Advertisement
ಏನು ಹೇಳ್ಳೋಣ? ನಮ್ಮ ಕ್ಷೇತ್ರದ ಸತ್ಯಾಸತ್ಯತೆ, ಸಾಧ್ಯಾಸಾಧ್ಯತೆ, ಪ್ರಸ್ತುತ ಕಾಲಘಟ್ಟದ ಅತಿರೇಕ-ಉದಾಸೀನಗಳ ಬಗ್ಗೆ ಅರಿವಿದ್ದೂ ಬಾಯಿ ಮುಚ್ಚಿಕೊಂಡು ಪೆಚ್ಚುಪೆಚ್ಚಾಗಿ ನಗೆ ಬೀರುವ ದುಃಸ್ಥಿತಿ ಎನ್ನಬೇಕಷ್ಟೇ! ಬಾಯಿಬಿಟ್ಟರೆ ಬಣ್ಣಗೇಡು ಎಂಬುದು ಅಂದಿಗೆ ಅಕ್ಷರಶಃ ಅನ್ನಿಸಿತ್ತು. ಎಲ್ಲಿ ನೋಡಿದರಲ್ಲಿ ರಿಹರ್ಸಲ್, ಪ್ರಾಕ್ಟೀಸ್ ಎಂಬ ಕ್ರಮವತ್ತಾದ ಕಲಾಸಂಸ್ಕಾರದಲ್ಲಿ ರಸಯಾತ್ರೆಯ ಶವಸಂಸ್ಕಾರವೂ ಆಗುತ್ತಿದೆ ಎಂಬುದನ್ನು ಬೇರೆ ಹೇಳಬೇಕಿರಲಿಲ್ಲ.
Related Articles
Advertisement
ಅಷ್ಟಕ್ಕೂ ಇದು ಭರತನಾಟ್ಯದ್ದೊಂದೇ ಮಾತಾಗಿದ್ದರೆ ಪ್ರಾರಬ್ಧವೆಂದು ಹಳಿದು ಸುಮ್ಮನಿರಬಹುದಿತ್ತು. ದುರಂತವೆಂದರೆ ಒಡಿಸ್ಸಿ, ಕೂಚಿಪುಡಿ, ಕಥಕ್ ಮುಂತಾದ ನೃತ್ಯಪದ್ಧತಿಯಾದ್ಯಂತ ಇದೇ ಮಾದರಿಯು ಬೆಂಬಿಡದೆ ಹಿಂಬಾಲಿಸುತ್ತಿದೆ. “ಇಂದಿನ ಭರಾಟೆಯ ಕಾಲಮಾನಕ್ಕೆ ಪಕ್ಕವಾದ್ಯದವರೊಂದಿಗೆ ಸಾಂಗತ್ಯ ಹೊಂದಬೇಕಾದರೆ ತಕ್ಕಮಟ್ಟಿನ ಪೂರ್ವ ತಯಾರಿ ನಿರೀಕ್ಷಿತ, ಇಲ್ಲವೇ ನೃತ್ಯಕ್ರಮವೇ ಬಿದ್ದುಹೋಗುತ್ತದೆ’ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಗಿಣಿಪಾಠ ಒಪ್ಪಿಸುವುದೇ ಒಂದು ಹೆಚ್ಚುಗಾರಿಕೆಯ ವಿಷಯ ಎಂಬ ಸೋಗು ಹಾಕುತ್ತಾರೆ. “ರಿಹರ್ಸಲ್’ ಎಂಬ ಪೂರ್ವಾಭ್ಯಾಸದ “ಸಮಯ’ ಸಂಪಾದನೆ ಈ ದಂಧೆಯ ಸಾಲಿಗೆ ಹೊಸ ಸೇರ್ಪಡೆ. ಅಷ್ಟೇ ಏಕೆ? ಸಂಗೀತ ಮತ್ತು ವಾದ್ಯದ ತನಿ ಆವರ್ತನಕ್ಕೆ ನರ್ತಿಸಲ್ಪಡುವ ಆಶುನೃತ್ಯಗಳೆಂಬವೂ ಮಾಡುವುದು ಕೂಡ ಮೂಗಿಗೆ ತುಪ್ಪ ಹಚ್ಚುವ ಕಾಯಕವನ್ನೇ! ವಂಚನೆ ಎಸಗುತ್ತಿರುವುದು ಯಾರಿಗೆ- ನಮಗೋ? ಕಲೆಗೋ? ಸಹೃದಯರಿಗೋ?
