Advertisement
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಭಾನುವಾರ ಎಸ್ಸೆಸ್ಸೆಲ್ಸಿ, ಪಿಯುದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಿನ ಶಿಕ್ಷಣ ವ್ಯವಸ್ಥೆ ಶಿಕ್ಷಕ ಕೇಂದ್ರೀಕೃತವಾಗಿದೆಯೇ ಹೊರತು ವಿದ್ಯಾರ್ಥಿ ಕೇಂದ್ರೀಕೃತವಾಗಿಲ್ಲ. ಶಿಕ್ಷಕರಾದವರು ಪಾಠ ಮಾಡಿದ ತಕ್ಷಣ ನೋಟ್ಸ್ ಬರೆಸಲು ಹೋಗಬೇಡಿ. ಆ ಪಾಠದ ಬಗ್ಗೆ ಪ್ರಶ್ನೆಗಳನ್ನು ತಯಾರಿಸಿ ಮಕ್ಕಳಿಗೆ ಉತ್ತರಿಸಲು ಹೇಳಿ. ರಾಜ್ಯದಲ್ಲಿ ಪುಸ್ತಕ ತೆರೆದು ಉತ್ತರ ಬರೆಯುವ ಪರೀಕ್ಷಾ ಪದ್ಧತಿ ತರಬೇಕು ಎಂದುಕೊಂಡಿದ್ದೇನೆ. ಪರೀಕ್ಷಾ ಹಾಲ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು, ವಿದ್ಯಾರ್ಥಿಗಳು ಅತ್ತಿತ್ತ ನೋಡಬಾರದು ಎನ್ನುವುದು ಸರಿಯಲ್ಲ. ವಿದ್ಯಾರ್ಥಿಗಳೇನು ಅಪರಾಧಿಗಳೇ? ನಮ್ಮಲ್ಲಿರುವ ಪರೀಕ್ಷಾ ಪದ್ಧತಿ ಅವೈಜ್ಞಾನಿಕ. ಇದರಿಂದ ಶೇ.2ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲ. ಮಗುವಿಗೆ ಉತ್ತರ ಗೊತ್ತಿಲ್ಲದಿದ್ದರೆ ಪಕ್ಕದಲ್ಲಿ ನೋಡಿ ಬರೆಯಲು ಅಥವಾ ಪುಸ್ತಕ ನೋಡಿ ಬರೆಯಲು ಅವಕಾಶ ನೀಡಬೇಕೆಂದು ಪ್ರತಿಪಾದಿಸಿದರು.
Related Articles
Advertisement
ಕಷ್ಟಕ್ಕಾಗುವವರು ಹೆಣ್ಣು ಮಕ್ಕಳೇ ಹೊರತು ಗಂಡಲ್ಲ!:ಇಲ್ಲಿ ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಮಕ್ಕಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿದ್ದಾರೆ. ಹೆಣ್ಣು ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚು. ಅವರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಚೆನ್ನಾಗಿ ನಿಭಾಯಿಸುತ್ತಾರೆ. ಯಾವುದೇ ಪರೀಕ್ಷೆಯಿರಲಿ, ಅಲ್ಲಿ ಹೆಣ್ಮಕ್ಕಳೇ ಮುಂದಿದ್ದಾರೆ. ದುರಂತ ಎಂದರೆ ಪಿಯು ನಂತರ ಹೆಣ್ಣು ಮಕ್ಕಳನ್ನು ಪೋಷಕರು ಉನ್ನತ ವ್ಯಾಸಂಗಕ್ಕೆ ಕಳುಹಿಸುವುದಿಲ್ಲ. ಹಳ್ಳಿಯಲ್ಲಿರುವ ನನ್ನ ಮಗಳನ್ನು ಚಾಮರಾಜನಗರಕ್ಕೆ ಕಳುಹಿಸಿದರೆ, ಏನೋ ಎಂತೋ ಆಗಿ ಬಿಡುತ್ತಾಳೆ ಅಂತ ಭಯ. ಆ ತರಹ ಏನೂ ಆಗುವುದಿಲ್ಲ. ನಿಮ್ಮ ಹೆಣ್ಣು ಮಕ್ಕಳನ್ನು ಮೈಸೂರು, ಬೆಂಗಳೂರು, ದೆಹಲಿಗೆ ಕಳುಹಿಸಿ ಓದಿಸಿ. ಸಾಧನೆ ಮಾಡಿ ತೋರಿಸುತ್ತಾಳೆ. ಕೊನೆಗೆ ನಿಮ್ಮ ಕಷ್ಟಕ್ಕಾಗುವುದು ಹೆಣ್ಣು ಮಕ್ಕಳೇ ಹೊರತು ಗಂಡು ಮಕ್ಕಳಲ್ಲ ಎಂದು ಸಚಿವರು ಕಿವಿಮಾತು ಹೇಳಿದರು. ಶಾಲೆಯಲ್ಲಿ ಮೊಬೈಲ್ ಬಳಸಬೇಡಿ:
ಶಾಲೆಯಲ್ಲಿ ಶಿಕ್ಷಕರು ಮೊಬೈಲ್ ಬಳಸಬೇಡಿ. ಸ್ಟಾಫ್ ರೂಂನಲ್ಲಿ ಇಟ್ಟು ಬಿಡಿ. ಶಾಲೆಯಿಂದ ಹೊರಗೆ ಬಳಸಲು ಅಡ್ಡಿಯಿಲ್ಲ. ನಾನು ಮತ್ತು ಜಿಲ್ಲಾಧಿಕಾರಿಯವರು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತೇವೆ ಎಂದು ಹೇಳಿದರು. ಮಕ್ಕಳಿಗೆ ಅತಿ ಶಿಸ್ತು, ಶಿಕ್ಷೆ ಹೇರಬೇಡಿ. ಮಕ್ಕಳನ್ನು ಆ ಕಡೆ ನೋಡಬೇಡ, ಈ ಕಡೆ ನೋಡಬೇಡ ಎನ್ನಬೇಡಿ. ನೋಡಿದರೆ ತಪ್ಪೇನು? ದೇವರ ಸಮನಾದ ಮಕ್ಕಳನ್ನು ಮೂದೇವಿ ಎಂದು ಮೂದಲಿಸಬೇಡಿ. ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವ ಮಕ್ಕಳ ತಲೆ ಸವರಿ ಮಾತನಾಡಿಸಿ ಎಂದು ಸಚಿವರು ಸಲಹೆ ನೀಡಿದರು.