಡಿಸುವ ಭರವಸೆ ನೀಡಿದರು. ಇದಕ್ಕಾಗಿ ತಮ್ಮ ವಿದ್ಯಾರ್ಥಿ ನಿಲಯಕ್ಕೆ ಬರುವಂತೆ ಎಲ್ಲರಿಗೂ ಹೇಳಿದರು. ಗಂಟುಮೂಟೆ ಕಟ್ಟಿಕೊಂಡು, ಅವರನ್ನು ಹಿಂಬಾಲಿಸಿದೆ. ಕಷ್ಟಪಟ್ಟು ಓದಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಕ್ರಮವಾಗಿ ಶೇ. 64 ಮತ್ತು ಶೇ. 72 ಅಂಕ ಗಳಿಸಿದೆ.
ನಂತರ ಕ್ರೈಸ್ಟ್ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿದೆ. ಈಗ ಐಸಿಐಸಿಐ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದು, ಮಡಿವಾಳದಲ್ಲಿ ಫ್ಲ್ಯಾಟ್‌ವೊಂದರಲ್ಲಿ ಇದ್ದೇನೆ. ಮುಂದೆ ಐಎಎಸ್ ಮಾಡಬೇಕು ಎನ್ನುವುದು ನನ್ನ ಗುರಿ. ಈ ಸಂಬಂಧ ಈಗಾಗಲೇ ಸಿದ್ಧತೆ ನಡೆಸಿದ್ದೇನೆ. ಮೂರು ವರ್ಷಗಳ ಹಿಂದೆ ಗೊಟ್ಟಿಗೆರೆಗೆ ಭೇಟಿ ನೀಡಿದ್ದೆ. ಆಗ ಜನ ನನ್ನನ್ನು ನೋಡುವ ರೀತಿಯೇ ಬದಲಾಗಿತ್ತು. ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಕಂಡರು. ಹಿಂದೆಂದೂ ಬಾರದ ಸಂಬಂಧಿಕರು ಕೂಡ ಹತ್ತಿರ ಬಂದಿದ್ದಾರೆ. ಕೆಲವರು ಕನ್ಯಾದಾನದ ಬಗ್ಗೆಯೂ ಪ್ರಸ್ತಾಪ ಮಾಡಿರುವುದು ನನ್ನ ಸಂಬಂಧಿಕರಿಂದಲೇ ಗೊತ್ತಾಯಿತು.
8.88 ಲಕ್ಷ ಮಕ್ಕಳು ಸಾವು: ದೇಶದಲ್ಲಿ ಕಳೆದ ವರ್ಷ 8.88 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷ ಡಾ.ಆಂಟೋನಿ ಸಬಾಸ್ಟಿಯನ್ ಕಳವಳ ವ್ಯಕ್ತಪಡಿಸಿದರು. ಸಮಾವೇಶದಲ್ಲಿ ಮಾತನಾಡಿ, ಯೂನಿಸೆಫ್ ಬಿಡುಗಡೆ ಮಾಡಿದ 2018ರಲ್ಲಿ ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ದೇಶದಲ್ಲಿ ಶೇ. 39ರಷ್ಟು ಮಕ್ಕಳಿದ್ದು, ಈ ಪೈಕಿ 6 ವರ್ಷ ಮೇಲ್ಪಟ್ಟವರು ಶೇ. 20ರಷ್ಟಿದ್ದಾರೆ. ಇದರಲ್ಲಿ ಶೇ. 70ರಷ್ಟು ಗ್ರಾಮೀಣ ಭಾಗದಲ್ಲಿದ್ದಾರೆ ಎಂದರು. ಯೂನಿಸೆಫ್-ಹೈದರಾಬಾದ್ ಕಚೇರಿ ಮುಖ್ಯಸ್ಥೆ ಮೀಟಲ್ ರುಸಿಯಾ, ಎನ್‌ಎಲ್‌ಎಸ್‌ಐಯುನ ಸಾರ್ವಜನಿಕ ನೀತಿಗಳ ಮುಖ್ಯಸ್ಥ ಪ್ರೊ.ಬಾಬು ಮ್ಯಾಥು ಇತರರು ಉಪಸ್ಥಿತರಿದ್ದರು.