Advertisement

ಪರೀಕ್ಷೆ ಎಂಬ ಅಗ್ನಿದಿವ್ಯ

12:30 AM Feb 24, 2019 | |

ಪರೀಕ್ಷಾ ಭಯ, ಪರೀಕ್ಷಾ ಜ್ವರ ಎಂದೆಲ್ಲ ಆಗೀಗ ಲಘುವಾಗಿ ಬಣ್ಣಿಸಲ್ಪಡುವ  ವಿದ್ಯಾರ್ಥಿಗಳ ಪಾಲಿನ ವಾರ್ಷಿಕ ಒತ್ತಡದ ಲಕ್ಷಣಗಳು ಗೋಚರಿಸುವುದು ಮೊದಲು ಶಾಲೆಗಳಲ್ಲಿ, ನಂತರ ಮನೆಗಳಲ್ಲಿ ! ಸ್ಕೂಲ್‌ಡೇ, ಕಾಲೇಜ್‌ ಟ್ರಿಪ್‌ಗ್ಳಂಥ ಖುಷಿಯ ಪರ್ವ ಮುಗಿದು ಸಿಲೆಬಸ್‌ ಮುಗಿಸಿದ ಮಾಷ್ಟ್ರುಗಳು, ಮೇಡಂಗಳು ಅಶ್ವಮೇಧ ಯಾಗದ ಕುದುರೆಯನ್ನು ಸಿದ್ಧಪಡಿಸುವ ಹಾಗೆ “ಪರೀಕ್ಷಾ ಯಾಗ’ಕ್ಕೆ ಅನುಗೊಳಿಸುತ್ತಾರೆ. 

Advertisement

ಬಿರು ಬೇಸಗೆಯೂ ಪರೀಕ್ಷೆಗಳೂ ಹತ್ತಿರ ಹತ್ತಿರ ಒಂದೇ ಸಮಯಕ್ಕೆ ಪ್ರಾರಂಭವಾಗುವುದು ನಮ್ಮಲ್ಲಿಯ ಬಿಸಿ ತಾಪ ಎದುರಿಸುವ ಸಾಮರ್ಥ್ಯಕ್ಕೆ ಸವಾಲಿನಂತೆ ಭಾಸವಾಗುತ್ತದೆ. ಎರಡರದ್ದೂ ಕಾವು ದಿನದಿಂದ ದಿನಕ್ಕೆ ಏರುತ್ತ ಹೋಗಿ, ಕೊನೆಗೊಂದು ದಿನ ರಜೆ-ಮಳೆಗಳು ಬಂದು ವಾತಾವರಣ ತಣ್ಣಗಾಗುತ್ತದಷ್ಟೆ? ಆದರೂ ರಿಸಲ್ಟ್ ತನಕವೂ ಒಳ ಆತಂಕ ತಪ್ಪಿದ್ದಲ್ಲ. ಮೊದಲೆಲ್ಲ ಪರೀಕ್ಷೆ ಮುಗಿಸಿದ ಮಕ್ಕಳು ಹವಾ ಬದಲಾವಣೆಗಾಗಿ ಅಜ್ಜನ ಮನೆಗೆ ತೆರಳುತ್ತಿದ್ದರಷ್ಟೆ? ಈಗೀಗ ಅಜ್ಜನ ಮನೆಯೇ ಅಲಭ್ಯ. ಇದ್ದ ಅಜ್ಜನ ಮನೆಗಳಲ್ಲೂ ಅವರದ್ದೇ ಆದ ತಲೆಬಿಸಿ, ತಾಪತ್ರಯಗಳು. ಚಿಕ್ಕ ಮಕ್ಕಳಿಗೆ ಸಮ್ಮರ್‌ ಕ್ಯಾಂಪ್‌ಗ್ಳೇ ಗತಿ. ಪಿಯುಸಿಯವರಿಗೆ ಮುಂದಿನ ಕೋರ್ಸುಗಳಿಗಾಗುವ ಪರಿ ಪರಿ ಪರೀಕ್ಷೆಗಳು. ಡಿಗ್ರಿ ಮುಗಿಸಿದವರಿಗೆ ತರಬೇತಿ ಪರೀಕ್ಷೆಗಳು.

ಅಂತೂ ಮುಂದಿನ ಜೀವನ ಸುಗಮವಾಗಬೇಕೆಂಬ ಆಶಯದಿಂದ ವಿದ್ಯಾರ್ಥಿ ಜೀವನದ ಪರೀಕ್ಷೆಗಳನ್ನು ಸುಗಮವಾಗಿ ಎದುರಿಸಿ ಉತ್ತಮ ಅಂಕ, ಉತ್ತಮ ಉದ್ಯೋಗ, ಉತ್ತಮ ಬದುಕು… ಇದು ನಿರಂತರವಾಗಿ ನಡೆದುಕೊಂಡು ಬಂದ ಪ್ರಕ್ರಿಯೆ. ಬದಲಾಯಿಸಲಾರೆವು. ಬದಲಾಯಿಸಲೂ ಕೂಡದು. ಭವ್ಯ ಭವಿತವ್ಯಕ್ಕೆ ವಿದ್ಯೆಯೇ ತಾನೆ ನಾಂದಿ?

