Advertisement
ನನ್ನನ್ನು ಸೇರಿಸಿ, ನನ್ನ “ನಾಟಕ ನೋಡುವ’ ತಂಡದಲ್ಲಿ ಒಟ್ಟು ಮೂರು ಜನ ಸದಸ್ಯರು. ಮೈಯೆಲ್ಲಾ ಕಣ್ಣಾಗಿ ನ್ಯೂಸ್ ಪೇಪರ್, ಸೋಶಿಯಲ್ ಮೀಡಿಯಾ ನೋಡುತ್ತಾ ಇರುವುದು. ಯಾವುದಾದರೊಂದು ನಾಟಕ ಇದೆಯೆಂದು ಗೊತ್ತಾಯಿತೊ… ಸರಿ… ಒಂದು ಬ್ಯಾಗ್ ಹೆಗಲಿಗೇರಿಸಿಕೊಂಡು, ಹೊತ್ತಾದರೆ ರಿಕ್ಷಾಗೆ ಇರಲಿ ಅಂತ ನೂರು ರೂಪಾಯಿ ಹಿಡಿದುಕೊಂಡು ಹೊರಡುವುದು. ತುಂಬಾ ಮುಂದೆಯೂ ಅಲ್ಲದ, ಹಿಂದೆಯೂ ಅಲ್ಲದ ಸೀಟುಗಳಲ್ಲಿ ಕುಳಿತು ಒಡ್ಡೋಲಗ ಕೊಟ್ಟೆವೆಂದರೆ ಯಾವ ಬ್ರಹ್ಮನಿಗೂ ನಮ್ಮನ್ನು ಎಬ್ಬಿಸಲು ಸಾಧ್ಯವಿಲ್ಲ. ಎಷ್ಟೇ ದೊಡ್ಡ ವಿಐಪಿ ಬಂದರೂ ನಮ್ಮ ಮುಖದ ರಾಜಗಾಂಭೀರ್ಯ ಮಾಸುವುದಿಲ್ಲ. ಆದರೆ ಅದೇ ಯಾವತ್ತೋ ನೋಡಿ ಇಷ್ಟವಾದ ನಟ-ನಟಿ ಬಂದರೆ, ಎನರ್ಜಿ ಸಿಕ್ಕರೂ ಚಲಿಸಲಾಗದೆ ಚಡಪಡಿಸುತ್ತಿರುವ ಎಲೆಕ್ಟ್ರಾನುಗಳಂತೆ ನಮ್ಮ ನಮ್ಮ ಕಕ್ಷೆಯಲ್ಲಿಯೇ ಕೂತು ಕಕಮಕ ಗುಟ್ಟುತ್ತೇವೆ.
Related Articles
Advertisement
ನಾಟಕ ನೋಡಿದ್ದಷ್ಟಕ್ಕೇ ಮುಗಿಯಲಿಲ್ಲ. ದಾರಿಯುದ್ದಕ್ಕೂ ಬಸ್ಸಿನಗಲಕ್ಕೂ ನಾಟಕದ ಬಗ್ಗೆ ಚರ್ಚೆ. ಬಸ್ಸಿನಿಂದ ಇಳಿಯುವಾಗಲೂ, ಕೊನೆಯ ಮೆಟ್ಟಿಲಲ್ಲಿ ನಿಂತು ಸಾಧ್ಯವಾದಷ್ಟು ಹೇಳಿ, ನಾಳೆ ಮುಂದುವರಿಸಲಿಕ್ಕಿದೆ ಅಂತ ಸೂಚನೆ ನೀಡಿ ಇಳಿಯುವುದು. ಮರುದಿನ ತರಗತಿಯಲ್ಲಿ “ಹೇಗಿತ್ತು ನಾಟಕ?’ ಅಂತ ಕೇಳುವ ಒಂದಿಬ್ಬರಾದರೂ ಸಿಗುತ್ತಾರೆ. ಸಿಕ್ಕಿದರೊ? “ಸಿಕ್ಕಿದರು’ ಅಂತ ಒಂದೇ ಹಿಡಿತಕ್ಕೆ ಅವರ ಕಿವಿ ನಮ್ಮ ಉಪಯೋಗಕ್ಕಿರುವ ಸೊತ್ತು ಅಂತ ಭಾವಿಸಿ ಕೊರೆಯಲಾರಂಭಿಸುತ್ತೇವೆ. ನಾಟಕದ ಮೊದಲನೇ ಬೆಲ್‌ನಿಂದ ಹಿಡಿದು, ಕೊನೆಯ ಹಂತದ ಪಾತ್ರ ಪರಿಚಯ ತನಕ ಸಿಕ್ಕ ಸ್ವಲ್ಪ ಸಮಯದಲ್ಲಿ ಅವರ ತಲೆಗೆ ಹಸ್ತಾಂತರಿಸುತ್ತೇವೆ. ನಾಟಕದ ಬಗೆಗೆ ಹೇಳುವುದರ ಜೊತೆಜೊತೆಗೆ ಒಂಭತ್ತು ಒಂಭತ್ತೂವರೆ ಹೊತ್ತಿಗೆ ಕುಡುಕರು ತುಂಬಿರುವ ಬಸ್ಸು ಹತ್ತಿ ಬಂದ ನಮ್ಮ ಧೈರ್ಯದ ಬಗ್ಗೆ ಮಹಿಳಾ ಸಬಲೀಕರಣದ ಬಗ್ಗೆ ಹೇಳುವುದು ಮತ್ತೂ ಹೆಮ್ಮೆಯ ವಿಷಯ.
