ನಿದ್ದೆಗೆಡಿಸಿ ಹೃದಯ ಕದ್ದು, ಭಾವನೆಗಳಿಗೆ ಬಣ್ಣ ಹಚ್ಚಿ, ಕನಸುಗಳಿಗೆ ರೂಪ ಕೊಟ್ಟು, ಮನವೆಂಬ ಮಂದಿರದಲ್ಲಿ ನೀನೆಂಬ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತೆಯಂತೆ ದಿನವಿಡೀ ನಿನ್ನ ಧ್ಯಾನದಲ್ಲಿ ಮಳುಗಿರುವಂತೆ ಮಾಡಿ, ಆಸೆಗಳೆಂಬ ಗೋಪುರಕ್ಕೆ ಭರವಸೆಯ ಅಡಿಪಾಯ ಹಾಕಿ, ಆಧಾರವಾಗಬೇಕಿದ್ದ ನೀನೇ ಆಶಾಗೋಪುರವನ್ನು ಬೀಳಿಸಿ ದೂರ ಸರಿದೆಯಲ್ಲ? ಕಾರಣವನ್ನೂ ಹೇಳದೆ ಹೀಗೆ ನಡು ನೀರಿನಲ್ಲಿ ಕೈಬಿಟ್ಟು ಹೋಗುವ ಅನಿವಾರ್ಯತೆಯಾದರೂ ಏನಿತ್ತು ನಿನಗೆ?
ಹೇಳು ಹುಡುಗಾ…… ನಿನ್ನದು ಕಲ್ಲು ಮನಸೆ? ಕರುಣೆ ಕನಿಕರಗಳಿಗೆ ನಿನ್ನಲ್ಲಿ ಜಾಗವಿಲ್ಲವೇ? ಮನುಷ್ಯತ್ವಕ್ಕೆ ಮೌಲ್ಯವಿಲ್ಲವೇ ನಿನ್ನ ಮನದಲ್ಲಿ? ನಿನ್ನದು ಒರಟು ಹೃದಯವೇ? ನನ್ನ ಭಾವನೆಗಳಿಗೆ ಬೆಂಕಿ ಹಚ್ಚಿ ಬಯಕೆಗಳನ್ನು ಸುಟ್ಟು ಬೂದಿ ಮಾಡಿದೆಯಲ್ಲ? ಅಂಥ ಮನಸ್ಸಾದರೂ ಹೇಗೆ ಬಂತು ನಿನಗೆ? ನನ್ನ ಭಾವನೆಗಳೊಂದಿಗೆ ಚೆಲ್ಲಾಟ ಆಡುವ ಅನಿವಾರ್ಯತೆ ಏನಿತ್ತು ನಿನಗೆ? ನಿನ್ನ ನೋವು ನಲಿವುಗಳಲ್ಲಿ ನಾನೂ ಪಾಲುದಾರಳು ಅನ್ನುವುದನ್ನೂ ಮರೆತುಬಿಟ್ಟೆಯಾ?
ಅಂದು ನೀನೇ ಹೇಳಿದ್ದೆ, ಹೇ ಹುಡುಗಿ, ನನ್ ಹೃದಯದ ಮಿಡಿತ ನಿನಗಾಗಿ. ನನ್ನ ಮನಸ್ಸು ಕೇವಲ ನಿನಗಾಗಿಯೇ ಕನಸಿನಲ್ಲೂ ಅನ್ಯರು ನನ್ನಲ್ಲಿ ಸುಳಿಯುವುದಿಲ್ಲ. ನಿನ್ನನ್ನು ಬಿಟ್ಟರೆ ಬೇರೆ ಪ್ರಪಂಚವೇ ನನಗೆ ತಿಳಿದಿಲ್ಲ. ನಿನ್ನ ಹೆಸರು ನನ್ನ ಉಸಿರೊಡನೆ ಬೆರೆತು ಹೋಗಿದೆ…ಹೀಗೆಲ್ಲಾ ಹೇಳಿ, ಈಗ ನನ್ನನ್ನು ಒಬ್ಬಂಟಿಯಾಗಿಸಿರುವ ನಿನ್ನ ಉದ್ದೇಶವಾದರೂ ಏನು? ಈ ಮುಗ್ಧ ಹುಡುಗಿಯನ್ನು ಮರೆಯಲು ಮನಸ್ಸಾದರೂ ಹೇಗೆ ಬಂತು? ನನ್ನನ್ನು ಬಿಟ್ಟು ಬಾಳುವ ಶಕ್ತಿಯಾದರೂ ನಿನ್ನಲ್ಲಿದೆಯಾ?