ಪರೀಕ್ಷಾ ಭಯ, ಪರೀಕ್ಷಾ ಜ್ವರ ಎಂದೆಲ್ಲ ಆಗೀಗ ಲಘುವಾಗಿ ಬಣ್ಣಿಸಲ್ಪಡುವ ಈ ವಿದ್ಯಾರ್ಥಿಗಳ ಪಾಲಿನ ವಾರ್ಷಿಕ ಒತ್ತಡದ ಲಕ್ಷಣಗಳು ಗೋಚರಿಸುವುದು ಮೊದಲು ಶಾಲೆಗಳಲ್ಲಿ, ನಂತರ ಮನೆಗಳಲ್ಲಿ. ಸ್ಕೂಲ್‌ಡೇ, ಕಾಲೇಜ್‌ ಟ್ರಿಪ್‌ಗ್ಳಂಥ ಖುಷಿಯ ಪರ್ವ ಮುಗಿದು ಸಿಲೆಬಸ್‌ ಮುಗಿಸಿದ ಮಾಷ್ಟ್ರುಗಳು, ಮೇಡ್‌ಂಗಳು ಅಶ್ವಮೇಧ ಯಾಗದ ಕುದುರೆಯನ್ನು ಸಿದ್ಧಪಡಿಸುವ ಹಾಗೆ “ಪರೀಕ್ಷಾ ಯಾಗ’ಕ್ಕೆ ಸಿದ್ಧತೆ ಪ್ರಾರಂಭಿಸುತ್ತಾರೆ.

“”ಪರೀಕ್ಷೆ ಹತ್ತಿರವಾಯ್ತು. ಇನ್ನೂ ಸೀರಿಯಸ್‌ ಆಗಿಲ್ಲ ನೀವು” ಎಂಬುದು ಪ್ರಾರಂಭಿಕ ಎಚ್ಚರಿಕೆ. ವಿದ್ಯಾರ್ಥಿಗಳು ಎಚ್ಚೆತ್ತುಕೊಂಡರೋ ಸರಿ. ಇಲ್ಲವಾದರೆ ಟೀಚರ್‌ಗಳ ವಾರ್ನಿಂಗ್‌ ವರಾತ ದಿನದಿಂದ ದಿನಕ್ಕೆ ಬಿಗಿಯಾಗುತ್ತ ಹೋಗುತ್ತದೆ. ಚಿಕ್ಕ ಮಕ್ಕಳಿಗಂತೂ ಪರೀಕ್ಷೆ ಎಂಬುದೊಂದು ಆಟವಾಡುವದನ್ನು ತಪ್ಪಿಸಲೆಂದೇ ಇರುವ ತೊಡರಾಗಿ ಕಾಣುತ್ತದೆ. “”ಪರೀಕ್ಷೆ ಬಂತು ಇನ್ನು ಆಟವೆಲ್ಲ ಬಂದ್‌” ಎಂಬ ಆಜ್ಞೆ ಅಮ್ಮಂದಿರಿಂದ ಬರುತ್ತದೆ.

Advertisement

ಪರೀಕ್ಷೆಗಳ ಹಂತ
ಪರೀಕ್ಷೆ ಪರೀಕ್ಷೆಯೇ. ಅದರಲ್ಲಿ ಹಂತವಿದೆಂಥ? ಎನ್ನಿಸಬಹುದು. ಶಾಲೆಗೆ ಹೋಗುವುದನ್ನೇ ದ್ವೇಷಿಸುವ ಹಠಮಾರಿ ಚಿಕ್ಕಮಕ್ಕಳು ಪರೀಕ್ಷೆಯನ್ನು ಒಂದು ಹೆಚ್ಚುವರಿ ಶಿಕ್ಷೆಯಾಗೇ ಭಾವಿಸುತ್ತಾರೆ. ಈ ಹಂತದ ಪರೀಕ್ಷೆಗಳಿಗೆ ತಂದೆತಾಯಿಗಳ ಅಕ್ಕರೆಯ ಮಾರ್ಗದರ್ಶನದ ಅಗತ್ಯ ಹೆಚ್ಚಿರುತ್ತದೆ. ಚಿಕ್ಕ ಮಕ್ಕಳಲ್ಲಿ ಗೊಂದಲವಿಲ್ಲದೆ ಆತಂಕ ಸೃಷ್ಟಿಸಿದ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಪ್ರಾರಂಭದಿಂದಲೂ ಮನೆಯಲ್ಲೇ ಪ್ರಾರಂಭವಾಗಬೇಕು.ಹೆಜ್ಜೆ ಬಲಿತ ಮಕ್ಕಳಲ್ಲಿಯೇ ಧೈರ್ಯ, ಆತ್ಮವಿಶ್ವಾಸ ತುಂಬುವ ಚಿಕ್ಕಪುಟ್ಟ ಪ್ರಯತ್ನಗಳನ್ನು ತಂದೆತಾಯಂದಿರು ಮಾಡಲೇಬೇಕು. ಸಣ್ಣ ಸಣ್ಣ ಸವಾಲುಗಳನ್ನು ಸ್ವೀಕರಿಸುವ ತರಬೇತಿ, ತಮ್ಮ ತಮ್ಮ ವಸ್ತುಗಳನ್ನು ಶಾಲಾ ಪರಿಕರಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುವ ಪರಿಪಾಠ, ಶಾಲೆಯ ಕುರಿತಾಗಿ, ಟೀಚರುಗಳ ಕುರಿತಾಗಿ ಗೇಲಿ ಮಾತುಗಳನ್ನು ಆಡಲೇಬಾರದು. ಶಾಲೆಗೆ ಹೋಗುವ ಕೆಲಸ ಸಂತೋಷದಾಯಕವಾಗಿರಬೇಕು (ನಾವೆಲ್ಲ ಶಾಲೆ ಎಂದರೆ ಸಂತೋಷದ ವಿಹಾರ ಕೇಂದ್ರ ಎಂದೇ ಭಾವಿಸಿ ಅನುಭವಿಸಿದವರು ತಾನೆ?)

