Advertisement

ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಮೇಷ್ಟ್ರು ಬಂದೂಕು ಹಿಡಿದರು!’

11:16 AM Mar 06, 2018 | |

ಈಶ್ವರಮಂಗಲ : ಬಾಲ್ಯದಲ್ಲಿ ಸಿಕ್ಕ ಉತ್ತಮ ಮಾರ್ಗದರ್ಶನ, ಆರೆಸ್ಸೆಸ್‌ನ ಶಿಸ್ತಿನ ಪಾಠದಿಂದ ಪ್ರೇರಣೆಗೊಂಡು ಸೇನೆಗೆ ಸೇರಿ ದೇಶಸೇವೆಗೆ ಸಮರ್ಪಿಸಿಕೊಂಡವರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ವಳಂಕ ನಿವಾಸಿ ಹರಿಕೃಷ್ಣ. 
ಕೆ.ವಿ.ದಾಮೋದರ ರಾವ್‌ ಮತ್ತು ಶಶಿಕಲಾ ದಂಪತಿಯ ಪುತ್ರ  ಹರಿಕೃಷ್ಣ, ಬರೆಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಜಿರೆ ಎಸ್‌ಡಿಎಂಸಿ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವವಿದ್ಯಾಲಯದಿಂದ ಸಂಸ್ಕೃತ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಳ್ತಂಗಡಿ ಸರಕಾರಿ ಕಾಲೇಜು, ಬಂಟ್ವಾಳ ಎಸ್‌ವಿಎಸ್‌, ಬಸ್ರೂರು ಶ್ರಿ ಶಾರದಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ ದೇಶಸೇವೆಯ ತುಡಿತ ಆರೆಸ್ಸೆಸ್‌ ಶಾಖೆಗೆ ಹೋಗುತ್ತಿದ್ದ ಹರಿಕೃಷ್ಣ ಅವರು, ಕಾರ್ಯಕರ್ತ ರಾಗಿಯೂ ಕೆಲಸ ಮಾಡಿದ್ದರು. ಆದ್ದರಿಂದ ಸೇನೆಗೆ ಸೇರುವ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು. ಉಪನ್ಯಾಸಕರಾಗಿದ್ದವರು ಸೇನೆಗೆ ಸೇರಲು ಬಯಸಿ ಮಂಗಳೂರಿನ ಕೂಳೂರಿನಲ್ಲಿ ನಡೆದ ಪರೀಕ್ಷೆಗಳನ್ನು ಎದುರಿಸಿ, ಪ್ರಥಮ ಪ್ರಯತ್ನದಲ್ಲೇ ಸೇನೆಗೆ ಸೇರ್ಪಡೆಯಾದರು. ತರಬೇತಿ ಸಂದರ್ಭದಲ್ಲೇ ಹರಿಕೃಷ್ಣ ಅವರ ಸಾಮರ್ಥ್ಯ ನೋಡಿದ ಮೇಲಧಿಕಾರಿಗಳು ಅವರನ್ನು ಜಮ್ಮು-ಕಾಶ್ಮೀರದ ಪಠಾಫಿಣ್‌ದಲ್ಲಿ ಆರನೇ ಎಂಜಿನಿಯರ್‌ ರೆಜಿಮೆಂಟ್‌ನಲ್ಲಿ ನಿಯೋಜಿಸಿದರು. ನೇರವಾಗಿ ಜೂನಿಯರ್‌ ಕಮಿಷನ್‌x ಆಫೀಸರ್‌ ಸ್ಥಾನಕ್ಕೆ ಆಯ್ಕೆಯಾದ ಅಗ್ಗಳಿಕೆ ಇವರದ್ದು. 2006ರಿಂದ ಕಾಶ್ಮೀರ, ಕೋಲ್ಕತಾ, ಪಂಜಾಬ್‌ಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಅಸ್ಸಾಂನ ಹಾಥೀಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

