Advertisement
- ವಿಹಿಂಪದವರು ಯಾವಾಗಲೂ ಚುನಾವಣೆ ಸಮೀಪಿಸುತ್ತಿರುವಾಗ ಅಯೋಧ್ಯೆ ವಿಚಾರವನ್ನು ಎತ್ತುತ್ತಾರೆ ಎಂಬ ಮಾತಿದೆಯಲ್ಲ?ನಾವು ಯಾವಾಗಲೂ ಚುನಾವಣೆ ದೃಷ್ಟಿಯಿಂದ ಯೋಚಿಸುವುದಿಲ್ಲ. ನಮಗೆ ಹಿಂದೂ ಸಮಾಜದ ಭವಿಷ್ಯ ಮಾತ್ರ ಮುಖ್ಯ. ರಾಜಕಾರಣಿಯೊಬ್ಬ ಚುನಾವಣೆ ಬಗ್ಗೆ ಯೋಚಿಸಿದರೆ, ಮುತ್ಸದ್ಧಿ ಕೆಲವು ಶತ ಮಾನಗಳ ಮುಂದೆ ಆಲೋಚಿಸುತ್ತಾನೆ. ಇಷ್ಟು ದೊಡ್ಡ ಅಧಿವೇಶನದಲ್ಲಿ ಒಂದೇ ಒಂದು ರಾಜಕೀಯ ಚರ್ಚೆ ಮಾಡಿಲ್ಲ. ಕೇವಲ ಮಂದಿರ, ಗೋರಕ್ಷಣೆಯಂಥ ವಿಷಯಗಳ ಬಗೆಗೆ ಮಾತ್ರ ಚರ್ಚಿಸಿದ್ದೇವೆ.
ನಾವು ರಾಮ ಮಂದಿರದ ಮೂಲಕ ರಾಮ ರಾಜ್ಯವೆಂದು ಸ್ಪಷ್ಟಪಡಿಸಿದ್ದೇವೆ. ನಮಗೆ ಮಂದಿರ ವೆನ್ನುವುದು ರಾಮರಾಜ್ಯ ಕಲ್ಪನೆಗೆ ಸಹಕಾರಿ. ಇದು ಹೇಗೆಂದರೆ ಅಸ್ಪೃಶ್ಯತೆ ಮುಕ್ತ ಭಾರತ, ಹಸಿವು ಮುಕ್ತ ಭಾರತ, ಉದ್ಯೋಗ ಭರಿತ ಭಾರತ, ಸಾಲ ಮುಕ್ತ ರೈತ, ಎಲ್ಲರಿಗೂ ಸಿಗುವ ಗುಣಮಟ್ಟದ ಶಿಕ್ಷಣ, ಎಲ್ಲರಿಗೂ ಕೈಗೆಟಕುವ ಆರೋಗ್ಯ ಸೇವೆ ಆದಾಗಲೇ ರಾಮರಾಜ್ಯ ಎನ್ನುವುದು. - ರಾಮ ಮಂದಿರ ನಿರ್ಮಾಣಕ್ಕೆ ರವಿಶಂಕರ್ ಗುರೂಜಿಯವರ ಸಂಧಾನ ಪ್ರಕ್ರಿಯೆಗೆ ಏಕೆ ವಿರೋಧ?
ಯಾವುದೇ ಒಂದು ಸಂಧಾನ ನಡೆಯಬೇಕಾ ದರೂ ಅದಕ್ಕೆ ಸಂಬಂಧಿಸಿದ ಎಲ್ಲ ಪಕ್ಷಗಳೂ ಮಾತುಕತೆಗೆ ಸಿದ್ಧ ಇರಬೇಕು. ಅಯೋಧ್ಯೆ ವಿಷಯದಲ್ಲಿ 1991ರಿಂದಲೂ ಇದುವರೆಗೂ ಸುನ್ನಿ ವಕ್ಫ್ ಮಂಡಳಿಯವರು ಮಾತುಕತೆಗೆ ಬರಲಿಲ್ಲ. ಮಾತುಕತೆಗೆ ಬಾರದವರ ಬಳಿ ಸಂಧಾನ ಹೇಗೆ ಫಲಕಾರಿಯಾದೀತು?