ನಿತ್ಯನಿರಂತರ ತಯಾರಿ
ಪರೀಕ್ಷೆ ಹತ್ತಿರವಾದಾಗ “”ನೀನು ಈ ಥರಾ ಹ್ಯಾಂಡ್‌ರೈಟಿಂಗ್‌ ಬರೆದರೆ ಮಾರ್ಕ್‌ ಬಂದಂತೇ” ಎಂದು ಗದರಿಸುವ ಬದಲು ಅಕ್ಷರ ಕಲಿಯುವ ಸಂದರ್ಭದಲ್ಲೇ ಚಂದದ ಕೈಬರಹ, ನೇರ ನೆಟ್ಟನ ಸಾಲುಗಳು, ಚಿತ್ರ ಬಿಡಿಸುವ ಕಲೆಗಾರಿಕೆ ಇವುಗಳನ್ನು ಸುಧಾರಿಸುತ್ತ ಬೆನ್ನುತಟ್ಟುತ್ತ ಆದಷ್ಟು ಮನುಷ್ಯ ಸಂಪರ್ಕದಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು.

ಇಂದಿನ ಧನವಂತ ಉದ್ಯೋಗಸ್ಥ ದಂಪತಿಗಳು ಮಗುವಿನ ಸುತ್ತಲೂ “ಆನ್‌ಲೈನ್‌’ನಲ್ಲಿ ತರಿಸಿದ ಬೇಕಾದ, ಬೇಡಾದ ಆಟದ ಸಾಮಾನುಗಳನ್ನು ಸುರಿದು ತಾವು ಕಂಪ್ಯೂಟರ್‌ನಲ್ಲೋ ಮೊಬೈಲ್‌ನಲ್ಲೋ ಮುಳುಗಿ ಬಾಲಚೇಷ್ಟೆಗಳ ಮೂಲಕವೇ ತಿಳುವಳಿಕೆ ನೀಡುವ ಅಪೂರ್ವ ಅವಕಾಶವನ್ನೇ ಇಲ್ಲವಾಗಿಸಿಬಿಡುತ್ತಾರೆ. ತಂದೆತಾಯಿಗಳ ಪ್ರೀತಿಯ ಪ್ರೋತ್ಸಾಹದ ಅಗತ್ಯ ಎಳವೆಯಿಂದಲೇ ಮಗುವಿನ ಪಾಲಿಗಿರಬೇಕಾಗುತ್ತದೆ.

ನಿತ್ಯ ಕಲಿಕೆಯ ಮಹತ್ವವನ್ನು  ಅರಿತ ಪೋಷಕರ ಮಗು ಅವತ್ತಿನ ಪಾಠವನ್ನು ಅವತ್ತೇ ಮನನ ಮಾಡಿಕೊಳ್ಳುವ ಮೂಲಕ ಪರೀಕ್ಷೆ ಬಂದಾಗ ಒಮ್ಮೆಲೆ ಎಲ್ಲವನ್ನೂ ತಲೆಮೇಲೆ ಬಿದ್ದಂತೆ ಮಾಡಿಕೊಂಡು ಗಾಬರಿಯಾಗುವುದಿಲ್ಲ. ಹಗುರಾದ ವಾತಾವರಣವನ್ನು ನಿರ್ಮಿಸಿಕೊಂಡು ಉಲ್ಲಾಸದ ಮನಸ್ಥಿತಿಯಲ್ಲೇ ಓದುವ ಹವ್ಯಾಸ ಬೆಳೆದರೆ ಓದಿನ ಒತ್ತಡ ಕಾಡುವುದಿಲ್ಲ.

ನಿರ್ಣಾಯಕ ಪರೀಕ್ಷೆಗಳು
ಎಲ್ಲ ತರಗತಿಯ ಪರೀಕ್ಷೆಗಳೂ ಮಹತ್ವವೇ ಆದರೂ ಏಳನೇ ಕ್ಲಾಸು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅತೀವ ಪ್ರಾಮುಖ್ಯತೆ ಇದೆ. ಆರ್ಟ್ಸ್ , ಸೈನ್ಸ್‌, ಕಾಮರ್ಸ್‌…  ಎಂಬ ಮೂರು ಕವಲುಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಸವಾಲು. “ಎಸ್ಸೆಸ್ಸೆಲ್ಸಿ’ ನಂತರ ಏನು? ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೋಸ್ಕರ “”ನೀನೀ ವರ್ಷ ಎಸ್ಸೆಸ್ಸೆಲ್ಸಿ ನೆನಪಿರಲಿ” ಎಂಬ ಉದ್ಗಾರಗಳು ನಾಲ್ಕೂ ದಿಕ್ಕುಗಳಿಂದ ಅಪ್ಪಳಿಸತೊಡಗಿದಾಗ ಮಗು ಸಹಜವಾಗಿ ಕಂಗೆಡುತ್ತದೆ. ಅದರ ಬದಲು ಪ್ರಾರಂಭದಿಂದಲೇ ಮುಖ್ಯ ಅಂಶಗಳನ್ನು ಗುರುತಿಸಿಕೊಳ್ಳುತ್ತ ಓದುವುದು, ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುತ್ತ ಇರುವುದು ಪರೀಕ್ಷೆಯ ನಿರಂತರ ತಯಾರಿಯನ್ನು ಜಾರಿಯಲ್ಲಿಡುತ್ತವೆ.