Advertisement

ಅವಿಭಕ್ತ ಕುಟುಂಬ 
ದಾಮೋದರ್‌ ದಂಪತಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಹರಿಕೃಷ್ಣ. ಅವರ ಪತ್ನಿ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿ
ಯಾಗಿದ್ದಾರೆ. ಪುತ್ರಿಯರಾದ ಹರ್ಷಿತಾ, ಮನ್ವಿತಾ ಎಸ್‌ಡಿಎಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎರಡನೇ ಪುತ್ರ ಗುರುಪ್ರಸಾದ ಕೆ.ವಿ. ಪುರೋಹಿತರಾಗಿದ್ದು, ಇವರು ಪತ್ನಿ ಪಲ್ಲವಿ, ಪುತ್ರ ಅಪ್ರಮೇಯ ರೊಂದಿಗಿದ್ದಾರೆ. ಮೂರನೆಯವರಾದ ಪುತ್ರಿ ಪವಿತ್ರಾರವರು ಸುಳ್ಯದ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಳಿಯ ನವೀನ್‌ ಪೌರೋಹಿತ್ಯ ನಡೆಸುತ್ತಿದ್ದಾರೆ. ಇವರಿಗೂ ಇಬ್ಬರು ಮಕ್ಕಳಿದ್ದಾರೆ.

ಮರೆಯದ  ನೆನಪುಗಳು
2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದಾಗ, ನಮ್ಮ ತಂಡ ಅನತಿ ದೂರದಲ್ಲಿತ್ತು. ಈ ವೇಳೆ ಆತಂಕವಾಗಿದ್ದರೂ, ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದೆವು. 

ಕಾರ್ಯನಿಮಿತ್ತ ಚೀನದ ಗಡಿಪ್ರದೇಶಗಳಾದ ತವಾಂಗ್‌ಗೆ ಭೇಟಿ ನೀಡಿದ್ದೆ. ಇಲ್ಲಿನ ಜದ್ವಂತ್‌ ಘರ್‌ ಯುದ್ಧ ಸ್ಮಾರಕ, ಶೀಲಾಟಾಪ್‌ ನೌರಾಟಾಪ್‌ ರೋಮಾಂಚಕಾರಿ ಹಾಗೂ ಅವಿಸ್ಮರಣೀಯ ಸ್ಥಳಗಳು ಎನ್ನುತ್ತಾರೆ ಹರಿಕೃಷ್ಣ.

ದೇಶಸೇವೆ ಯಿಂದ ಧನ್ಯ
ರಾಷ್ಟ್ರ ರಕ್ಷಣೆ ಕಾಯಕದಲ್ಲಿ ಸಿಗುವ ಧನ್ಯತೆಯ ಭಾವ ಬೇರೆ ಯಾವ ಉದ್ಯೋಗ ದಲ್ಲೂ ಸಿಗಲು ಸಾಧ್ಯವಿಲ್ಲ. ಸೈನಿಕನಾಗಿ ಸೇವೆ ಸಲ್ಲಿಸಲು ಎಲ್ಲ ಗುರು-ಹಿರಿಯರ ಆಶೀರ್ವಾದ ಹಾರೈಕೆಯೇ ಕಾರಣ. ಪತ್ನಿಯ ಪ್ರೋತ್ಸಾಹದ ಮಾತುಗಳು ನನ್ನ ಮನೋಬಲ ಹೆಚ್ಚಿಸಿತ್ತು. 
 ಹರಿಕೃಷ್ಣ

Advertisement

ದೇಶಸೇವೆಗಿಂತ ಮಿಗಿಲಾದ ಸೇವೆ ಬೇರೊಂದಿಲ್ಲ. ಮಗನ ಸೇವೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ಮಗನ ಶ್ರೇಯಸ್ಸನ್ನೇ ಬಯಸುತ್ತೇವೆ. ಆತನ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ.
 ಶಶಿಕಲಾ-ದಾಮೋದರ ರಾವ್‌ ಕೆ.ವಿ, ಹೆತ್ತವರು

ದೇಶ ಕಾಯುವ ಸೈನಿಕನ ಪತ್ನಿ ಎಂಬುದಕ್ಕೆ ನನಗೆ ಅತೀವ ಹೆಮ್ಮೆಯಿದೆ. ಶಿಕ್ಷಕಿಯಾಗಿ ನಾನು ಬೋಧನೆ ಮಾಡುವ ವೇಳೆ ವಿದ್ಯಾರ್ಥಿಳಲ್ಲೂ ದೇಶಪ್ರೇಮ ಮೈಗೂಡಿಸಿಕೊಳ್ಳಲು ಹೇಳುತ್ತೇನೆ.  
 ಕವಿತಾ ಹರಿಕೃಷ್ಣ, ಪತ್ನಿ

ಮಾಧವ ನಾಯಕ್‌. ಕೆ

Advertisement

Udayavani is now on Telegram. Click here to join our channel and stay updated with the latest news.

Next