Related Articles
ಪಂಚಸೂತ್ರಗಳ ಕ್ರಿಯಾ ಯೋಜನೆಯನ್ನು ಜಾರಿಗೊಳಿಸುತ್ತೇವೆ. ಬಾವಿ, ಶ್ಮಶಾನ, ಊಟದ ವಿಷಯದಲ್ಲಿ ಸಮಾನತೆ ಇರಬೇಕು. ದಲಿತರ ಮನೆಗೆ ಹೋಗಿ ಬರುವ ಸಂಬಂಧ ಇರಿಸಿಕೊಳ್ಳಬೇಕು, ದಲಿತ ಹೆಮ್ಮಕ್ಕಳನ್ನು ಮನೆಗೆ ಕರೆದು ಕನ್ಯಾಪೂಜೆ ನಡೆಸಬೇಕು, ಎಲ್ಲರಿಗೂ ಶಿಕ್ಷಣ, ಉದ್ಯೋಗ ದೊರಕಬೇಕು. ಇದಕ್ಕೆ ಸಂತರೂ ದನಿಗೂಡಿಸಿ ಅಸ್ಪೃಶ್ಯತೆಗೆ ಶಾಸ್ತ್ರದ ಮಾನ್ಯತೆ ಇಲ್ಲ ಎಂದು ಘೋಷಿಸಿದ್ದಾರೆ.
Advertisement
– ಬಡತನಮುಕ್ತ, ಹಸಿವು ಮುಕ್ತ ಭಾರತದ ಕಲ್ಪನೆ ಏನು? ನನಗೆ ಹೆಚ್ಚಿನ ಚಿಂತೆ ಇರುವುದು ದೇಶದ 70 ಕೋಟಿ ರೈತರ ಬಗ್ಗೆ. ಯಾರಿಗೂ ಊಟಕ್ಕೆ ತೊಂದರೆ ಆಗಬಾರದು. ರೈತರು ಇಂದು ವಲಸೆ ಹೋಗುತ್ತಿದ್ದಾರೆ. ಇವರು ಹಸಿವಿನಿಂದ ಬಳಲದಂತೆ ನೋಡುವ ಬಲು ದೊಡ್ಡ ಜವಾಬ್ದಾರಿ ಇದೆ. ಸಾಲಮುಕ್ತ ರೈತರು ನಿರ್ಮಾಣವಾಗಬೇಕು. ಶೇ. 25-30ರಷ್ಟು ಖರ್ಚು ರಸಗೊಬ್ಬರ, ಕೀಟ ನಾಶಕಕ್ಕೆ ಆಗುತ್ತಿದೆ. ಇದರಿಂದ ಅವರನ್ನು ಮುಕ್ತ ಗೊಳಿಸಬೇಕು. ವಿವಿಧ ರಾಜ್ಯಗಳಲ್ಲಿ ಪ್ರತಿವರ್ಷ 15,000 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರಮುಕ್ತ ಭಾರತವನ್ನು ಸೃಷ್ಟಿಸಬೇಕಾಗಿದೆ. ಕಡಿಮೆ ಮಳೆ ಬರುವಲ್ಲಿಯೂ ಉತ್ತಮ ವಾತಾವರಣ ಸೃಜಿಸಬೇಕಾಗಿದೆ. ಕೃಷಿಕರನ್ನು ವನ್ಯಜೀವಿಗಳ ಉಪಟಳದಿಂದ ಬಚಾವು ಮಾಡಬೇಕಾಗಿದೆ. ರೈತ ಬೆಳೆದ ಬೆಳೆಗೆ ಸಾಕಷ್ಟು ಹೆಚ್ಚು ಬೆಲೆ ಸಿಗಬೇಕು, ಈಗ ಸಿಗುತ್ತಿಲ್ಲ. ಸಮೃದ್ಧ ರೈತನನ್ನು ಕಾಣಬೇಕು. ಇದು ನಮಗಿರುವ ದೊಡ್ಡ ಸವಾಲು. – ಉದ್ಯೋಗ ಸೃಷ್ಟಿ ನಿರೀಕ್ಷೆಯಂತೆ ನಡೆಯುತ್ತಿಲ್ಲವೆಂದರ್ಥವೆ?