ಪಿಯುಸಿ ಪರೀಕ್ಷೆಗಳ ಅಂಕಗಳಂತೂ ಮಗ-ಮಗಳು ಮುಂದೆ ಡಾಕ್ಟರು, ಇಂಜಿನಿಯರಾಗಬೇಕು ಎಂದು ಕನಸು ಕಾಣುವ ತಂದೆ-ತಾಯಿಗಳ ಮಟ್ಟಿಗೆ ಜೀವನ್ಮರಣದ ಪ್ರಶ್ನೆಯಂತೆ ಕಾಡುತ್ತದೆ. ಎಷ್ಟಾದರೂ ಹಣ ತೆತ್ತು ಟ್ಯೂಶನ್‌ಗೆ ಹಾಕುವ ಧಾವಂತದಲ್ಲಿ “ಮಾರ್ಕುಗಳ ಒತ್ತಡ’ ಪರ ತೊಡಗುತ್ತಾರೆ. ಪಿಯುಸಿಯಂಥ ನಿರ್ಣಾಯಕ ಪರೀಕ್ಷೆಗಳಲ್ಲಿ ಒಂದೊಂದು ಅಂಕವೂ ಮಹತ್ವದ್ದೇ ಆದರೂ ಅಂಕಗಳಷ್ಟೇ ಮಹತ್ವದ್ದು ಜೀವನ ಮೌಲ್ಯ ಎಂಬ ಪ್ರಾಮಾಣಿಕತೆಯನ್ನು ಮಗುವಿನಲ್ಲಿ ತುಂಬುವ ಕೆಲಸ ಮಾಡಬೇಕು.

ಪರೀಕ್ಷೆಯೆಂಬ ಹೂವಿನ ಚೆಂಡು
ಹಿಂದಿನ ಸಾಲಿನ ಹುಡುಗರನ್ನು ಗೇಲಿ ಮಾಡಿ ಬರೆದ ಕವಿತೆಯಲ್ಲಿ ಕವಿ ಕೆ. ಎಸ್‌. ನರಸಿಂಹಸ್ವಾಮಿಯವರು ಪರೀಕ್ಷೆಯೆಂಬುದು ಹೂವಿನ ಚೆಂಡು, ಚಿಂತಿಸಬಾರದು ದುರ್ಗತಿಗೆ ಎಂದಿದ್ದಾರೆ. ನಿಜ “ನಿತ್ಯ ತಯಾರಿ’ ಎಂಬ ವಿದ್ಯಾರ್ಥಿ ವ್ರತವನ್ನು ಪಾಲಿಸುತ್ತ ಬಂದ ಪರೀಕ್ಷಾರ್ಥಿಗೆ ಪರೀಕ್ಷೆ ಎಂಬುದು ಹೂವೆತ್ತಿದಂತೆ ಹಗುರದ ಅನುಭವವೇ ಆಗಿರುತ್ತದೆ.

ಗ್ರೂಪ್‌ ಸ್ಟಡಿ ಎಂಬ ಗುಂಪು ಅಭ್ಯಾಸ
ಸಾಮಾನ್ಯವಾಗಿ ಮನೆಯ ಒಂದು ಪ್ರಶಾಂತ ಸ್ಥಳದಲ್ಲಿ ಕೂತು ಓದುವುದು, ಮುಖ್ಯ ಪಾಯಿಂಟುಗಳನ್ನು ಗುರುತಿಸಿಟ್ಟು ಬರೆದುಕೊಳ್ಳುತ್ತ ನೆನಪಿಡುವುದು ಆದರ್ಶ ಕ್ರಮದ ಓದಾದರೂ ಸಮಾನಾಸಕ್ತ ಸ್ನೇಹಿತರು -ಸ್ನೇಹಿತೆಯರು ಒಂದೆಡೆ ಕೂತು ಹಳೆಯ ಪ್ರಶ್ನೆಪತ್ರಿಕೆಗಳನ್ನು ಓದಿ ಪ್ರಶ್ನೆ ಕೇಳುವವರೊಬ್ಬರು, ಉತ್ತರ ಹುಡುಕಿ ಹೇಳುವವರೊಬ್ಬರು ಹೀಗೆ ಮಾಡಿದರೆ “”ಓದಿ ಓದಿ ಬೋರ್‌ ಬಂತು ಮಾರಾಯಾ” ಎಂಬ ಉದ್ಗಾರಕ್ಕೆಡೆ ಇರುವುದಿಲ್ಲ. ಆದರೆ, ಈ ಗುಂಪು ಬೇಡದ ಚರ್ಚೆಯಲ್ಲಿ, ಮೊಬೈಲ್‌ ವೀಕ್ಷಣೆಯಲ್ಲಿ ತೊಡಗಿ ಅದೂ ಇದೂ ಇಲ್ಲವಾಗಿ ವ್ಯರ್ಥ ಕಾಲಹರಣವಾಗದಂತೆ ನೋಡಿಕೊಳ್ಳುವುದು ಪೋಷಕರ ಹೊಣೆಯೇ ಆಗಿರುತ್ತದೆ. ಕಾಲೇಜು, ಸ್ನಾತಕೋತ್ತರ ಪರೀಕ್ಷೆಗಳ ಹಂತದಲ್ಲಿ ಈ ಬಗೆಯ ಕಂಬೈಂಡ್‌ ಸ್ಡಡಿ ಯಶಸ್ವಿಯಾಗುವುದು ಹೆಚ್ಚು. ಚಿಕ್ಕ ಮಕ್ಕಳ ಗುಂಪುಗದ್ದಲಕ್ಕೆ ಈ ಕ್ರಮ ಹೇಳಿಸಿದ್ದಲ್ಲ.

