ಶಿವಮೊಗ್ಗ: ಅನುದಾನಕ್ಕಾಗಿ ಹುಟ್ಟಿಕೊಳ್ಳುವ ಕಲಾ ತಂಡಗಳನ್ನು ಸ್ಥಳೀಯ ಕಲಾವಿದರು ವಿರೋಧಿಸಿದ್ದರೆ ಇಂದು ಈ ಸ್ಥಿತಿಯೇ ಬರುತ್ತಿರಲಿಲ್ಲ. ಕಲಾವಿದರು ಪ್ರತಿಭಟನಾ ನೆಲೆ ಕಳೆದುಕೊಂಡಿರುವುದರಿಂದ “ರಂಗಭೂಮಿ’ ತೀವ್ರ ನಿಗಾ ಘಟಕ (ಐಸಿಯು) ಸೇರುವ ಸ್ಥಿತಿಗೆ ತಲುಪಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ರಂಗ ಉತ್ಸವ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲಾವಿದರ ಅನುಕೂಲಕ್ಕಾಗಿ ಸರಕಾರ “ಅನುದಾನ’ ಯೋಜನೆ ಜಾರಿಗೆ ತಂದಿದೆ. ಆದರೆ, ಅನುದಾನಕ್ಕೋಸ್ಕರವೆಂದೇ ಹಲವು ಕಲಾತಂಡಗಳು ಹುಟ್ಟಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಏತನ್ಮಧ್ಯೆ ನಿಸ್ವಾರ್ಥ, ಲಾಭದ ಉದ್ದೇಶವಿಲ್ಲದೇ ಹಲವು ಕಲಾವಿದರು ದುಡಿಯುತ್ತಿದ್ದಾರೆ. ಅವರಿಂದಾಗಿಯೇ ರಂಗಭೂಮಿ ಚಟುವಟಿಕೆಗಳು ಇನ್ನೂ ನಡೆಯುತ್ತಿವೆ ಎಂದರು.
ಕಲಾವಿದರು ಮತ್ತು ಪ್ರೇಕ್ಷರಿಗೆ ಜಡತ್ವ ಆವರಿಸಿದೆ. ಒಂದು ವೇಳೆ, ನಾಟಕ, ಲೇಖಕರ ವಿಚಾರಧಾರೆಗಳನ್ನು ತೀಕ್ಷ್ಣವಾಗಿ ಯೋಚಿಸಿ, ವಿಮರ್ಶಿಸಿದಲ್ಲಿ ಈ ಜಡತ್ವ ಕಣ್ಮರೆಯಾಗಲು ಸಾಧ್ಯ. ಕೇವಲ ವೈಭವೀಕರಣಕ್ಕೆ ಮಾತ್ರ ಆದ್ಯತೆ ನೀಡದೇ ಪ್ರತಿಯೊಬ್ಬರಲ್ಲಿ ಜಿಜ್ಞಾಸೆ ಹುಟ್ಟಬೇಕು ಎಂದು ಸಲಹೆ ನೀಡಿದರು.
ರಂಗಭೂಮಿ ರಾಜಾಶ್ರಯದಲ್ಲಿ ಬೆಳೆದು ಬಂದಿಲ್ಲ. ಇದು ಜನಾಶ್ರಯದಲ್ಲಿ ಬೆಳೆದಿದೆ. ಆದರಿಂದು, ರಾಜಾಶ್ರಯದಲ್ಲೂ ಬೆಳೆಯುತ್ತಿರುವ ಕೆಲ ತಂಡಗಳಿವೆ. ಈ “ಜಡತ್ವ’ ಹೋಗಲಾಡಿಸುವುದಕ್ಕಾಗಿ ಭ್ರಷ್ಟಾಚಾರ ಕಿತ್ತೆಸೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಂಜಾವೂರು ಸೌತ್‌ಜೋನ್ ಕಲ್ಚರಲ್ ಸೆಂಟರ್‌ನ ಸದಸ್ಯ ತೊಟ್ಟವಾಡಿ ನಂಜುಂಡಸ್ವಾಮಿ ಮಾತನಾಡಿ, ರಂಗ ಚಟುವಟಿಕೆಗಳು ನಗರ ಕೇಂದ್ರಿತವಾದಲ್ಲಿ ರಂಗಭೂಮಿ ಬೆಳೆಯುವುದಿಲ್ಲ. ಹೀಗಾಗಿ, ಹೆಚ್ಚು ಪ್ರೇಕ್ಷಕರು, ಕಲಾ ತಂಡ ಹಾಗೂ ಕಲಾವಿದರಿರುವ ಗ್ರಾಮೀಣ ಪ್ರದೇಶದಲ್ಲಿ ಇಂತಹ ಉತ್ಸವಗಳನ್ನು ಆಯೋಜಿಸಬೇಕು ಎಂದರು.
ಎಲ್ಲಿ ರಂಗಭೂಮಿಗೆ ಬೆಲೆ ಇದೆಯೋ ಅಂತಹ ಕಡೆಗಳಲ್ಲಿ ಉತ್ಸವಗಳನ್ನು ಆಯೋಜಿಸಿ. ರಂಗಭೂಮಿಗೋಸ್ಕರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿಯುವ ಸುಮಾರು ಜನ ಕಲಾವಿದರು ಹಳ್ಳಿಗಳಲ್ಲಿದ್ದಾರೆ. ಆದರೆ, ಅಂತಹವರ್ಯಾರೂ ಪ್ರಶಸ್ತಿ ಮತ್ತು ಅನುದಾನಕ್ಕೆ ಆಯ್ಕೆಯಾಗಲ್ಲ. ತಮ್ಮಷ್ಟಕ್ಕೆ ತಾವೇ ನಿರ್ಲಿಪ್ತರಾಗಿ ಅವರು ರಂಗಭೂಮಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ರಂಗಭೂಮಿ ಬಲಪಡಿಸುವುದಕ್ಕಾಗಿಯೇ ಹಲವು ಯೋಜನೆ ಜಾರಿಗೆ ತಂದಿದೆ. ಆದರೆ, ಎಲ್ಲೂ ಪೂರ್ಣ ಲಾಭ ಪಡೆಯಲಾಗುತ್ತಿಲ್ಲ. “ರಂಗಭೂಮಿ’ ಕುರಿತು ವಿಚಾರ ಸಂಕಿರಣ ಆಯೋಜಿಸುವುದಕ್ಕಾಗಿ ಯಾವ ವಿಶ್ವವಿದ್ಯಾಲಯಗಳು ಮುಂದೆ ಬರುತ್ತಿಲ್ಲ. ಬರುವ ದಿನಗಳಲ್ಲಿ ಭರತನಾಟ್ಯ, ಮಕ್ಕಳ ಉತ್ಸವ ಆಯೋಜಿಸುವಂತೆ ತಿಳಿಸಿದರು.
ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ ಉತ್ಸವಕ್ಕೆ ಚಾಲನೆ ನೀಡಿ ಎಲ್ಲ ಕಲಾ ತಂಡಗಳಿಗೆ ಶುಭ ಕೋರಿದರು. ನಾಟಕ ಅಕಾಡೆಮಿ ರಿಜಿಸ್ಟರ್ ಡಾ| ಕೆ.ಶೈಲಜಾ ಉಪಸ್ಥಿತರಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಎಂ.ವಿ. ಪ್ರತಿಭಾ ನಿರೂಪಿಸಿದರು.