ಭಾರತದಲ್ಲಿ 10 ಕೋಟಿ ನಿರುದ್ಯೋಗಿಗಳು ಇದ್ದಾರೆ. ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಹೆಚ್ಚಾದರೂ ಅದಕ್ಕೆ ಸರಿಯಾಗಿ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಹಿಂದಿನಿಂದಲೂ ಇರುವ ನಮ್ಮ ದೇಶದ ತಪ್ಪು ಆರ್ಥಿಕ ನೀತಿಯ ಫಲಿತಾಂಶವಿದು. ನಮಗೆ ಉದ್ಯೋಗ ಸೃಷ್ಟಿಯ ಅಭಿವೃದ್ಧಿ ಬೇಕು. – ಹಾಗಿದ್ದರೆ ಮಂದಿರ ನಿರ್ಮಾಣವೆನ್ನುವುದು ದ್ವಿತೀಯ ಆದ್ಯತೆಯೆ?
ಅಪ್ಪ ಆದ್ಯತೆಯೋ? ಅಮ್ಮ ಆದ್ಯತೆಯೋ? ಅಣ್ಣನ ಆದ್ಯತೆಯೋ? ತಮ್ಮನ ಆದ್ಯತೆಯೋ ಎಂದು ಕೇಳಿದಂತೆ ಆಯಿತು. ಮಂದಿರವೂ ಆಗಬೇಕು, ಹಸಿವು ಮುಕ್ತ ಭಾರತ, ಸಾಲಮುಕ್ತ ರೈತ, ಉದ್ಯೋಗಭರಿತ ಭಾರತ, ಶಕ್ತಿ ಸಂಪನ್ನ ರೈತ ಇವೆಲ್ಲವೂ ಆದ್ಯತೆಗಳೇ ಆಗಿವೆ. – ಗಂಗಾ ಶುದ್ಧೀಕರಣವನ್ನು ಹಿಂದೆ ರಾಜೀವ್ ಗಾಂಧಿಯವರು ಘೋಷಿಸಿದ್ದರು. ಈಗಿನ ಬೆಳವಣಿಗೆ ಕುರಿತಂತೆ ನಿಮ್ಮ ಅಭಿಪ್ರಾಯ?
ನಾನು ಇತ್ತೀಚೆಗೆ ಗಂಗಾ ಶುದ್ಧೀಕರಣದ ಅಭಿ ವೃದ್ಧಿಯ ಮಾಹಿತಿ ತೆಗೆದುಕೊಂಡಿಲ್ಲ. ಬಹಳಷ್ಟು ಸಾಧನೆ ಆಗಿಲ್ಲ ಎಂದೆನಿಸುತ್ತದೆ. – ನರೇಂದ್ರ ಮೋದಿ ಸರಕಾರಕ್ಕೆ ನೀವು ಎಷ್ಟು ಅಂಕ ಕೊಡುತ್ತೀರಿ?
ನೀವು ರಾಜಕೀಯ ವಿಶ್ಲೇಷಕರಲ್ಲಿ ಈ ಮಾತನ್ನು ಕೇಳಿ. ರಾಜಕೀಯ ವಿಶ್ಲೇಷಕರು ಚೆನ್ನಾಗಿ ಹೇಳಿಯಾರು. ಭಾರತೀಯರು ಬಹಳ ಬುದ್ಧಿವಂತರು. ಸಮಯಕ್ಕೆ ಸರಿಯಾಗಿ ತಮ್ಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ನನ್ನ ವೈಯಕ್ತಿಕ ಅಭಿಪ್ರಾಯ ಇದ್ದರೂ ನಾನೀಗ ವಿಹಿಂಪವನ್ನು ಪ್ರತಿನಿಧಿಸುತ್ತಿರುವುದರಿಂದ ನಾನು
ಏನನ್ನೂ ಹೇಳಲಾರೆ. – ಕೇಂದ್ರ ಸರಕಾರ ಈಗ ಡಿಜಿಟಲೀಕರಣದ ವೇಗದಲ್ಲಿದೆ. ನಿಮ್ಮ ಅಭಿಪ್ರಾಯ?