ಹಳೆ ಪ್ರಶ್ನೆಪತ್ರಿಕೆಗಳಿರಲಿ ಜತೆಯಲ್ಲಿ
ಎಸ್‌ಎಸ್‌ಎಲ್‌ಸಿ, ಪಿಯುಸಿಗಳಂಥ ನಿರ್ಣಾಯಕ ಪರೀಕ್ಷೆಗಳಲ್ಲಿ ಹಳೆಯ ಪ್ರಶ್ನೆಪತ್ರಿಕೆಗಳನ್ನು ಒಂದು ಕಡೆಯಿಂದ ಬಿಡಿಸುತ್ತ ಹೋಗುವುದು ಅತ್ಯಂತ ಉಪಯುಕ್ತವಾದ ಕ್ರಮ. ಸಿಲೆಬಸ್‌ ಬದಲಾವಣೆಯಾಗಿರದಿದ್ದಲ್ಲಿ ಅವೇ ಅಧ್ಯಾಯದ ಅನೇಕ ಪ್ರಶ್ನೆಗಳು ಬರಲೇಬೇಕು. ಇಂಥ ಎಂಟØತ್ತು ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಒಂದೂ ಬಿಡದೆ ಕರಗತ ಮಾಡಿಕೊಂಡಲ್ಲಿ ಪುನಃ ಪುನರಾವರ್ತಿತ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ನೋಡಿದಾಕ್ಷಣ ಪರಿಚಿತ ಪ್ರಶ್ನೆಯಂತೇ ಭಾಸವಾಗಿ ಉತ್ತರಿಸಲು ಸುಲಭವಾಗುತ್ತದೆ. ಕೆಲವು ಕಡ್ಡಾಯವಾಗಿ ಬರುವ ಪ್ರಶ್ನೆಗಳನ್ನು ಗುರುತಿಸಿ ನೆನಪಿಟ್ಟುಕೊಳ್ಳುವಂತೆ ತಿಳಿಸುವುದು ರಿವಿಜನ್‌ ಮಾಡಿಸುವ ಅಧ್ಯಾಪಕರ ಜವಾಬ್ದಾರಿ. ಮನೆಯಲ್ಲಿ ಮಕ್ಕಳನ್ನು ಓದಿಸುವುದು ಪೋಷಕರ ಜವಾಬ್ದಾರಿ. ತಮ್ಮ ಪರೀಕ್ಷಾ ಜವಾಬ್ದಾರಿಯನ್ನು ಅರಿತುಕೊಳ್ಳುವುದು ಮಕ್ಕಳ ಜವಾಬ್ದಾರಿ! ಓದುವ ಜಾಗವೂ ಮನೆಯೂ ಶಾಂತವಾಗಿರಲಿ ಸಾಮಾನ್ಯವಾಗಿ ಇಂದಿನ ಮಕ್ಕಳಿಗೆ ಓದಲಿಕ್ಕಾಗಿಯೇ ಒಂದು ಜಾಗ, ಕುರ್ಚಿ-ಮೇಜುಗಳಂಥ ಅನುಕೂಲಗಳನ್ನು ತಂದೆತಾಯಿಗಳು ಒದಗಿಸಿಯೇ ಇಟ್ಟಿರುತ್ತಾರೆ. ಓದುವುದೇ ಮುಖ್ಯವಾದ ಮಕ್ಕಳಿಗೆ ಪರಿಕರಗಳು ಮುಖ್ಯವಲ್ಲವಾದರೂ ಗಾಳಿ-ಬೆಳಕು, ಏಕಾಂತ-ನಿಶ್ಶಬ್ದ ಸ್ಥಳಗಳನ್ನು ಕಲ್ಪಿಸಿಕೊಡಬೇಕಾಗುತ್ತದೆ. ತಂದೆತಾಯಿಗಳು ತಾವು ಕರ್ಕಶ ಸ್ವರದ ಧಾರಾವಾಹಿಗಳನ್ನು ನೋಡುತ್ತ ಮಕ್ಕಳ ಬಳಿ, “”ಹೋಗಿಯಾ, ಓದೊಳ್ಳಿ…” ಎಂದು ಅಟ್ಟುವುದು ಸರ್ವಥಾ ಸರಿಯಲ್ಲ. 

ಮಕ್ಕಳ ಭವಿಷ್ಯಕ್ಕಾಗಿ ಕೆಲದಿನಗಳ ಮಟ್ಟಿಗೆ ತಮ್ಮ ಮನರಂಜನೆಯನ್ನು ತ್ಯಾಗ ಮಾಡುವುದೊಳ್ಳೆಯದು. ಪರೀಕ್ಷಾ ಸಮಯದಲ್ಲಿ ಮನೆಯಲ್ಲಿ ಪಾರ್ಟಿಗಳನ್ನಿಡುವುದು, ವಿಶೇಷ ಕಾರ್ಯಕ್ರಮವೇರ್ಪಡಿಸುವುದು ಮೊದಲಾದುವನ್ನು ಮುಂದೂಡಿ ಮಕ್ಕಳ ಸಂಗಾತಿಗಳಾಗಿ ಅವರ ಮನವರಿತು ಅನುಸರಿಸುವುದು ಅಗತ್ಯ.

ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಆದಷ್ಟೂ ಹಿತಮಿತವಾದ ಶುಚಿಯಾದ ಮನೆಯಡುಗೆಯ ಊಟವೇ ಇರಲಿ. “ಚೆನ್ನಾಗಿ ಓದಿದರೆ ಗೋಬಿ ಮಂಚೂರಿ ಕೊಡಿಸ್ತೇನೆ’ ಎಂಬ ಆಮಿಷಗಳು ಬೇಡ. ಕರಿದ ತಿಂಡಿಗಳು ದೇಹಾಲಸ್ಯವನ್ನೂ ನಿದ್ದೆಯನ್ನೂ ತರಿಸುತ್ತವೆ. ಆದಷ್ಟೂ ಹಸಿರು ತರಕಾರಿ, ಹಣ್ಣು , ಯಥೇತ್ಛ ನೀರು… ಇರುವ ಸರಳ ಸಾತ್ವಿಕ ಆಹಾರ ನೀಡಿ. ನಿದ್ರಾದೇವಿಯನ್ನು ದೂರೀಕರಿಸಬೇಡಿ.