ಗೆಳೆಯಾ, ನೀನು ಬಿಟ್ಟು ಹೋದಂದಿನಿಂದ ನಾನು ನಾನಾಗಿ ಉಳಿದಿಲ್ಲ. ಅತ್ತು ಅತ್ತು ಕಣ್ಣೀರ ಕಡಲು ಬತ್ತಿ ಹೋಗಿದೆ. ಬಯಕೆಗಳೆಲ್ಲಾ ಬರಿದಾಗಿವೆ. ಮನಸೆಂಬ ಮಂದಿರಕ್ಕೆ ಗೆದ್ದಲು ಹಿಡಿದು ಅದೀಗ ಪಾಳು ಬಿದ್ದಿದೆ. ಅಲ್ಲಿ ಪೂಜಿಸಲು ದೇವರೂ ಇಲ್ಲ. ಪೂಜಿಸುವ ಭಕ್ತೆಯೂ ಇಲ್ಲ. ಲೋಕವೆಲ್ಲಾ ಶೂನ್ಯವಾಗಿ ಗೋಚರಿಸುತ್ತಿದೆ. ಎಲ್ಲದಕ್ಕೂ ಪೂರ್ಣ ವಿರಾಮ ಹಾಕಿ ಎದ್ದು ಮುಂದೆ ಸಾಗುವ ಎಂದರೆ, ತೂರಿ ಬರುವ ಆ ಸಿಹಿ ನೆನಪುಗಳು ನನ್ನನ್ನು ಅಲ್ಲೇ ನಿಲ್ಲಿಸಿಬಿಡುತ್ತವೆ.
ನೀನಿಟ್ಟ ಹೆಜ್ಜೆ ಗುರುತುಗಳು ಅಚ್ಚಾಗಿ ನಿಂತಿವೆ ನನ್ನ ಹೃದಯದಲಿ. ಅವನ್ನೆಲ್ಲಾ ಮೆಮೋರಿ ಕಾರ್ಡ್‌ನಿಂದ ಹೊರತೆಗೆದು ಅಳಿಸಿ ಹಾಕಲು ಮನಸ್ಸಾಗುತ್ತಿಲ್ಲ. ಸಾವಿರ ಹಾಡುಗಳನ್ನು ಸೃಷ್ಟಿಸಿದ ನಿನ್ನನ್ನು ಡಿಲೀಟ್ ಮಾಡಲು ಹೋದರೆ ನನ್ನ ಹೃದಯವೇ ಒಡೆದು ಹೋಗುತ್ತದೆ.
ಈಗ ಮನಸ್ಸು ಗಟ್ಟಿ ಮಾಡಿಕೊಂಡು ಹೇಳಿಬಿಡ್ತಿದೀನಿ. ನೀನೆಂದೂ ನನ್ ಕಡೆ ಮತ್ತೆ ತಿರುಗಿ ನೋಡಬೇಡ. ಮರಳಿ ಬರುವ ಯತ್ನ ಮಾಡಬೇಡ. ಒಂದು ಸಲ ಕಳೆದುಕೊಂಡ ನಂಬಿಕೆ ಮರಳಿ ಬರಲು ಅಸಾಧ್ಯ. ಜೀವಂತವಾಗಿ ಸತ್ತ ಆಸೆ, ಆಕಾಂಕ್ಷೆಗಳು ಪುನಃ ಜನ್ಮವೆತ್ತಲು ಸಾಧ್ಯವಿಲ್ಲ. ಒಡೆದು ಹೋದ ಕನ್ನಡಿಯನ್ನು ಹೇಗೆ ಸೇರಿಸಲು ಸಾಧ್ಯವಿಲ್ಲವೋ ಹಾಗೆಯೇ ನಿನ್ನ ಬಗ್ಗೆ ಮತ್ತೆ ನನ್ನಲ್ಲಿ ಪ್ರೀತಿ ಮೂಡಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿಗೆ ವಿವರಿಸಿ ಹೇಳುವ ಅಗತ್ಯವಿಲ್ಲ ಅಂದುಕೊಳೆ¤àನೆ.
ಪಾಪದ ಹುಡುಗಿ
-ನಾಗರತ್ನ ಮತ್ತಿಘಟ್ಟ