ಕಲಬುರಗಿ: ಸ್ಥಳೀಯರೇ ನಿರ್ಮಿಸಿರುವ ಏನೆಂದು ಹೆಸರಿಡಲಿ.. ಕನ್ನಡ ಚಲನ ಚಿತ್ರ ಪ್ರಚಾರ ಫೆ.1ರಿಂದ ನಗರದ ಕಾಲೇಜುಗಳಲ್ಲಿ ನಡೆಯಲಿದೆ ಎಂದು ಚಿತ್ರದಲ್ಲಿ ತಾಯಿ ಪಾತ್ರಧಾರಿ ಹಾಗೂ ಕಲಾವಿದೆ ಚಿತ್ಕಳಾ ಬಿರಾದಾರ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದೊಂದು ಪ್ರೀತಿ ಪ್ರಯಣ ಇರುವ ಸಿನಿಮಾ. ಇತರೆಲ್ಲ ಇಂತಹ ಸಿನಿಮಾಗಳಿಗಿಂತ ತುಂಬಾ ಢಿಪರೆಂಟ್ ಆಗಿ ಚಿತ್ರಿಸಲಾಗಿದೆ. ತ್ರಿಕೋನ ಪ್ರೇಮ ಕಥೆ ಹೊಂದಿರುವ ಈ ಚಿತ್ರದಲ್ಲಿ ನಾನು ನಾಯಕಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಶೂಟಿಂಗ್ ಶೃಂಗೇರಿ, ಚಿಕ್ಕಮಗಳೂರು, ಕೊಪ್ಪ ಮುಂತಾದ ನಿಸರ್ಗ ರಮಣೀಯ ಸ್ಥಳದಲ್ಲಿ ಮಾಡಲಾಗಿದೆ ಎಂದರು.
ಹಾಡುಗಳಂತೂ ತುಂಬಾ ಸೊಗಸಾಗಿ ಮೂಡಿ ಬಂದಿವೆ. ಜಯಂತ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಕವಿರಾಜ್, ದೊಡ್ಡರಂಗೇಗೌಡ, ಪೂರ್ಣೇಶ್ ಸಾಗರ್ ಬರೆದಿರುವ ಹಾಡುಗಳು ಪಡ್ಡೆಗಳಲ್ಲೆ, ಎಲ್ಲ ವಯೋಮಾನದವರ ಮೇಲೆ ಜಾದೂ ಮಾಡಿವೆ ಎಂದರು. ರವಿ ಬಸಪ್ಪನದೊಡ್ಡಿ ಅವರು ನಿರ್ದೇಶಕರಾಗಿದ್ದು, ಶ್ರೀನಿವಾಸ್ ಕುಲಕರ್ಣಿ ಮತ್ತು ಶೃತಿ ಕುಲಕರ್ಣಿ ನಿರ್ಮಾಪಕರಾಗಿದ್ದಾರೆ.
ಅವರೊಂದಿಗೆ ಮಧು ಕುಲಕರ್ಣಿ, ಭಾರತಿ ಗುನ್ನಳ್ಳಿ, ಅನುಷಾ ಕುಲಕರ್ಣಿ ಅವರು ಸಹ ನಿರ್ಮಾಪಕರಾಗಿದ್ದಾರೆ. ಚಿತ್ರ ಫೆ. 10ರಂದು ಬಿಡುಗಡೆ ಆಗಲಿದೆ ಎಂದರು. ನಾಯಕ ಅರ್ಜುನ್, ನಾಯಕಿ ರೋಜಾ ಅವರಲ್ಲದೇ ಚಿತ್ಕಳಾ ಬಿರಾದಾರ, ಮಿಲಿಂದ್ ಗುಣಾಜಿ, ಸುನೇತ್ರಾ ಪಂಡಿತ್, ಉಮೇಶ್, ಸೂರಜ್, ಬೇಬಿ ಸೇವಂತಿ ಅವರು ಅಭಿನಯಿಸಿದ್ದಾರೆ.
ಸಂಕೇತ್ ಕಾಶಿ ಅವರ ಅಭಿನಯ ಇದೇ ಚಿತ್ರದಲ್ಲಿ ಕೊನೆಯದು. ಪೂರ್ಣೇಶ್ ಸಾಗರ್ ಅವರು ಕಥೆ, ಚಿತ್ರಕಥೆ, ಜೋಗಿ ಅವರು ಸಂಭಾಷಣೆ ಬರೆದಿದ್ದಾರೆ. ಮಂಜುನಾರ್ಥ ಬಿ. ನಾಯಕ್ ಅವರ ಛಾಯಾಗ್ರಹಣವಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಕವಿರಾಜ್, ದೊಡ್ಡರಂಗೇಗೌಡ, ಪೂರ್ಣೇಶ್ ಸಾಗರ್ ಅವರ ಸಾಹಿತ್ಯ, ಸುರೇಂದ್ರನಾಥ್ ಸಂಗೀತ, ಶ್ರೀಕಾಂತ್ ಅವರ ಸಂಲನವಿದೆ.
ಶಂಕರ್ ಮಹಾದೇವನ್, ಅರ್ಮಾನ್ ಮಲಿಕ್, ಫಲಕ್ ಮುಂಚಲ್, ಅನ್ವೇಷಾ, ಸಂದೀಪ್, ಮನೀಷ್ ಅವರು ಅತ್ಯಂತ ಸುಂದರವಾಗಿ ಹಾಡಿದ್ದಾರೆ ಎಂದು ಅವರು ವಿವರಿಸಿದರು. ನಿರ್ಮಾಪಕ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ನಾವು ಅಫಜಲಪುರ ತಾಲೂಕಿನ ರೇವೂರ ಗ್ರಾಮದವರು. ಚಿತ್ರ ತಂಡ ಫೆ. 1ರಂದು ನಗರದ ಶರಣಬಸವೇಶ್ವರ ವಸತಿ ಶಾಲೆ, ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ವೀರಮ್ಮ ಗಂಗಸಿರಿ ಮಹಿಳಾ ವಿದ್ಯಾಲಯ ಮುಂತಾದೆಡೆ ಭೇಟಿ ನೀಡಲಿದೆ.
ಸಂಜೆ 6:30ಕ್ಕೆ ಶ್ರದ್ಧಾ ಮಾಲ್‌ನಲ್ಲಿ ಮಿರಾಜ್ ಹಾಲ್ ನಲ್ಲಿ ಚಿತ್ರದ ಟ್ರೇಲರ ಬಿಡುಗಡೆ ಕಾರ್ಯಕ್ರಮವಿದೆ ಎಂದರು. ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಕಥಾವಸ್ತುವನ್ನು ಒಳಗೊಂಡು, ಈ ಭಾಗದ ಕಲಾವಿದರನ್ನೇ ಆಯ್ಕೆ ಮಾಡಿ ಹೊಸ ಚಲನಚಿತ್ರ ನಿರ್ಮಿಸುವ ಯೋಚನೆ ಹೊಂದಿದ್ದಾಗಿ ತಿಳಿಸಿದರು. ನಿರ್ಮಾಪಕರಾದ ಶೃತಿ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.