ಹೊಳೆಆಲೂರ: ರಾಜ್ಯ ಮಾನವ ಹಕ್ಕುಗಳ ಆಯೋಗ ವಿಶೇಷ ಮುತುವರ್ಜಿ ವಹಿಸುತ್ತಿದ್ದರೂ ಜಾತಿ, ಲಿಂಗ, ಧರ್ಮದ ಆಧಾರದ ಮೇಲೆ ಸಮಾಜದಲ್ಲಿರುವ ದುರ್ಬಲ ವರ್ಗಗಳ ಹಾಗೂ ಮಹಿಳೆಯರ ಮೇಲಿನ ಅಸಮಾನತೆ ಮತ್ತು ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬೋಧನೆ ಜತೆಗೆ ಜನ ಜಾಗೃತಿಯೂ ಅಗತ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಎಲ್.ಎನ್.ಬಾಣದ ಹೇಳಿದರು.
ಗದಗ ನೆಹರು ಯುವ ಕೇಂದ್ರ,
ಹೊಳೆಆಲೂರ ಗಾಯತ್ರಿ ಮಹಿಳಾ ಮಂಡಳ ಸಹಯೋಗದಲ್ಲಿ ಶುಕ್ರವಾರ ಯಚ್ಚರೇಶ್ವರ ಸಭಾಭವನದಲ್ಲಿ ಜರುಗಿದ ವಿಶ್ವ ಮಾನವ ಹಕ್ಕುಗಳು ಕುರಿತ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬದಲಾದ ಕಾಲಕ್ಕೆ ತಕ್ಕಂತೆ ನಗರ ಮಾತ್ರವಲ್ಲ ಗ್ರಾಮೀಣ ಭಾಗದ ಕೌಟಂಬಿಕ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತಿವೆ. ಮಾನವೀಯ ಮೌಲ್ಯಗಳು ಮಾಯವಾಗಿ ಮನೆಯ ಹಿರಿಯರ ಬಗ್ಗೆ ಅಲಕ್ಷ್ಯ ಮಾಡುವ ವಾತಾವರಣ ನಿರ್ಮಾಣವಾಗಿದೆ. ಸರಕಾರ ಮಹಿಳೆಯರಿಗೆ ಆಸ್ತಿ ಮತ್ತಿತರ ಹಕ್ಕು ನೀಡಿದ್ದರೂ ಸೂಕ್ತ ನ್ಯಾಯ ದೊರಕಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣ ನಡೆದರೂ ಸಾಮಾಜಿಕ ನ್ಯಾಯ ದೊರಕುತ್ತಿಲ್ಲ. ಸಂಪೂರ್ಣ ಸಾಕ್ಷರತೆ ಸಾಧಿ ಸಿ ಸಂವಿಧಾನದತ್ತ ಹಕ್ಕುಗಳನ್ನು ಮಹಿಳೆ ದಿಟ್ಟತನದಿಂದ ಪಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ ಎಂದು ಹೇಳಿದರು.
ಉದ್ಘಾಟಕರಾಗಿ ಆಗಮಿಸಿದ್ದ ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷ ಪಾಂಡುರಂಗ ಪತ್ತಾರ ಮಾತನಾಡಿ, ಸಮಾಜದಲ್ಲಿ ಸಮಾನತೆ ಮೂಡಬೇಕಾದರೆ ಸಂಘ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯಲ್ಲಿ ಸರಕಾರ ಮತ್ತು ಸರಕಾರೇತರ ಸಂಘ ಸಂಸ್ಥೆಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಯಚ್ಚರೇಶ್ವರ ಪ್ರಾಥಮಿಕ ಶಾಲೆ ಆಡಳಿತ ಅಧಿಕಾರಿ ವೀರಯ್ಯ ವಸ್ತ್ರದ, ಹಿರಿಯ ನಾಗರಿಕರ ಸಂಘದ ಸಂಗಮೇಶ ಮಮಟಗೇರಿ, ನೆಹರು ಯುವ ಕೇಂದ್ರದ ಕುಬೇರಪ್ಪ ಮಮಟಗೇರಿ,ವೀರೇಂದ್ರಗೌಡ ಪಾಟೀಲ, ಗಾಯತ್ರಿ ಮಹಿಳಾಮಂಡಳದ ಗೌರವ ಅಧ್ಯಕ್ಷೆ ಕಾಮಾಕ್ಷಿ ಪತ್ತಾರ, ಅಧ್ಯಕ್ಷೆ ವಿದ್ಯಾ ಪತ್ತಾರ, ಕಾರ್ಯದರ್ಶಿ ಲಕ್ಷ್ಮೀಭಾಯಿ ಕಮ್ಮಾರ, ಉಪಾಧ್ಯಕ್ಷೆ ಸುನೀತಾ ಪತ್ತಾರ, ಸುನಂದಾ ಬಡಿಗೇರ, ಸಾವಿತ್ರಿ ಪತ್ತಾರ, ಮೀನಾಕ್ಷಿ ಬಡಿಗೇರ, ಕುಮಾರ ಪತ್ತಾರ, ಶಿವಾನಂದ ಹೂಗಾರ ಉಪಸ್ಥಿತರಿದ್ದರು.