Advertisement

ದೇವಸ್ಥಾನಗಳು ಸಂಸ್ಕೃತಿ-ಪರಂಪರೆ ಪ್ರತೀಕ

03:54 PM May 06, 2019 | Team Udayavani |

ಲಕ್ಷ್ಮೇಶ್ವರ: ದೇವಸ್ಥಾನಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಪ್ರತೀಕವಾಗಿವೆ. ಮನಶಾಂತಿ, ಧರ್ಮಶಿಕ್ಷಣ, ಆಧ್ಯಾತ್ಮಿಕ ಉನ್ನತಿ, ಸನ್ಮಾರ್ಗ ಕರುಣಿಸುವ ಮತ್ತು ಸಾತ್ವಿಕ ಸಮಾಜ ನಿರ್ಮಾಣದ ಶಕ್ತಿ ಕೇಂದ್ರಗಳಾಗಿವೆ ಎಂದು ಶಿರಹಟ್ಟಿಯ ಫಕ್ಕೀರಸಿದ್ದರಾಮ ಸ್ವಾಮೀಜಿ ಹೇಳಿದರು.

Advertisement

ಬಸಾಪುರ ಗ್ರಾಮದಲ್ಲಿ ನಂದಿಬಸವೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕೋಟಿ ಕೋಟಿ ಸಂಪತ್ತು ಇದ್ದರೂ ದಾನ, ಧರ್ಮ, ಸಹಾಯ, ಸಹಕಾರ ಮಾಡುವುದರಿಂದ ಸಿಗುವ ಸಂತೃಪ್ತಿ ಬೇರೆಲ್ಲೂ ಲಭಿಸುವುದಿಲ್ಲ. ಮನುಷ್ಯ ಸಮಾಜಜೀವಿಯಾಗಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯಕ್ಕೆ ಕೈ ಜೋಡಿಸಿದಾಗ ಮಾತ್ರ ಬದುಕು ಸಾರ್ಥಕತೆ ಹೊಂದುತ್ತದೆ. ಸಮಾಜ ನಮಗೇನು ಮಾಡಿದೆ ಎಂಬುದಕ್ಕಿಂತ ಸಮಾಜಕ್ಕೆ ನಮ್ಮದೇ ಆದ ಶ್ರೇಷ್ಠ ಕೊಡುಗೆ ಕೊಡುವ ವಿಶಾಲ ಮನೋಭಾವ ಹೊಂದಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮೀಜಿ ಮತ್ತು ನೊಣವಿನಕೇರಿಯ ಕಾಡಸಿದ್ಧೇಶ್ವರ ಮಠದ ಕರಿವೃಷಭದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಕಾಯಕದಲ್ಲಿ ನಿಷ್ಠೆ, ಧರ್ಮಾಚರಣೆ, ಪರೋಪಕಾರದಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ದೊರೆತು ಸುಂದರ ಬದುಕು ನಮ್ಮದಾಗುತ್ತದೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡುವ ಪುಣ್ಯ ಕಾರ್ಯಗಳು ಎಂದಿಗೂ ಸ್ಮರಣೀಯವಾಗಿರುತ್ತವೆ. ನೆಮ್ಮದಿಯ ಬದುಕಿಗೆ ಬೇಕಾಗಿದ್ದು ಆಹಾರ, ನಿದ್ದೆ ಮತ್ತು ಆತ್ಮ ಸಂತೋಷ. ಆದ್ದರಿಂದ ನಿತ್ಯ ಮಲಗುವಾಗ ನಾವು ಮಾಡಿದ ಕರ್ಮಗಳ ಬಗ್ಗೆ ಸ್ಮರಿಸಿಕೊಂಡು ಆತ್ಮಾವಲೋಕ್ಕೊಳಗಾಗಬೇಕು. ಪ್ರತಿಯೊಂದು ಸಾಂಪ್ರದಾಯಿಕ ಆಚರಣೆಗಳ ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ. ಆದ್ದರಿಂದ ನಮ್ಮ ಸಂಪ್ರದಾಯ, ಸಂಸ್ಕೃತಿ ಆಚರಣೆ ಮರೆಯಬಾರದು ಎಂದರು.

ಗಂಜಿಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಸ್ವಾಮಿಗಳು, ಲಕ್ಷ್ಮೇಶ್ವರದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು ಉಪಸ್ಥಿತರಿದ್ದರು. ಬೆಳಗ್ಗೆ ದೇವಸ್ಥಾನದಲ್ಲಿ ಹೋಮ ಹವನ, ವಿಶೇಷ ಪೂಜೆ, ಕಳಸಾರೋಹಣ, ದೇವಿ ಮತ್ತು ಮಾರುತಿ ದೇವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಉಪಸ್ಥಿತರಿದ್ದ ಎಲ್ಲ ಶ್ರೀಗಳಿಗೂ ಏಕಕಾಲಕ್ಕೆ ಧನ, ದವಸ-ಧಾನ್ಯ, ಫಲ-ಪುಷ್ಪಗಳಿಂದ ಗ್ರಾಮಸ್ಥರು ತುಲಾಭಾರ ಸೇವೆ ಮಾಡಿದರು. 7 ಜೋಡಿ ಸಾಮೂಹಿಕ ಮದುವೆ ಮತ್ತು ದಾನಿಗಳಿಗೆ ಸನ್ಮಾನ ಮಾಡಲಾಯಿತು.

Advertisement

ಬಸವರಾಜ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ಫಕ್ಕೀರಯ್ಯ ಮುಳಗುಂದಮಠ, ಬಸವರಾಜ ಗಾಂಜಿ, ಬಸವರಾಜ ಹತ್ತಿಕಾಳ, ಡಾ| ಮುರುಗೆಪ್ಪ ಬಿಂಕದಕಟ್ಟಿ, ಕೆ.ಎಸ್‌. ಪಾಟೀಲ, ಡಿ.ಎಂ. ಕೋಡಳ್ಳಿ, ಬಸಣ್ಣ ಗಾಂಜಿ, ಎಫ್‌.ಟಿ. ಕಮಡೊಳ್ಳಿ, ಶಿವಪ್ಪ ಕಾಡಣ್ಣವರ, ಸಿದ್ದಪ್ಪ, ಬಸವಣ್ಣೆಪ್ಪ ತುಂಬಣ್ಣನವರ, ನಿಂಗಪ್ಪ ವಾಲಿಕಾರ, ದುಂಡಪ್ಪ ಹುಲಿಗೆಮ್ಮನವರ, ಮಹೇಶ ಲಮಾಣಿ, ಎಸ್‌.ಪಿ. ಬಳಿಗಾರ, ಬಸಣ್ಣ ಬೆಟಗೇರಿ, ಶಂಕ್ರಣ್ಣ ಕಾಳೆ, ಬಸಮ್ಮ ತಾಂಮ್ರಗುಂಡಿಮಠ, ಬಸವಣ್ಣೆಪ್ಪ ದೊಡ್ಡಮನಿ ಇನ್ನಿತರರಿದ್ದರು. ಮಲ್ಲಯ್ಯ ಭಕ್ತಿಮಠ, ಈಶ್ವರ ಮೆಡ್ಲೇರಿ, ಜಿ.ಎಸ್‌. ಗುಡಗೇರಿ, ರತ್ನಾ ಕುಂಬಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next