ಪರೀಕ್ಷೆಯ ಓದಿಗೂ ನಿದ್ದೆಗೂ ಬಿಡಲಾರದ ನಂಟು. ನಿಯಮಿತವಾಗಿ ಓದಿನ ಅಭ್ಯಾಸವಿಟ್ಟುಕೊಂಡಿದ್ದರೆ ಪರೀಕ್ಷೆಯ ಮುಂಚಿನ ದಿನ ನಿದ್ದೆಗೆಟ್ಟು ಓದುವಂಥ ಒತ್ತಡ ಇರುವುದಿಲ್ಲ. 

ನಿದ್ದೆ ಕಟ್ಟಲು ರಾತ್ರಿಯೆಲ್ಲ ಚಹಾ-ಕಾಫಿ ಕುಡಿದು ಮರುದಿನ ಪಿತ್ತ ತಲೆ ತಿರುಗುವಿಕೆಗೆ ತುತ್ತಾಗಿ ಬಂದಿದ್ದೂ ಬರೆಯಲಾರದ ಸ್ಥಿತಿ ಏರ್ಪಡಬಹುದು. ಆದ್ದರಿಂದ ಪರೀಕ್ಷೆಯ ಮುಂಚಿನ ದಿನ ನಿರುದ್ವಿಗ್ನವಾಗಿ ಮಲಗಿ ನಿದ್ದೆ ಮಾಡಿ ಏಳಿ. ಬೆಳಿಗ್ಗೆ ಸಮಯವಿದ್ದಲ್ಲಿ ಒಮ್ಮೆ ಕಣ್ಣಾಡಿಸಿಕೊಂಡರಾಯ್ತು. ಸಿದ್ಧತೆ ಶಾಂತವಾಗಿರಲಿ. ಓದಿನ ಸಿದ್ಧತೆಯಷ್ಟೇ ಪರೀಕ್ಷೆಗೆ ಹೊರಡುವಾಗ ಧಾವಂತವಿಲ್ಲದೆ ಪೂರ್ವ ತಯಾರಿಯ ಅಂಗವಾಗಿ ಮುಂಚಿನ ದಿನವೇ ಹಾಲ್‌ಟಿಕೆಟ್‌, ಪೆನ್ನು , ಪೆನ್ಸಿಲ್ಲು, ಕ್ಯಾಲ್ಕುಲೇಟರ್‌ಗಳಂಥ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳುವುದೊಳ್ಳೆಯದು. ಪರೀಕ್ಷೆಗೆ ಹೊರಟು ನಿಂತು ಪೆನ್ನೆಲ್ಲಿ? ಶೂ ಎಲ್ಲಿ? ಎಂಬಂಥ ಕೂಗಾಟ ಸಲ್ಲದು.
ಪರೀಕ್ಷಾ ವೇಳಾಪಟ್ಟಿಯನ್ನು ತಂದೆತಾಯಂದಿರೂ ಒಮ್ಮೆ ನೋಡಿಕೊಳ್ಳುವುದೊಳಿತು. ಅರ್ಥಶಾಸ್ತ್ರದ ಪರೀಕ್ಷೆಯ ದಿನ ಇತಿಹಾಸದ ಪರೀಕ್ಷೆಯೆಂದು ತಿಳಿದುಕೊಂಡು ಬಂದು ಕಂಗಾಲಾಗಿದ್ದ ವಿದ್ಯಾರ್ಥಿಯೋರ್ವನನ್ನು ನಾನು ಸಮಾಧಾನಿಸಿ ನೀರು ಕುಡಿಸಿ, “ಕ್ಲಾಸಲ್ಲಿ ಪಾಠ ಮಾಡಿದ್ದು ನಿನಗೆ ನೆನಪಿದೆ, ಹೆದರದೆ ಅರ್ಥಶಾಸ್ತ್ರವನ್ನು ಬರೆ’ ಎಂದು ಹುರಿದುಂಬಿಸಿ ಬರೆಸಿದ್ದೂ , ಆತ ಪಾಸಾಗಿದ್ದೂ ನನ್ನ ಅಧ್ಯಾಪನ ವೃತ್ತಿಯಲ್ಲೇ ನೆನಪಿಡುವ ಘಟನೆ.

ಕೆಲ ವಿದ್ಯಾರ್ಥಿಗಳಿಗೆ ಕೊನೆಯ ಹಂತದ ಓದಿನ ನಡುವೆ ಇಸ್ವಿಗಳನ್ನು , ಪುಟ ಸಂಖ್ಯೆಗಳನ್ನು ಕೈಯಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದು ತುಂಬಾ ಅಪಾಯಕಾರಿ. ವಿಶೇಷ ತನಿಖಾದಳಾಧಿಕಾರಿಗಳು ಪರೀಕ್ಷಾ ಕೊಠಡಿಗೆ ನುಗ್ಗಿ ತಪಾಸಣೆ ನಡೆಸುತ್ತಾರೆ. ಆಗ ಕೈಯಲ್ಲಿ ಏನೇ ಬರೆದರೂ ಅದು ನಕಲು ಅಪರಾಧವೆಂದೇ ಪರಿಗಣಿಸಲ್ಪಡುತ್ತದೆ. ಹಾಗೆಯೇ ಪ್ಯಾಂಟಿನ ಜೇಬುಗಳನ್ನೂ ಶೋಧಿಸಿ ಚೂರುಪಾರು ಕಾಗದಗಳಿರದಂತೆ ನೋಡಿಕೊಳ್ಳುವ ಅಭ್ಯಾಸವಿರಲಿ.

