Advertisement

ಮಾಡಬಾರದ್ದೆಲ್ಲಾ ಮಾಡಿ ದೇಗುಲಕ್ಕೆ ಹೋಗುವ ಆಸ್ತಿಕ ಮನಸ್ಥಿತಿ ಒಪ್ಪಲು ಸಾಧ್ಯವಿಲ್ಲ: ಸಿಎಂ

08:46 PM Jan 15, 2024 | Team Udayavani |

ಬ್ಯಾಡಗಿ(ಗುರು ಸಿದ್ಧರಾಮೇಶ್ವರ ವೇದಿಕೆ): ಮಾಡಬಾರದ್ದನ್ನೆಲ್ಲಾ ಮಾಡಿ ದೇವಸ್ಥಾನಕ್ಕೆ ಹೋಗುವ ಆಸ್ತಿಕ ಮನಸ್ಥಿತಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಣೆಬರಹದಿಂದ ಯಾರೂ ಬಡವ-ಶ್ರೀಮಂತರಾಗಿಲ್ಲ. ಮೇಲು-ಕೀಳು ರಹಿತ ಸಮ ಸಮಾಜ ನಿರ್ಮಾಣಕ್ಕೆ ವಚನಗಳ ಮೂಲಕ ವೈಜ್ಞಾನಿಕ ವಿಚಾರಗಳನ್ನು ಬಸವಾದಿ ಶರಣರು ಜನರ ಮುಂದಿಟ್ಟಿದ್ದಾರೆ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಇಂತಹ ಸತ್ಯ ಹೇಳಿದರೆ ಕೋಪಗೊಂಡವರು ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಚಿಕ್ಕಬಾಸೂರಿನಲ್ಲಿ ನಡೆಯುತ್ತಿರುವ ಸಿದ್ಧರಾಮೇಶ್ವರ 851ನೇ ಜಯಂತಿ ಹಾಗೂ ನೊಳಂಬ ಸಮಾವೇಶದ ಎರಡನೇ ದಿನವಾದ ಸೋಮವಾರ ನಡೆದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಜಾತಿಯ ಬಡವರನ್ನು ಮುಖ್ಯವಾಹಿನಿಗೆ ತರಬೇಕಿದೆ.

ಯೂರೋಪ್‌ನಲ್ಲಿ ಕೂಡ ಯೂನಿವರ್ಸಲ್‌ ಇನ್‌ಕಮ್‌ ಎಂಬ ರೂಲ್‌ ಚಾಲ್ತಿಯಲ್ಲಿದೆ. ಅಂಬೇಡ್ಕರ್‌ ಹೇಳಿದಂತೆ ಎಲ್ಲ ಜನರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಾನತೆ ತಂದು ಕೊಟ್ಟ ದಿನವೇ ದೇಶದ ಜನರಿಗೆ ನಿಜವಾದ ಸ್ವಾತಂತ್ರ್ಯ ಬಂದಂತಾಗುತ್ತದೆ. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಇಂತಹ ಚರ್ಚೆಗಳು ನಡೆಯುತ್ತಿತ್ತು ಎಂದರು.

ಪ್ರತಿ ಮಗುವೂ ವಿಶ್ವಮಾನವರಾಗಿ ಹುಟ್ಟುತ್ತಾರೆ. ಬೆಳೆದಂತೆ ಬಳಿಕ ಅಲ್ಪಮಾನವರಾಗುತ್ತಿದ್ದಾರೆ. ಹುಟ್ಟು-ಸಾವುಗಳ ನಡುವೆ ಬದುಕನ್ನು ಸಾರ್ಥಕತೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಾವಿಗೆ ಅರ್ಥವೇ ಇರಲ್ಲ. ನಮ್ಮ ತಂದೆಗೂ 6 ಜನ ಮಕ್ಕಳು. ಆದರೆ ಯಾರೊಬ್ಬರೂ ಓದಲಿಲ್ಲ. ನನಗೊಬ್ಬನಿಗೆ ಓದುವ ಅವಕಾಶ ಸಿಕ್ಕಿತ್ತು. ಅದು ನನ್ನ ಹಣೆಬರಹವಲ್ಲ, ಬದಲಾಗಿ ನಾನು ಮಾಡಿದ ಪ್ರಯತ್ನ ಎಂದರು.

ವಿಷ್ಣುವಿನ ತಲೆಯಿಂದ ಹುಟ್ಟಿದವನು ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಭಾಗದಿಂದ ವೈಶ್ಯ, ಪಾದದ ಕೆಳಗಿನಿಂದ ಹುಟ್ಟಿದವನು ಶೂದ್ರನೆಂದು ಸ್ವಾರ್ಥಕ್ಕಾಗಿ ಇಂತಹ ಸುಳ್ಳುಗಳನ್ನು ಹೇಳಿಕೊಂಡು ತಿರುಗಾಡುತ್ತಿರುವವರು ವೈಜ್ಞಾನಿಕ ಕಾರಣ ಕೊಡಬಲ್ಲರೇ? ಹೀಗಾಗಿ ಶರಣರು ತಮ್ಮ ಬದುಕಿನಲ್ಲಿ ಇಂತಹ ಮೌಡ್ಯ, ಕಂದಾಚಾರ ಸೇರಿ ವರ್ಗ ಪದ್ಧತಿಯನ್ನು ತಿರಸ್ಕರಿಸಿದ್ದಾರೆ ಎಂದರು.

Advertisement

ಮನುಷ್ಯ ಜಾತಿ ಎಂಬುದು ಒಂದೇ. ಯಾವ ದೇವಸ್ಥಾನಗಳಲ್ಲಿ ಅವಕಾಶವಿಲ್ಲವೋ ಅಂತಹ ದೇವಸ್ಥಾನಕ್ಕೆ ಹೋಗಬೇಡಿ ಎಂದು ಹಿಂದುಳಿದ ಜನರಿಗೆ ನಾರಾಯಣ ಗುರು ತಿಳಿಸಿಕೊಟ್ಟಿದ್ದಾರೆ. ನಿಮಗೆ ಬೇಕಾದ ದೇವಸ್ಥಾನಗಳನ್ನು ನಿರ್ಮಿಸಿಕೊಂಡು ಪೂಜೆಗಳನ್ನು ಸಲ್ಲಿಸುವಂತೆ ಸಲಹೆ ನೀಡಿದ್ದಾರೆ. ಕಾಯಕಯೋಗಿ ಸಿದ್ಧರಾಮೇಶ್ವರರು ಬಸವೇಶ್ವರರ ಸಮಕಾಲೀನರು. 12ನೇ ಶತಮಾನದಲ್ಲಿ ವಚನಗಳ ರಚನೆ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅವರು ನುಡಿದಂತೆ ನಡೆದುಕೊಳ್ಳುವುದೇ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಹೀಗಾಗಿ ವಚನ ಸಾಹಿತ್ಯ ವಿಶ್ವಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next