Advertisement
ಆದರೆ.. ಅದೊಂದು ದಿನ ಮಟಮಟ ಮಧ್ಯಾಹ್ನ ಬಂದ ಸುದ್ದಿ ಬರಸಿಡಿಲು ಬಡಿದಂತಾಗಿತ್ತು. ತಾಯಿಯ ಅತೀವ ಪ್ರೀತಿಯ ಹಿರಿಯ ಮಗ ಸದ್ದಿಲ್ಲದೆ ಇಹಲೋಕ ತ್ಯಜಿಸಿದ್ದ. ಅಮ್ಮನ ಪ್ರತಿಕ್ಷಣದ ನೆನಪಿಗಾಗಿ ಕೈಯ ಮೇಲೆ ಆಕೆಯ ಹೆಸರನ್ನು ಹಚ್ಚೆ ಕುರುಹಾಗಿ ಕಂಡಿತ್ತು. 2016ರ ಏಪ್ರಿಲ್‌ನಲ್ಲಿ ಬೆಂಗಳೂರು ಹೊರವಲಯದ ದೇವನಹಳ್ಳಿ ಸಮೀಪದ ನಂದಿಕ್ರಾಸ್‌ನಲ್ಲಿ ರೈಲಿಗೆ ಸಿಲುಕಿ ಮೃತಪಟ್ಟವನ ಗುರುತು ಹಚ್ಚೆಯಿಂದಾಗಿ ಪತ್ತೆಯಾಗಿತ್ತು.
Related Articles
Advertisement
ಹಿರಿಯ ಮಗ ಕುಮಾರ್ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗದೇ ಪೋಷಕರ ಆಕ್ರಂದನದ ಕಟ್ಟೆ ಒಡೆದಿತ್ತು. ಈಗಾಗಲೇ ಮಣ್ಣು ಮಾಡಿರುವ ಕುಮಾರ್ ಮೃತದೇಹ ಕೊಂಡೊಯ್ದು ಬೇರೆಕಡೆ ಮಣ್ಣು ಮಾಡಿಕೊಳ್ಳಬಹುದು ಎಂದು ಪೊಲೀಸರು ಸೂಚಿಸಿದರು.
ಹಿರಿಯ ಮಗನ ಮುಖದ ಛಾಯೆಯನ್ನು ಮನಸ್ಸಲ್ಲೇ ಇಟ್ಟುಕೊಂಡಿದ್ದ ತಾಯಿಗೆ ಛಿದ್ರವಾಗಿದ್ದ ಮೃತದೇಹ ತೋರಿಸುವುದು ಬೇಡ ಎಂದು ಸಂಬಂಧಿಕರು ನಿರ್ಧರಿಸಿದರು. ಆ ಸಂಬಂಧ ಪ್ರಮೋದ್ ಹೆತ್ತವರಿಗೆ ಸಮಾಧಾನ ಮಾಡಿದ. ಬಳಿಕ ಕುಟುಂಬಸ್ಥರು ಕುಮಾರ್‌ನನ್ನು ಮಣ್ಣು ಮಾಡಿ, ಸಮಾಧಿ ಕಟ್ಟಿಸಿ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಮನೆಬಿಟ್ಟ ದಿನವೇ ಆತ್ಮಹತ್ಯೆ: ಮನೆಗೆ ಹಿರಿಯ ಮಗನಾಗಿದ್ದ ಕುಮಾರ್‌ಗೆ ಮೊದಲಿನಿಂದಲೂ ಮೂರ್ಛೆ ರೋಗದ ಸಮಸ್ಯೆ ಕಾಡುತ್ತಿತ್ತು. ಚಿಕಿತ್ಸೆ ಪಡೆದುಕೊಂಡ ಬಳಿಕ ಸ್ವಲ್ಪಪ್ರಮಾಣದಲ್ಲಿ ಕಡಿಮೆಯಾಗಿತ್ತು. ತಂದೆಯ ಜತೆ ಕಟ್ಟಡ ನಿರ್ಮಾಣ ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತಿದ್ದರು.