ಪರೀಕ್ಷಾ ಕೊಠಡಿಯಲ್ಲಿ
ನಿಗದಿತ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳನ್ನು ತಲುಪಿಕೊಂಡು ಪರೀಕ್ಷಾ ಕೊಠಡಿಯನ್ನು ನಿರಾತಂಕವಾಗಿ ಹಸನ್ಮುಖೀಗಳಾಗಿ ಪ್ರವೇಶಿಸಿ. “”ಅಯ್ಯೋ ನಂಗೆ ಭಯವಾಗ್ತಿದೆ ಕಣೆ ಏನೂ ನೆನಪಿಲ್ಲ…” ಎಂದು ಹೆದರಿಸುವ ಕ್ಲಾಸ್‌ಮೇಟ್ಸುಗಳನ್ನು ಅವರಷ್ಟಕ್ಕೆ ಬಿಡಿ. ಪ್ರಶ್ನೆಪತ್ರಿಕೆ ಕೈಗೆ ಬರುತ್ತಲೇ ಒಂದು ದೀರ್ಘ‌ ಶ್ವಾಸ ತೆಗೆದುಕೊಂಡು (ನಿಮ್ಮ ಇಷ್ಟದೇವರನ್ನು ನೆನೆಸಿಕೊಂಡರೆ ತಪ್ಪೇನಿಲ್ಲ) ಸಾವಧಾನವಾಗಿ ಪ್ರಶ್ನೆಗಳತ್ತ ಕಣ್ಣು ಹಾಯಿಸುತ್ತ ಬನ್ನಿ. ಒಮ್ಮೆಗೇ ಬರೆಯಲು ಧುಮುಕಬೇಡಿ. ಪ್ರಶ್ನೆಗಳ ಸಂಖ್ಯೆ, ಬ್ಯಾಚ್‌ ನಂಬರ್‌ ಇತ್ಯಾದಿಗಳಲ್ಲಿ ವ್ಯತ್ಯಾಸ ಕಂಡುಬಂದರೆ ಹೆದರದೇ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತರಬೇಕು. ಪಕ್ಕದವರ ಬಳಿ ಯಾವುದೇ ವಿಚಾರ ವಿನಿಮಯ ಕೂಡದು. ಸೆಮಿಸ್ಟರ್‌ ಪದ್ಧತಿಯಲ್ಲಂತೂ ಖಚಿತವಾದ ಐದಾರು ಪ್ರಶ್ನೆಗಳನ್ನು ಬರೆದರೆ ಪಾಸಾಗು ವುದು ಸುಲಭ. ಫೇಲಾಗುವುದೇ ಕಷ್ಟ ಎಂದು ನಾನು ತಮಾಷೆ ಮಾಡುತ್ತಿದ್ದುದಿತ್ತು. ಯಾವ ಪ್ರಶ್ನೆಗಳನ್ನೂ ಬಿಡದೇ ಬರೆಯುವುದು, ಉತ್ತರ ಪತ್ರಿಕೆಗಳಲ್ಲಿ ಕಿಚಿಪಿಚಿ ಗೀಚದೇ ಸ್ವತ್ಛ-ಸುಂದರ ಪ್ಯಾರಾಗಳಲ್ಲಿ ಉತ್ತರಿಸಬೇಕು. ಮಾರ್ಜಿನ್‌ನೊಳಗೆ ಬರೆಯುವುದು, ತೀರಾ ಓದಲಾರದಷ್ಟು ಸಣ್ಣ ಅಕ್ಷರಗಳನ್ನು ಬಳಸುವುದು ಇರಬಾರದು. ಪ್ರಶ್ನೆಗಳ ಸರಿಯಾದ ಸಂಖ್ಯೆ, ಒಂದು ಉತ್ತರ ಮುಗಿದಾಗ ಒಂದು ಗೆರೆ ಎಳೆಯುವುದು ಮೊದಲಾದವು ಒಳ್ಳೆಯ ಅಭ್ಯಾಸ.

ಮೌಲ್ಯಮಾಪಕರನ್ನು ಮಂಗ ಮಾಡಲಾರಿರಿ
ಅನೇಕರು ಉಡಾಫೆ ಧಾಟಿಯಲ್ಲಿ ಏನು ಬರೆದ್ರೂ ಓದುವುದಿಲ್ಲ ಮಾರ್ಕ್‌ ಕೊಡ್ತಾರೆ ಎಂದೆಲ್ಲ ಹೇಳಿರುತ್ತಾರೆ. ಇದು ಸುಳ್ಳು. ಹಾಗೆಯೇ ಸರಿಯಾಗಿ ಓದದ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಕವನ ಬರೆದಿಡುವುದು, “”ನಾನು ಬಡ ಕುಟುಂಬದ ಏಕಮಾತ್ರ ಪುತ್ರ. ತಂದೆ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ. ದಯವಿಟ್ಟು ಪಾಸು ಮಾಡಿ” ಎಂದೆಲ್ಲ ಬರೆಯುವುದು ಮಾಡಿ, ಇದ್ದ ಸದ್ಭಾವನೆಯನ್ನೂ ಕಳೆದುಕೊಂಡು ಫೇಲಾಗುತ್ತಾರೆ.

