Advertisement

ಕೈಟಭೇಶ್ವರನ “ಕೋಟಿ’ಪುರಾಣ

10:19 PM Aug 16, 2019 | mahesh |

ಒಂದು ದೇಗುಲದಿಂದ ಮತ್ತೂಂದು ದೇಗುಲಕ್ಕೆ ಪೌರಾಣಿಕ ನಂಟೂ ಇರುತ್ತೆ. ಬನವಾಸಿಗೆ ಹೋದವರಿಗೆ ಗೈಡ್‌ಗಳು, ಮಧುಕೇಶ್ವರನ ಕಥೆ ಹೇಳುತ್ತಲೇ, ಅವರ ಬಾಯಿಂದ “ಕೈಟಭೇಶ್ವರ’ ಎಂಬ ಹೆಸರಿನ ಉಲ್ಲೇಖವೂ ಜತೆಜತೆಗೇ ಬರುತ್ತೆ. ಮಧು- ಕೈಟಭ ರಾಕ್ಷಸರು ಶಿವನ ಭಕ್ತರು. ವಿಷ್ಣುವು ಇವರನ್ನು ಸಂಹರಿಸಿದ ನಂತರ, ಶಿವಭಕ್ತರಾದ ಇವರ ಹೆಸರಿನಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಕಾರಣ, ಇವೆರಡೂ ದೇಗುಲಗಳು ಪರಸ್ಪರ ಪುರಾಣದ ನಂಟನ್ನು ಹೊಂದಿವೆ.

Advertisement

ಮಧುಕೇಶ್ವರನ ವಿಳಾಸವೇನೋ ಬನವಾಸಿ ಆಯಿತು. ಕೈಟಭೇಶ್ವರನಿಗೆ ಎಲ್ಲಿ ನೆಲೆ ಆಯಿತು? ಅದನ್ನು ಹುಡುಕುತ್ತಾ ಹೋದರೆ ಸಿಗುವುದು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ “ಕೋಟಿಪುರ’ ಎಂಬ ಪುಟ್ಟ ಊರು. ಈ ಊರಿನ ರಸ್ತೆಯ ಪಕ್ಕ, ಪ್ರಧಾನ ಆಕರ್ಷಣೆಯಾಗಿ ನಿಂತ ದೇಗುಲವೇ ಕೈಟಭೇಶ್ವರ ದೇಗುಲ! ಇದು ಆನವಟ್ಟಿಯ ಸಮೀಪವೇ ಇದೆ.

ಕ್ರಿ.ಶ. 1100ರಲ್ಲಿ ಹೊಯ್ಸಳ ದೊರೆ ವಿನಯಾದಿತ್ಯನ ಕಾಲದಲ್ಲಿ ನಿರ್ಮಾಣವಾದ ಈ ದೇಗುಲದ ಗರ್ಭಗುಡಿಯೇ ಒಂದು ಚೆಂದ. ಸುಖನಾಸಿ ಮತ್ತು ತೆರೆದ ಮುಖಮಂಟಪವೂ ಅಷ್ಟೇ ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ. ಗರ್ಭಗುಡಿಯಲ್ಲಿ ಕೋಟಿನಾಥನ ಲಿಂಗವಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯ ಸೌಂದರ್ಯವೂ ಗುಣಗಾನಕ್ಕೆ ಅರ್ಹ.

ಮಂಟಪದಲ್ಲಿ ಹೊಯ್ಸಳ ಶೈಲಿಯ 46 ಕಂಬಗಳಿವೆ. ಅವುಗಳ ಮೇಲಿನ ಎಲೆ- ಬಳ್ಳಿಗಳ ಕೆತ್ತನೆಯ ಕುಸುರಿ ಬೆರಗು ಹುಟ್ಟಿಸುವಂಥದ್ದು. ಸುಕನಾಸಿಯ ಬಳಿ 10 ಕಂಬಗಳಿದ್ದು, ಉಳಿದಂತೆ ಮಂಟಪದಲ್ಲಿ 36 ಕಂಬಗಳಿವೆ. ಪದ್ಮಕ ಶೈಲಿಯಲ್ಲಿನ ಈ ಮಂಟಪವನ್ನು ನೃತ್ಯಗಳಿಗೆ ಮೀಸಲಿಟ್ಟಿದ್ದಿರಬಹುದು. 25 ಅಂಕಣಗಳ ಸುಂದರ ಮಂಟಪದ ಮಧ್ಯದ ಭುವನೇಶ್ವರಿಯಲ್ಲಿ ಕಮಲದ ಕೆತ್ತನೆ ಬಹಳ ನಾಜೂಕಾಗಿದೆ. ಮಂಟಪಕ್ಕೆ 3 ಪ್ರತ್ಯೇಕ ಪ್ರವೇಶ ದ್ವಾರಗಳಿವೆ. ಇಲ್ಲಿನ ದೇವಕೋಷ್ಟಕಗಳಲ್ಲಿ ಸಪ್ತಮಾತೃಕ, ಗಣಪತಿ, ವಿಷ್ಣುವಿನ ಮೂರ್ತಿಗಳಿವೆ.

ಗರ್ಭಗುಡಿಯ ಮೇಲಿನ ಶಿಖರವು ದ್ರಾವಿಡ ಶೈಲಿಯ ಕುಸುರಿ ಹೊಂದಿದೆ. ಶಿಖರವು ನಾಲ್ಕು ಹಂತಗಳಲ್ಲಿದ್ದು, ಅಲ್ಲಲ್ಲಿ ಸಣ್ಣ ಶಿಲ್ಪಗಳಿವೆ. ಮೊದಲ ಹಂತವು ಇಡೀ ದೇಗುಲವನ್ನು ಆವರಿಸಿಕೊಂಡಿದ್ದು, ಇದರಲ್ಲಿ ತಾಂಡವೇಶ್ವರ, ಗಣಪತಿ, ಅಷ್ಟ ದಿಕಾ³ಲಕರ ಕೆತ್ತ¤ನೆ ಇದೆ. ದೇವಾಲಯವು ಕೇಂದ್ರ ಪುರಾತತ್ವ ಇಲಾಖೆಯ ಅಧೀನದಲ್ಲಿದ್ದು, ವಿಶಾಲವಾದ ಆವರಣದಲ್ಲಿ ಸಣ್ಣ ಸಣ್ಣ ಗುಡಿಗಳಿವೆ.

Advertisement

ದರುಶನಕ್ಕೆ ದಾರಿ…
ಸೊರಬದಿಂದ ಆನವಟ್ಟಿಯನ್ನು ತಲುಪಿದರೆ, ಅಲ್ಲಿಂದ ಹಾನಗಲ್‌ ಮಾರ್ಗದಲ್ಲಿ ಕೋಟಿಪುರ ಸಿಗುತ್ತದೆ. ರಸ್ತೆಯ ಪಕ್ಕದಲ್ಲೇ ಕೈಟಭೇಶ್ವರ ದೇಗುಲವಿದೆ. ಇಲ್ಲಿಂದ 15 ಕಿ.ಮೀ. ದೂರದಲ್ಲಿ ಮಧುಕೇಶ್ವರನ ಸನ್ನಿಧಾನವನ್ನು ತಲುಪಬಹುದು.

– ಶ್ರೀನಿವಾಸ ಮೂರ್ತಿ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next