ಇತ್ತೀಚೆಗಷ್ಟೇ ರಂಗಾಯಣ ಮಂಗಳೂರಿಗೆ ಬಂದಿದ್ದಾಗ ನಡೆದ ಮೂರೂ ನಾಟಕಗಳನ್ನು ನೋಡಿದೆವು. ಮೊನ್ನೆ ಮೊನ್ನೆ ಅರೆಹೊಳೆ ನಾಟಕೋತ್ಸವದಲ್ಲಿ ನೀನಾಸಂನ ನಾಟಕಗಳನ್ನು ನೋಡಿದೆವು. ಕಲಾವಿದರ ಹೆಸರಿನ ಜೊತೆ ಸುಳ್ಯ, ಬೆಳ್ತಂಗಡಿ, ಉಡುಪಿ ಅಂತ ಕೇಳಿದಾಗೆಲ್ಲ ಒಂದು ರೀತಿಯ ಖುಷಿ. ನೀನಾಸಂ, ರಂಗಾಯಣದವರು ಪ್ರಸ್ತುತಪಡಿಸುವ ನಾಟಕಗಳನ್ನು ಕುರಿತು ಚರ್ಚೆ ಮಾಡಲಿಕ್ಕೆ ಅಂತ ಒಂದು ತಂಡವೇ ಇದೆ ಕಾಲೇಜ್‌ನಲ್ಲಿ. ಕ್ಲಾಸ್‌ರೂಮ್, ಕ್ಯಾಂಟೀನ್, ಆಟದ ಮೈದಾನ, ಗೇಟ್ ಹೀಗೆ ಎಲ್ಲೆಂದರಲ್ಲಿ ಸ್ಫೂರ್ತಿ ಬಂದಲ್ಲಿ ನಿಂತು ಮಾತಾಡಿ, ಮಾತಾಡಿ, ಮಾತನಾಡುತ್ತಲೇ ಇರುವುದೂ ಒಂದು ಹುಚ್ಚು. ನಾಟಕ ನೋಡಿ ನೋಡಿ ಮರುಳಾದವರು ನಾವು. ನಾಟಕ ಮಾಡಿ ಮರುಳಾಗಲು ಮೈಸೂರಿನ ರಂಗಾಯಣಕ್ಕೆ ಹೋಗಿದ್ದೆವು. “ನಾವೂ ನಾಟಕ ಮಾಡಿದ್ದೇವೆ’ ಅನ್ನೋ ಹೆಚ್ಚುಗಾರಿಕೆಯೇನಲ್ಲ. ಅವಕಾಶ ಸಿಕ್ಕಿದ್ದು ವಿದ್ಯಾರ್ಥಿ ಜೀವನ ಪುಣ್ಯ. ಎಂಥೆಲ್ಲ ಮಹಾನ್ ಕಲಾವಿದರು ಆ ವೇದಿಕೆಯಲ್ಲಿ ಓಡಾಡಿದ್ದಾರೊ… ಅವರಿಟ್ಟ ಹೆಜ್ಜೆಯ ಮೇಲೆ ನಾವು ಅಂಬೆಗಾಲಿಟ್ಟು ನಾಟಕ ಮಾಡಿದ್ದೇವೆ ಅನ್ನೋ ಕಲ್ಪನೆಯೇ ಎಷ್ಟು ಖುಷಿ ಕೊಡುತ್ತೆ ಅಲ್ವ? ಜೀವನವಿಡೀ ಕಾಪಿಟ್ಟುಕೊಳ್ಳೋದಕ್ಕೆ ಇಂತಹ ಬೆಚ್ಚನೆಯ ಒಂದು ನೆನಪು ಸಾಲದೆ? ಬಿ.