ಪ್ರಾಮಾಣಿಕ ಹಾಗೂ ನಿರಂತರ ತಯಾರಿಯೊಂದೇ ಪರೀಕ್ಷೆಯನ್ನು ಎದುರಿಸುವ ಏಕೈಕ ಅಸ್ತ್ರ . ಉಳಿದೆಲ್ಲವೂ ಪೂರಕವಷ್ಟೆ. ಇಷ್ಟೆಲ್ಲ ಇದ್ದೂ ಏನೋ ಅನಿರೀಕ್ಷಿತ ಕಾರಣಕ್ಕಾಗಿ ಮಕ್ಕಳು ಫೇಲಾದರೆ, ಕಡಿಮೆ ಅಂಕ ತೆಗೆದುಕೊಂಡರೆ ತಂದೆತಾಯಿಗಳು ಆತಂಕಗೊಂಡು ಆಘಾತವಾದಂತೆ ಹೆದರಬಾರದು. ಜೀವನ ದೊಡ್ಡದು. ಸೋಲು ಶಾಶ್ವತವಲ್ಲ. ಮರಳಿ ಯತ್ನ ಮಾಡಿದಲ್ಲಿ ಯಶಸ್ಸು ನಿಶ್ಚಿತ… ಎಂಬಿತ್ಯಾದಿ ಆಶಾವಾದವನ್ನು ತಾವೂ ಅಳವಡಿಸಿಕೊಂಡು ಮಕ್ಕಳಲ್ಲೂ ಬಿತ್ತಬೇಕು. ಅಂದ ಹಾಗೆ ಮುಂಬರುವ ಎಲ್ಲ ಪರೀಕ್ಷೆಗಳಿಗೂ ವಿದ್ಯಾರ್ಥಿ ಲೋಕಕ್ಕೆ “ಆಲ್‌ ದ ಬೆಸ್ಟ್‌’.

ಪರೀಕ್ಷಾ ಜ್ವರ
ಈಗ ಕೆಲವೇ ವರ್ಷಗಳ ಹಿಂದೆ ಮಂಗಳೂರಿನ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರು ತಮ್ಮ ಬಂಧುಗಳಿಗೆ, ಸ್ನೇಹಿತರಿಗೆ ಒಂದು ಕಾರ್ಡು ಬರೆದು ತಂದೆ-ತಾಯಿಗಳ ಪರೀಕ್ಷಾ ಜ್ವರವನ್ನು ಹಂಚಿದ್ದರು.

“”ಪ್ರಿಯರೇ, ನನ್ನ ಮಗ ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಬರೆಯುತ್ತಿದ್ದಾನೆ. ನಾವಿನ್ನು ಅವನ ಪರೀಕ್ಷೆ ಮುಗಿಯುವ ತನಕ ನಿಮಗೆ ಲಭ್ಯವಿಲ್ಲ. ಮನೆಯಲ್ಲಿ ತುರ್ತುಸ್ಥಿತಿ ಘೋಷಣೆಯಾಗಿರುವುದರಿಂದ ಯೋಗಕ್ಷೇಮಕ್ಕಾಗಿ ಫೋನ್‌ ಮಾಡುವುದಾಗಲೀ, ಅಭ್ಯಾಸ ಬಲದಿಂದ ಮನೆಗೆ ನುಗ್ಗುವುದಾಗಲೀ ಮಾಡಬೇಡಿ. ಪರೀಕ್ಷೆ ಮುಗಿದ ಮೇಲೆ ನಮ್ಮ-ನಿಮ್ಮ ಭೇಟಿ”ಉತ್ತರಕ್ಕೆ ಉತ್ತರ!

ಮೌಲ್ಯ ಮಾಪನಕ್ಕೆ ಕುಳಿತ ನನಗೆ ಒಂದು ಹುಡುಗಿಯ ಕಥೆ ಓದಬೇಕಾಗಿ ಬಂದಿತ್ತು. “”ಸರ್‌, ನನಗೆ ಮದುವೆಯಾಗಿದೆ. ಈ ಪೇಪರು ಭಾರತೀಯ ಅರ್ಥಶಾಸ್ತ್ರ ತುಂಬಾ ಸುಲಭವೆಂದು ನನ್ನ ಅತ್ತೆ-ಮಾವ ಹೇಳುತ್ತಾರೆ. ಇದರಲ್ಲಿ ಐವತ್ತು ಅಂಕಗಳಾದರೂ ಬಾರದಿದ್ದರೆ ಅವರು ನನ್ನನ್ನು ತವರುಮನೆಗೆ ಕಳಿಸುತ್ತಾರೆ. ದಯವಿಟ್ಟು ನಲವತ್ತು ಅಂಕ ನೀಡಿ (ಹತ್ತು ಅಂಕ ಆಂತರಿಕ ಮೌಲ್ಯಮಾಪನದಲ್ಲಿ ಪಡೆದಿದ್ದಾಳಂತೆ) ನನ್ನ ವೈವಾಹಿಕ ಜೀವನ ನೆಮ್ಮದಿಯಾಗುವಂತೆ ಮಾಡಿ”ಅದು ಉತ್ತರಪತ್ರಿಕೆಯಾಗಿರದೆ ಸುದ್ದಿ ಪತ್ರಿಕೆಯಾಗಿದ್ದರೆ “”ಅಲ್ಲವ್ವಾ ತಂಗೀ, ಹತ್ತು ಅಂಕಕ್ಕಾಗಿ ತಾಯಿಮನೆಗೆ ಕಳಿಸುವ ನಿನ್ನ ಅತ್ತೆ-ಮಾವಂದಿರನ್ನು ಮುಂದಾದರೂ ಹೇಗೆ ನಂಬಿ¤? ನೀನಾಗಿ ಐವತ್ತು ಮಾರ್ಕ್ಸ್ ಪಡೆಯುವುದೇ ಒಳ್ಳೆಯದು” ಎಂದೆಲ್ಲ ನಾಲ್ಕು ಬುದ್ಧಿಮಾತು ಹೇಳಬಹುದಿತ್ತೇನೋ. ಆದರೆ, ಮೌಲ್ಯಮಾಪಕನು ಉತ್ತರವನ್ನು ನೋಡಬೇಕೇ ಹೊರತು “ಉತ್ತರಕ್ಕೆ ಉತ್ತರ’ ನೀಡುವಂತಿಲ್ಲ.

– ಭುವನೇಶ್ವರಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next