ಮೈಸೂರು: ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ರಂಗ ಚಟುವಟಿಕೆಗಳು ಸರ್ಕಾರದ ಆಶ್ರಯದಲ್ಲಿ ಉಸಿರಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಮತ್ತೂಮ್ಮೆ ಪುನಶ್ಚೇತನ ನೀಡಬೇಕಾದ ಅವಶ್ಯಕತೆ ಇದೆ ಎಂದು ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.
ನಗರದ ಸಂವಹನ ಪ್ರಕಾಶನದ ವತಿಯಿಂದ ಅಗ್ರಹಾರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಡಾ. ಶಿವರಾತ್ರಿ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಎ.ಶಂಕರ್‌ರ ಸಮಗ್ರ ನಾಟಕ ಸಂಪುಟ ಬಿಡುಗಡೆಗೊಳಿಸಿ ಮಾತನಾಡಿದರು.
ರಂಗಭೂಮಿ ಜನರಲ್ಲಿ ಯೋಚನಾ ಶಕ್ತಿ ಬೆಳೆಸಲ್ಲಿದ್ದು, ನಾಟಕ ನೋಡುವ ಪ್ರೇಕ್ಷಕರಲ್ಲೂ ಸಹ ಸೃಜನಶೀಲತೆ ಬೆಳೆಸಲಿದೆ. ಆದರೆ ಇಂದು ಜನರಲ್ಲಿ ಸೃಜನಶೀಲತೆ ಇಲ್ಲದಂತಾಗಿರುವುದರಿಂದ ಎಲ್ಲರೂ ಟಿವಿ ಮುಂದೆ ಕುಳಿತು ಒಂದೇ ಮಾದರಿಯ ಧಾರವಾಹಿಗಳನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಹೀಗಾಗಿ ಜನರನ್ನು ಇದರಿಂದ ಹೊರತರಬೇಕಾದಲ್ಲಿ ರಂಗ ಚಟುವಟಿಕೆಗಳು ಅತ್ಯಂತ ಕ್ರಿಯಾಶೀಲವಾಗಿರಬೇಕಿದೆ. ಅಲ್ಲದೆ ಪ್ರಸ್ತುತ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವಗಳಲ್ಲಿ ರಂಗಭೂಮಿ ಚಟುವಟಿಕೆಗಳು ಕ್ಷೀಣಿಸುತ್ತಿದ್ದು, ಈ ನಿಟ್ಟಿನಲ್ಲಿ ಯುವಕರನ್ನು ರಂಗಭೂಮಿಯತ್ತ ಸೆಳೆಯಬೇಕಿದೆ ಎಂದು ಹೇಳಿದರು.
ಅಲ್ಲದೆ ನಮ್ಮ ನಾಟಕಗಳು ಸ್ಥಳೀಯವಾಗಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಪ್ರದರ್ಶನಗೊಳ್ಳಬೇಕಿದ್ದು, ಆ ಮೂಲಕ ಕನ್ನಡದ ನಾಟಕಗಳು ಮತ್ತೆ ಜೀವಂತವಾಗಿ ಎಲ್ಲೆಡೆ ಪ್ರದರ್ಶನಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಅದೇ ರೀತಿಯಲ್ಲಿ ಹೊರ ರಾಜ್ಯಗಳ ನಾಟಕಗಳು ಸಹ ನಮ್ಮಲ್ಲಿ ಪ್ರದರ್ಶನವಾಗ ಬೇಕಿದ್ದು, ಇದರಿಂದ ರಂಗಭೂಮಿ ಬೆಳವಣಿಗೆಗೆ ಅನುಕೂಲವಾಗಲಿದೆ.
ಇನ್ನೂ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿರುವ ರಂಗಮಂದಿರಗಳು ದೊಡ್ಡದಾಗಿದ್ದು, ರಂಗ ಚಟುವಟಿಕೆಗಳಿಗಿಂತ ಇತರೆ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಹೀಗಾಗಿ ನಾಟಕಗಳಿಗೆ ಮಾತ್ರ ಸೀಮಿತವಾದ ರಂಗಕೇಂದ್ರಗಳನ್ನು ಕಲ್ಪಿಸುವ ಸಲುವಾಗಿ ಮಿನಿ ರಂಗಮಂದಿರ ನಿರ್ಮಿಸಬೇಕಿದೆ ಎಂದರು.
ಶಾಸಕ ವಾಸು, ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್, ಹಿರಿಯ ರಂಗಕರ್ಮಿ ಪೊ›.ಎಚ್.ಎಸ್. ಉಮೇಶ್, ಲೇಖಕ ಡಿ.ಎ.ಶಂಕರ್, ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಇನ್ನಿತರರು ಹಾಜರಿದ್ದರು.