ಯಾವುದೇ ಒಳ್ಳೆಯ ಉದ್ದೇಶದಿಂದ ಕೆಲಸ ಕೈಗೊಂಡರೆ ನಮ್ಮ ಸಹಮತ ಇದೆ. ಭಾರತದ ಎಲ್ಲ ಹಳ್ಳಿಗಳಿಗೆ 24 ಗಂಟೆ ವಿದ್ಯುತ್ ಕೊಡಲು ಸಾಧ್ಯವಾಗಿದೆಯೆ? ಮೊದಲು ಆಗಬೇಕಾದದ್ದು ಈ ಕೆಲಸ. ಅನಂತರ ಡಿಜಿಟಲೀಕರಣ. ಮಂದಿರ ನಿರ್ಮಾಣದ ಪಥ ಗೊತ್ತು, ಹೇಳಲಾರೆ
ಮಂದಿರ ನಿರ್ಮಾಣದ ಬಗೆಗೆ ಮಾತನಾಡುತ್ತೀರಿ? ಪೇಜಾವರ ಶ್ರೀಗಳು 2019ರಲ್ಲಿ ಕೆಲಸ ನಡೆಯುತ್ತದೆ ಎಂದರು. ನಿರ್ದಿಷ್ಟ ವಾಗಿ ಯಾವಾಗ ಈ ಕೆಲಸ ನಡೆಯಬಹುದು? ಎಲ್ಲ ವಿಷಯಗಳಿಗೆ, ಎಲ್ಲ ಪ್ರಶ್ನೆಗಳಿಗೆ ಎಲ್ಲ ಸಂದರ್ಭ ಉತ್ತರಿಸಬೇಕೆಂದಿಲ್ಲ. ನನಗೆ ಗೊತ್ತು ಮಂದಿರ ನಿರ್ಮಾಣದ ಪಥ ಮತ್ತು ಭವಿಷ್ಯ ಯಾವುದೆಂದು. ಆದರೆ ನಾನು ಹೇಳುವುದಿಲ್ಲ. ಮಂದಿರ ನಿರ್ಮಾಣವಾಗುತ್ತದೆಂದು ಮಾತ್ರ ಹೇಳುತ್ತೇನೆ. ಆಗ 300 ರೂ., ಈಗ ಕೋಟಿ ರೂ.
ನಾನು ಎಂಬಿಬಿಎಸ್ ಕಲಿಯುವಾಗ 1975ರಲ್ಲಿ ವರ್ಷಕ್ಕೆ 300 ರೂ. ಶುಲ್ಕವಿತ್ತು. ಈಗ 1 ಕೋ.ರೂ. ಖರ್ಚು ಬರುತ್ತದೆ. ಇದರಿಂದ ಬಡವನೊಬ್ಬ ವೈದ್ಯನಾಗಲು ಸಾಧ್ಯವೆ? ಹೋಗಲಿ ಮಧ್ಯಮ ವರ್ಗದವರಾದರೂ ವೈದ್ಯರಾಗಬಹುದೆ? ಇದು ನಮ್ಮ ಸಿಸ್ಟಮ್. ಇದು ಆ ಸರಕಾರ, ಈ ಸರಕಾರವೆಂದಲ್ಲ. ತಪ್ಪು ಅರ್ಥ ನೀತಿಯ ಪರಿಣಾಮ. ಇಂತಹ ಸಿಸ್ಟಮ್‌ನಿಂದ ಎಲ್ಲರಿಗೂ ಆರೋಗ್ಯ ದೊರಕುತ್ತದೆಯೆ? ಎಲ್ಲರಿಗೂ ಕೈಗೆಟಕುವ ಆರೋಗ್ಯ ಸಿಗಬೇಕೆನ್ನುವುದು ನಮ್ಮ ಉದ್ದೇಶ.
– ಡಾ| ಪ್ರವೀಣ್ ಭಾಯ್ ತೊಗಾಡಿಯಾ *ಸಂದರ್ಶನ: ಮಟಪಾಡಿ ಕುಮಾರಸ್ವಾಮಿ