ಅಮೀನಗಡ: ಪಟ್ಟಣದಲ್ಲಿ ಹನುಮಂತ ದೇವರ ಮೂರ್ತಿ ಕಳ್ಳತನವಾಗಿರುವ ಘಟನೆ ನಡೆದಿದೆ.
ಪಟ್ಟಣದ 8ನೇ ವಾರ್ಡ್ನ ರಾಜ್ಯಹೆದ್ದಾರಿ ಪಕ್ಕದಲ್ಲಿರುವ ಹನುಮಂತ ದೇವಸ್ಥಾನದಲ್ಲಿನ ಹನುಮಂತ ದೇವರ ಮೂರ್ತಿಯನ್ನು ತಡರಾತ್ರಿ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮೂರ್ತಿ ಕಳ್ಳತನ ವಿಷಯ ತಿಳಿದ ಭಕ್ತರು ಬೆಳ್ಳಂಬೆಳಿಗ್ಗೆ ದೇವಸ್ಥಾನದ ಬಳಿ ಜಮಾಯಿಸಿದ್ದರು. ಸುಮಾರು ಮೂವತ್ತು ವರ್ಷ ಹಿಂದಿನ ಹಳೆಯ ಐದು ಅಡಿ ಎತ್ತರದ ಕಲ್ಲಿನ ಹನುಮಂತ ದೇವರ ಮೂರ್ತಿ ಕಳ್ಳತನ ಮಾಡಿದ್ದಾರೆ.
ಅಮೀನಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನಿಖೆಗೆ ಒತ್ತಾಯ: ಹನುಮಂತ ದೇವಸ್ಥಾನದಲ್ಲಿ ತಡರಾತ್ರಿ ದೇವರ ಮೂರ್ತಿಯು ಕಳುವು ಆಗಿದ್ದು, ಈ ಬಗ್ಗೆ ಪೋಲಿಸರು ಪರಿಶೀಲಿಸಿ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.