ಯಾದಗಿರಿ: ಕೊರೊನಾ ಅಲೆಗೆ ತುತ್ತಾಗಿರುವ ಜವಳಿ ಮತ್ತು ಸ್ವರ್ಣೋದ್ಯಮ ಸೇರಿ ಹಲವು ಉದ್ಯಮಗಳ ವಹಿವಾಟು ನೆಲಕಚ್ಚಿದ್ದು, ಇದರಿಂದ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದೀಗ ಪ್ರಮುಖ ಆಚರಣೆಗಳಾದ ಅಕ್ಷಯ ತೃತೀಯ, ರಂಜಾನ್ ಹಬ್ಬಗಳು ಇದ್ದು, ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಬೇಕು ಎನ್ನುವವರಿಗೆ ಬಟ್ಟೆಯೂ ಸಿಗುತ್ತಿಲ್ಲ.
2020ನೇ ಸಾಲಿನಲ್ಲಿ ಮಾರ್ಚ್ ವೇಳೆ ಮದುವೆ ಸಮಾರಂಭಗಳು, ಶುಭ ಕಾರ್ಯಗಳು ನಡೆಯುವ ಸಂದರ್ಭದಲ್ಲಿಯೇ ಆರಂಭವಾದ ಮಹಾಮಾರಿ ಕೊರೊನಾ ಆರ್ಭಟದಲ್ಲಿ ಲಾಕ್ ಡೌನ್‌ದಿಂದ ಕಂಗೆಟ್ಟಿರುವ ವ್ಯಾಪಾರಸ್ಥರಿಗೆ ಕೊರೊನಾ ಎರಡನೇ ಅಲೆಯೂ ಇನ್ನಷ್ಟು ಕಂಗಾಲಾಗಿಸಿದೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 50-60 ಆಭರಣ ಮಳಿಗೆಗಳಿದ್ದು, ಅಂದಾಜು ವಾರ್ಷಿಕ 5ರಿಂದ7 ಕೋಟಿಗಳನ್ನು ವ್ಯವಹಾರ ನಡೆಯುತ್ತಿತ್ತು.
ಅಲ್ಲದೆ ಜವಳಿ ಉದ್ಯಮದ ಸುಮಾರು 70 (ಸಣ್ಣ ಮತ್ತು ದೊಡ್ಡ) ಮಳಿಗೆಗಳಿದ್ದು, ಇವರ ಅಂದಾಜು ವ್ಯವಹಾರ ಸುಮಾರು 7 ಕೋಟಿಯಷ್ಟು ಸ್ಥಗಿತಗೊಂಡಿದೆ. ಇದೀಗ ಬಂದಿರುವ ಬೆಲೆ ಬಾಳುವ ಮದುವೆ ಸೀರೆಗಳು, ರೇಷ್ಮೆ ಸೀರೆ ಸೇರಿದಂತೆ ವಿವಿಧ ಸರಕುಗಳು ಅಂಗಡಿಗಳಲ್ಲಿಯೇ ಉಳಿದಿದೆ. ಕೊರೊನಾ ಮೊದಲ ಅಲೆಯಿಂದ ವ್ಯಾಪಾರ ವಹಿವಾಟು ನಷ್ಟವಾಯಿತು. ಈ ಬಾರಿಯಾದರೂ ಮದುವೆ ಸಮಾರಂಭಗಳು ಆರಂಭವಾಗುತ್ತಿವೆ.
ಉತ್ತಮ ವ್ಯಾಪಾರ ನಡೆಸಬೇಕು ಎಂಬ ನಿರೀಕ್ಷೆಯಲ್ಲಿದ್ದ ಉದ್ಯಮಿಗಳಿಗೆ ಕೊರೊನಾ ಎರಡನೇ ಅಲೆಯೂ ಶಾಕ್ ನೀಡಿದೆ. ಅಕ್ಷಯ ತೃತೀಯ ಮತ್ತು ರಂಜಾನ್ ಹಬ್ಬ ಹತ್ತಿರದಲ್ಲಿಯೇ ಇದ್ದು, ಜವಳಿ ಮತ್ತು ಸ್ವರ್ಣೋದ್ಯಮದಲ್ಲಿ ನಾವೆಲ್ಲ ನಿಯಮ ಪಾಲಿಸಿ ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸಿ ವ್ಯಾಪಾರ ವಹಿವಾಟು ನಡೆಸಲು ಸಿದ್ಧರಿದ್ದೇವೆ. ಇದಕ್ಕೆ ಸರ್ಕಾರ ಕನಿಷ್ಠ ನಿತ್ಯ 2 ತಾಸು ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.