ಏತಡ್ಕ: ಒಂದೊಂದು ದೇವಸ್ಥಾನದಲ್ಲಿ ಒಂದೊಂದು ರೀತಿಯ ಸೇವೆ, ವಿಧಿವಿಧಾನಗಳಿಂದ ಜನಜನಿತವಾಗಿದೆ. ಈ ದೇವಸ್ಥಾನ ತನ್ನದೇ ಆದ ವಿಶೇಷತೆಯಿಂದ ಗಮನ ಸೆಳೆಯುತ್ತದೆ. ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಎಲ್ಲಾ ದೇವಸಾœನಗಳಿಗಿಂತ ಭಿನ್ನವಾಗಿ “ಹಲಸಿನ ಹಣ್ಣಿನ ಅಪ್ಪ ಸೇವೆ’ ವಿಶೇಷವಾಗಿದ್ದು, ಗಮನಾರ್ಹವಾಗಿದೆ.
ಕಳೆದ ಐವತ್ತು ವರ್ಷಗಳಿಂದ ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಆಚರಣೆ “ಹಲಸಿನ ಹಣ್ಣಿನ ಅಪ್ಪ ಸೇವೆ’. ಜೂನ್ 15ರಿಂದ ಜುಲೈ 15ರೊಳಗೆ ನಡೆಯಲೇ ಬೇಕಾದ ಸೇವೆ ಈ ಬಾರಿ ಜುಲೈ 9 ರವಿವಾರದಂದು ಆಚರಣೆಗೊಳ್ಳಲಿದೆ.ಅತ್ಯುತ್ತಮ ಹಲಸಿನ ಹಣ್ಣನ್ನು ಅರ್ಪಿಸುವ ಮೂಲಕ ಹಲಸಿನ ಹಣ್ಣಿನ ಸೇವೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯತ್ತದೆ.
ಹಿನ್ನೆಲೆ : 1940 ರಷ್ಟು ಹಿಂದೆ ಏತಡ್ಕ ಸಮೀಪದ ಪಡ್ರೆ ಗ್ರಾಮದಲ್ಲಿರುವ ಈ ದೇವಸ್ಥಾನದ ಮೂಡು ಭಾಗದಲ್ಲಿ ಪ್ರದಕ್ಷಿಣಾಕಾರದಲ್ಲಿ ಹರಿದು ಪಳ್ಳತ್ತಡ್ಕ ದಾರಿಯಾಗಿ ಕುಂಬಳೆ ಸೇರುವ ನದಿಯಲ್ಲಿ ಹಿಂದೆಂದೂ ಕೇಳರಿಯದ ನೆರೆ ಬಂದು ಸುತ್ತುಮುತ್ತಲಿನ ಅನೇಕ ಮನೆಗಳು ಕುಸಿದು ನೆರೆ ಪಾಲಾದವು. ಅಕ್ಕಪಕ್ಕದ ಕೃಷಿ ಭೂಮಿಗಳು ಹೂಳು ತುಂಬಿ ಕೃಷಿ ಅಯೋಗ್ಯವಾಗಿ ರೂಪುಗೊಂಡವು. 1941ರಲ್ಲಿ ಏತಡ್ಕ ಸುಬ್ರಾಯ ಭಟ್ ಅವರು ಅಪರೂಪವಾಗಿದ್ದ ದೇವಸ್ಥಾನವಿದ್ದ ಜಾಗವನ್ನು ಖರೀಸಿದ್ದರು. 1948ರಲ್ಲಿ ಜೀರ್ಣೋದ್ಧಾರ, ಬ್ರಹ್ಮಕಲಶ ನೆರವೇರಿಸಿದರು. ಧನ-ಧಾನ್ಯ ಎರಡೂ ದುರ್ಲಭ ಎನ್ನುವ ಪರಿಸ್ಥಿತಿ. ಇಡೀ ಊರವರ ಹಸಿವಿನ ದಿನಗಳಲ್ಲಿ ಕೈ ಹಿಡಿದು ಅನ್ನ ಕೋಶವನ್ನು ತುಂಬಿದ್ದು “ಹಲಸಿನ ಕಾಯಿ ಮತ್ತು ಹಣ್ಣು’. ದಿನದ ಮೂರೂ ಹೊತ್ತು ಹಲಸಿನ ಹಲವು ಬಗೆ, ಅನ್ನ, ತರಕಾರಿ, ಹಣ್ಣು ಹಂಪಲು ಎಲ್ಲವೂ ಒಂದರಲ್ಲಿ ಎಂದರೆ ಹಲಸಿನ ಕಾಯಿಯೇ. ದಿ| ಏತಡ್ಕ ಸುಬ್ರಾಯ ಭಟ್ ಅವರು ಈ ಮರಕ್ಕೆ ಊರವರು ಚಿರಋಣಿಯಾಗಿರಬೇಕು ಎನ್ನುವ ಪರಿಕಲ್ಪನೆಯಿಂದ “ಹಲಸಿನ ಹಣ್ಣಿನ ಅಪ್ಪ ಸೇವೆ’ಯನ್ನು ಆಚರಣೆಗೆ ತಂದರು. ಆ ಬಳಿಕ ಪ್ರತೀ ವರ್ಷವೂ ತಪ್ಪದೆ ಹಲಸಿನ ಹಣ್ಣಿನ ಅಪ್ಪ ಸೇವೆ ನಡೆಯುತ್ತಿದೆ.
ಈ ವರ್ಷ ಜುಲೈ 9 ರವಿವಾರ ಬೆಳಗ್ಗೆ ವಿವಿಧ ಕಾರ್ಯ ಕ್ರಮಗಳೊಂದಿಗೆ “ಹಲಸಿನ ಹಣ್ಣಿನ ಅಪ್ಪ ಸೇವೆ’ ನಡೆಯಲಿದೆ. ಅರ್ಚಕ ಲಕ್ಷ್ಮೀನಾರಾಯಣ ಭಟ್ ಪಡಿ ಕ್ಕಲ್ ಅವರು ಕಾರ್ಯಕ್ರಮದ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.
ಚಿತ್ರ: ಚಂದ್ರಶೇಖರ್ ಏತಡ್ಕ