ವಿ. ಕಾರಂತರ ಕಲ್ಪನೆಯ ಕಿಂದರಿ ಜೋಗಿಯ ಬೃಹತ್ ಪ್ರತಿಮೆಯೆದುರು ನಿಂತು ತೆಗೆದ ಫೋಟೋ ಮೊಬೈಲ್ ಗ್ಯಾಲರಿಗೆ ಗತ್ತು ತಂದುಕೊಟ್ಟಿದೆ. ಅದನ್ನು ನೋಡಿದಾಗೆಲ್ಲ ಮನುಷ್ಯನಿಗಿರುವ ಅತ್ಯದ್ಭುತ ಕಲ್ಪನಾಶಕ್ತಿಯ ನೆನಪಾಗುತ್ತದೆ.
ಬದುಕಿನಲ್ಲಿ ಸಾವಿರ ಕಷ್ಟ , ನೋವು, ದುಃಖದುಮ್ಮಾನ, ಸಂಕಟಗಳಿದ್ದರೂ ಜೀವನ ಸಹ್ಯವಾಗುವುದು ಹೇಗೆ ಹೇಳಿ? ಅತ್ಯದ್ಭುತವಾದ ಕಲ್ಪನಾಶಕ್ತಿಯಿಂದ. ನಾಟಕ ಪರಿಪೂರ್ಣ ಅಂತನ್ನಿಸದೇ ಇರಬಹುದು. ಬೆಳಕು, ಸಂಗೀತ, ಪ್ರಬುದ್ಧತೆ ಅಂತ ವಿಮರ್ಶೆ ಮಾಡಬಹುದು. ಆದರೂ, ಯಾರೋ ಒಬ್ಬ ನಾಟಕಕಾರನ ಕಲ್ಪನೆಯನ್ನು , ನಿರ್ದೇಶನದ ಕಲ್ಪನೆಯ ಮೂಲಕ ತನ್ನದಾಗಿಸಿಕೊಂಡು ನೋಡುವವರ ಕಲ್ಪನೆಗೆ ಒಂದು ರೂಪ ಕೊಡ್ತಾನೆ ಕಲಾವಿದ. ಕೊನೆಗೂ ಕಲ್ಪನೆಯೆನ್ನುವುದೇ ಅತ್ಯದ್ಭುತ ಅಂತಾಯಿತಲ್ಲ.
ಮಂಗಳೂರಿನಲ್ಲಿ ಎಲ್ಲಾದರೂ ನೀನಾಸಂ, ರಂಗಾಯಣ ಅಥವಾ ಇನ್ನಾವುದೇ ರಂಗನಾಟಕ ಇದೆ ಅಂತ ಗೊತ್ತಾದರೆ, ಎಷ್ಟೇ ಆಲಸ್ಯವಾದರೂ, ಮಸ್ಸಿಲ್ಲದಿದ್ದರೂ, ಮನಸ್ಸು ಮಾಡಿಕೊಂಡು ಒಮ್ಮೆ ಬನ್ನಿ. ಯಥಾಪ್ರಕಾರ, ಮುಂದೆಯೂ ಅಲ್ಲದ ಹಿಂದೆಯೂ ಅಲ್ಲದ ಸೀಟುಗಳಲ್ಲಿ ಕುಳಿತು ನಾವು ಮೂವರು ಒಡ್ಡೋಲಗ ಕೊಟ್ಟಿರುತ್ತೇವೆ.
ಯಶಸ್ವಿನಿ, ಸೈಂಟ್ ಆ್ಯಗ್ನೆಸ್ ಕಾಲೇಜ್, ಮಂಗಳೂರು