Advertisement

ತಾಪಂ ಶೌಚಾಲಯಕ್ಕೆ ಬಿದ್ದಿದೆ ಶಾಶ್ವತ ಬೀಗ!

01:05 PM Dec 20, 2021 | Team Udayavani |

ಔರಾದ: ತಾಪಂ ಕಚೇರಿಯಲ್ಲಿನ ಶೌಚಾಲಯ ಬಾಗಿಲು ಕಳೆದ ಕೆಲ ವರ್ಷದಿಂದ ತೆಗೆದೇ ಇಲ್ಲ. ತರಬೇತಿಗೆ ಬಂದವರು ಶೌಚಾಲಯವಿಲ್ಲದೆ ಪರದಾಡುವಂತಾಗಿದೆ.

Advertisement

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿನ ಸಾಮರ್ಥ್ಯ ಸೌಧ ಹಿಂಭಾಗದಲ್ಲಿ ತರಬೇತಿಗಾಗಿ ಬಂದ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿಗಾಗಿಯೇ ತಾಪಂ ನಾಲ್ಕು ಲಕ್ಷ ರೂ. ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಇದರ ಬಾಗಿಲು ಒಂದು ದಿನವೂ ತೆಗೆದಿಲ್ಲ. ಶೌಚಾಲಯದ ಸುತ್ತಲು ಹಂದಿಗಳು ವಾಸವಾಗಿದ್ದು, ಹೊಲಸು ನೀರು ನಿಂತು ಗಬ್ಬುನಾರುತ್ತಿದೆ.

ತಾಪಂ ಅನುದಾನದಲ್ಲಿನ ನಾಲ್ಕು ಲಕ್ಷ ರೂ. ಖರ್ಚು ಮಾಡಿ ತಾಪಂ ಕಚೇರಿ ಆವರಣದಲ್ಲಿಯೇ ಶೌಚಾಲಯ ನಿರ್ಮಾಣ ಮಾಡಿ ಐದು ವರ್ಷ ಕಳೆಯುತ್ತಾ ಬಂದಿವೆ. ಆದರೂ ಶೌಚಾಲಯದ ಬಾಗಿಲು ಮಾತ್ರ ಇಂದಿಗೂ ತೆರೆದಿಲ್ಲ. ಶೌಚಾಲಯದ ಕಟ್ಟಡ ಹಂದಿಗಳ ತಾಣವಾಗಿ ಪರಿವರ್ತನೆಯಾಗುತ್ತಿದೆ. ಇದು ಜನರ ಉಪಯೋಗಕ್ಕೆ ಬಾರದೆ ಸರ್ಕಾರದ ಹಣ ಪೋಲಾಗುತ್ತಿದೆ.

ತಾಪಂ ಕಚೇರಿಯಲ್ಲಿನ ಸಾರ್ವಜನಿಕ ಶೌಚಾಲಯ ಕುರಿತು ವಾರದ ಹಿಂದೆ ಜಿಪಂ ಸಿಇಒ ತಾಪಂ ಇಒಗೆ ದೂರವಾಣಿ ಕರೆ ಮಾಡಿ, ಶೌಚಾಲಯಕ್ಕೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ತಿಳಿಸಿದ್ದರು. ಅದರಂತೆ ಕಚೇರಿ ಆವರಣದಲ್ಲಿನ ಹುಲ್ಲು ಮುಳ್ಳಿನ ಗಿಡಗಳು ತೆಗೆದು ಸ್ವಚ್ಛತೆ ಮಾಡುವಂತೆ ಸೂಚಿಸಿದ್ದರು. ಆದರೆ ತಾಪಂ ಇಒ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತಾಪಂ ಇಒ ಮಾಣಿಕರಾವ್‌ ಪಾಟೀಲ್‌ ಅವರನ್ನು ವಿಚಾರಿಸಿದರೆ, ನಮ್ಮ ಕಚೇರಿ ಆವರಣದಲ್ಲಿನ ಸಾಮರ್ಥ್ಯ ಸೌಧ ಹಿಂಭಾಗದಲ್ಲಿ ಶೌಚಾಲಯ ಇದೆ. ಅದನ್ನು ಯಾವಾಗ ನಿರ್ಮಾಣ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಇಲ್ಲಿಯವರೆಗೆ ಒಳಸಿಲ್ಲ. ಮುಂದೆ ನೋಡುತ್ತೇನೆ ಎನ್ನುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next