ಕಲೆಯ ಚಲನೆಯುದ್ದಕ್ಕೂ “ಪರಂಪರೆ, ಸಂಪ್ರದಾಯ’ ಎಂಬೆಲ್ಲ ದೊಡ್ಡ ಶಬ್ದಗಳ ಎರವಲು ಪಡೆದು ಪ್ರಾಥಮಿಕ ಹಂತದ ಅಭ್ಯಾಸ ಮಾದರಿಯನ್ನೇ ರಂಗಪ್ರದರ್ಶನಕ್ಕೂ ಹೆಮ್ಮೆಯಿಂದ ಚಾಚೂ ತಪ್ಪದೆ ವಿಸ್ತರಿಸುತ್ತಲೇ ಬಂದಿದ್ದೇವೆ. ಪುಸ್ತಕ ನೋಡಿಕೊಂಡು ಅಡುಗೆ ಮಾಡುವವವರ ಸಂಖ್ಯೆಯೇ ಪರಂಪರೆಯಾಗಿ ಮುಂದುವರಿಯುವ ಮತ್ತು ಪ್ರೋತ್ಸಾಹವೂ ಇರುವ ಹೊತ್ತಿನಲ್ಲಿ “ಶಾಸ್ತ್ರೀಯ ಬಡತನ’ದ ನಿವಾರಣೆ ಅಷ್ಟು ಸುಲಭವಲ್ಲ. ಇನ್ನು ಕ್ರಾಂತಿಕಾರಿಗಳಿಗೆ ಇರುವ ಬೆಲೆಯೂ ಅಷ್ಟಕ್ಕಷ್ಟೇ !
“ವಿಶೇಷತಃ ರಸಾಭಿನಯದಲ್ಲಿ ಆಶುಸ್ಫೂರ್ತಿಯ ವಿಲಾಸ ಅಪಾರ. ಆಶುವೈಭವದಲ್ಲಿ ಸ್ವಂತಿಕೆಗೆ, ಸೊÌàಪಜ್ಞತೆಗೆ ಪರಮೋಚ್ಚ ಪ್ರಾಶಸ್ತ. ಇಲ್ಲಿ ಚೈತನ್ಯಾತ್ಮಕವಾದ ಕಲಾವಿದನಿಗೆ ಅಥವಾ ಯಾವುದೇ ವ್ಯಕ್ತಿಗೆ ಹೆಚ್ಚಿನ ಬೆಲೆಯಿಲ್ಲದೆ ಇನ್ನಿತರ ಜಡಯಂತ್ರ-ತಂತ್ರಕೋಲಾಹಲಗಳಿಲ್ಲ. ದುರ್ದೈವದಿಂದ ಇಂದು ನಮ್ಮ ಈಗಿನ ಭರತನಾಟ್ಯದಂತಹ ಕಲೆಗಳಲ್ಲಿ ಪೂರ್ವಸಿದ್ಧತೆಯೇ ಮಿಗಿಲಾಗಿ, ಅಭಿನಯವೂ ಶುಕಪಾಠವಾಗುತ್ತಿದೆ’ ಎನ್ನುತ್ತಾರೆ ಶತಾವಧಾನಿ ಡಾ| ಆರ್. ಗಣೇಶ್. ಯಕ್ಷಗಾನ ಮತ್ತು ತಾಳಮದ್ದಳೆ ಕಲೆಗಳು ಈ ಮಾತಿಗೆ ಅಪವಾದವೆಂದು ಗಣೇಶರಂದರೂ, ಬರಬರುತ್ತಾ ಕಂಠಪಾಠದ ಸೋಗಿನೊಳಗೆ ಆಶುಸ್ಫೂರ್ತಿ ಪೀಠಸ್ಥವಾಗುತ್ತಿದೆಯೇನೋ ಎಂದೆನಿಸುತ್ತಿದೆ.
ರಸವೆಂದರೆ ನವರಸಾಭಿನಯ ಎಂತಲೋ ರಸವೆಂದರೆ ಅದು ಥಿಯರಿಯ ಸರಕೆಂದೋ ಪಾಠ ಮಾಡುವವರಿಗೋ ಆಶುಸ್ಫೂರ್ತಿಯ ರಸವಿಲಾಸ ಅರ್ಥವಾಗಲು ಎಷ್ಟು ಶತಮಾನಗಳುರುಳಬೇಕು? ಕಲೆಯನ್ನೇ ಜೀವನೋಪಾಯವಾಗಿಸಿಕೊಂಡು ಹೊಟ್ಟೆ ಹೊರೆಯುತ್ತಿರುವವರಿಗಾದರೆ ನಾಟ್ಯಸರಸ್ವತಿಯ ಕ್ಷಮೆಯಿರಬಹುದು. ಆದರೆ ಹೆಸರಿನ ಚಪಲಕ್ಕೆ, ಪ್ರತಿಷ್ಠೆಯ ಸೋಗಲಾಡಿತನಕ್ಕೆ ವೇಷ ಹಾಕಿಕೊಂಡು ದಂಧೆಯಾಗಿಸುವವರಿಗೆ…? ಒಟ್ಟಿನಲ್ಲಿ ಶಿಕ್ಷಣದ ತಪ್ಪುಗಳು ಶತಮಾನದುದ್ದಕ್ಕೂ ಅನಾಥಪ್ರೇತಗಳಾಗಿ ತೆವಳುವ ಈ ಕಾಲಕ್ಕೆ ಪ್ರತಿಯೊಬ್ಬರದೂ ಒಂದಲ್ಲ ಒಂದು ಕೊಡುಗೆಯೇ!
ಡಾ| ಮನೋರಮಾ ಬಿ. ಎನ್.