ಕಾಸರಗೋಡು: ವಲಿಯಪರಂಬ – ಪಡನ್ನ ಗ್ರಾಮ ಪಂಚಾಯತ್‌ಗಳನ್ನು ಜೋಡಿಸುವ ಕವ್ವಾಯಿ ಹಿನ್ನೀರಿನಲ್ಲಿ ನಿರ್ಮಾಣ ಆರಂಭಿಸಿದ ತೆಕ್ಕೆಕ್ಕಾಡ್ ತೂಗು ಸೇತುವೆ ಇನ್ನೂ ಸಾಕಾರಗೊಂಡಿಲ್ಲ. ಆರು ವರ್ಷಗಳ ಹಿಂದೆ ಎರಡು ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ತೂಗು ಸೇತುವೆ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದ್ದರೂ ತೂಗು ಸೇತುವೆ ನಿರ್ಮಾಣ ಅನಾಸ್ಥೆಯಿಂದ ಪೂರ್ಣಗೊಳ್ಳದೆ ಇನ್ನೂ ಅಪೂರ್ಣವಾಗಿದೆ.
ಈ ತೂಗು ಸೇತುವೆಯ ನಿರ್ಮಾಣ ಅಂತಿಮ ಹಂತದಲ್ಲಿದ್ದ ಸಂದರ್ಭದಲ್ಲೇ ತೂಗು ಸೇತುವೆ ನಿರ್ಮಾಣಗೊಂಡು ಉದ್ಘಾಟನೆಯಾಗಿ ಕೆಲವೇ ದಿನಗಳಲ್ಲಿ ವಲಿಯಪರಂಬದ ಮಾಡಕ್ಕಲ್-ತೃಕ್ಕರಿಪುರ ಕಡಪ್ಪುರ ತೂಗು ಸೇತುವೆ ಮುರಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ತೆಕ್ಕೆಕ್ಕಾಡ್ – ಪಡನ್ನ ಕಡಪ್ಪುರ ತೂಗು ಸೇತವೆ ಕಾಮಗಾರಿಯನ್ನು ನಿಲುಗಡೆಗೊಳಿಸಲಾಗಿತ್ತು.
ತೂಗು ಸೇತುವೆಯ ಸುರಕ್ಷೆಯ ಬಗ್ಗೆ ಕೇಳಿ ಬಂದ ಪ್ರಶ್ನೆಯಿಂದಾಗಿ ಈ ತೂಗು ಸೇತುವೆ ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು. ತೂಗು ಸೇತುವೆ ಸಾಕಷ್ಟು ಭದ್ರವಾಗಿರುವುದಿಲ್ಲ. ಈ ಕಾರಣದಿಂದ ಕಾಲ್ಸಂಕ ಅಥವಾ ಸೇತುವೆ ನಿರ್ಮಿಸಬೇಕಾಗಿ ಸ್ಥಳೀಯರ ಬೇಡಿಕೆ ಕೇಳಿ ಬಂದಿತ್ತು. ಹಲವು ವರ್ಷಗಳಿಂದ ಕರಾವಳಿ ಜನತೆ ನಿರಂತರವಾಗಿ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸುತ್ತಲೇ ಬಂದಿದ್ದರು. ಇಲ್ಲಿ ಸೇತುವೆ ನಿರ್ಮಾಣವಾದಲ್ಲಿ 24 ಕಿಲೋ ಮೀಟರ್ ನೀಳಕ್ಕೆ ಚಾಚಿರುವ ವಲಿಯಪರಂಬ ದ್ವೀಪ ನಿವಾಸಿಗಳಿಗೆ ಪ್ರಯೋಜನವಾಗುತ್ತಿತ್ತು.
ನಿರ್ಮಾಣದ ಅಂತಿಮ ಹಂತದಲ್ಲಿ ಕಾಮಗಾರಿ ನಿಲುಗಡೆಗೊಳಿಸಿದ್ದರಿಂದ 280 ಮೀಟರ್ ನೀಳದ ತೂಗು ಸೇತುವೆಗೆ ಬಳಸಿದ ಕಬ್ಬಿಣ ತುಕ್ಕು ಹಿಡಿದ್ದು ನಾಶದಂಚಿಗೆ ಸರಿದಿದೆ. ಇದರಿಂದ ಕೋಟ್ಯಂತರ ರೂ. ನಷ್ಟವಾಗಿದೆ.
ತೂಗುಸೇತುವೆ ಭವಿಷ್ಯ ತೂಗುಯ್ಯಾಲೆಯಲ್ಲಿ
ತೂಗು ಸೇತುವೆಗೆ ಬದಲಿಯಾಗಿ ಸೇತುವೆ ನಿರ್ಮಿಸುವ ಕುರಿತು ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳ ಸಂದರ್ಶಿಸಿದ್ದರು. ಸಾರ್ವಜನಿಕ ಸಂಸ್ಥೆಯಾದ ಕೆಲ್ ಕಂಪೆನಿ ತೂಗು ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. ಆದರೆ ಇದೀಗ ಅರ್ಧದಲ್ಲೇ ಮೊಟಕುಗೊಂಡ ತೂಗು ಸೇತುವೆಯ ಭವಿಷ್ಯದ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಸಾಧ್ಯವಾಗಿಲ್ಲ. ಅರ್ಧದಲ್ಲೇ ಮೊಟಕುಗೊಂಡಿರುವ ತೂಗು ಸೇತುವೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಈ ತೂಗು ಸೇತುವೆಯನ್ನು ತೆರವುಗೊಳಿಸಬೇಕಾಗಬಹುದು.