ಕುಮಾರ್‌ಗೆ ವಿವಾಹ ಮಾಡಲು ನಿಶ್ಚಯಿಸಿದ ಪೋಷಕರು, ಮದುವೆಯಾಗಲಿದ್ದ ಯುವತಿಗೆ ಆತನಿಗೆ ಆಗಾಗ್ಗೆ ಕಾಡಲಿರುವ ಮೂರ್ಛೆ ರೋಗದ ಸಮಸ್ಯೆಯ ಬಗ್ಗೆಯೂ ಹೇಳಿದ್ದರು. ಇದನ್ನು ಒಪ್ಪಿಕೊಂಡಿದ್ದ ಆಕೆ ಕುಮಾರ್‌ನನ್ನು ಮದುವೆ ಮಾಡಿಕೊಂಡಿದ್ದರು. ಆದರೆ, ಆರೇ ತಿಂಗಳಲ್ಲಿ ಆಕೆಯ ವರಸೆ ಬದಲಾಗಿತ್ತು. ಆಕೆ ಒಂದು ದಿನ ಇದ್ದಕ್ಕಿದ್ದಂತೆ ಮನೆಬಿಟ್ಟು ಹೋಗಿದ್ದಳು. ಕುಮಾರ್ ಅಂಗಲಾಚಿದರೂ ವಾಪಾಸ್ ಬರಲು ಆಕೆ ಒಪ್ಪಿರಲಿಲ್ಲ.
ಅನಾರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಮಾನಸಿಕ ಖನ್ನತೆಗೆ ಒಳಗಾಗಿದ್ದ ಕುಮಾರ್ ಕುಡಿತದ ಅಭ್ಯಾಸ ಮಾಡಿಕೊಂಡಿದ್ದ. ಬರಬರುತ್ತಾ ಅಭ್ಯಾಸ ಚಟವಾಗಿ ಬದಲಾಗಿತ್ತು. ಕುಮಾರ್ ಮನೆಯವರ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗುವುದು ಮತ್ತೆ ಬರುವುದು ನಡೆಯುತ್ತಿತ್ತು. ಆದರೆ, 2014ರ ಏ. 2ರಂದು ಮನೆ ಬಿಟ್ಟು ಹೋಗಿದ್ದ ಕುಮಾರ್ ಮತ್ತೆ ಬರಲೇ ಇಲ್ಲ. ನಂದಿಕ್ರಾಸ್‌ನಲ್ಲಿ ಚಲಿಸುತ್ತಿರುವ ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ.
ಪೊಲೀಸರಿಂದಲೇ ಅಂತ್ಯಕ್ರಿಯೆ: ರೈಲಿಗೆ ಸಿಲುಕಿದ ಕುಮಾರ್ ದೇಹ ಚೆಲ್ಲಾಪಿಲ್ಲಿಯಾಗಿದ್ದು, ಮುಖ ಗುರುತುಸಿಗದಂತಾಗಿತ್ತು. ಸ್ಥಳಕ್ಕೆ ಬಂದಿದ್ದ ರೈಲ್ವೆ ಪೊಲೀಸರು, ಮೃತದೇಹವನ್ನು ಪರಿಶೀಲಿಸಿದರು ಆತ ಧರಿಸಿದ್ದ ಬಟ್ಟೆಗಳಲ್ಲಿಯೂ ಆತನ ವಿಳಾಸದ ಕುರಿತ ಸಣ್ಣ ಸುಳಿವೂ ದೊರೆತಿರಲಿಲ್ಲ. ಮೃತದೇಹ ವಶಕ್ಕೆ ಪಡೆದಿದ್ದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದಾಗ ಮೃತವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಧೃಡಪಟ್ಟಿತ್ತು. ಆದರೆ, ಆತನ ವಿಳಾಸ ಮಾತ್ರ ಎಷ್ಟು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ.
ಕಡೆಗೆ ಅಪರಿಚಿತ ಶವ ಪತ್ತೆಯ ಬಗ್ಗೆ ಆತನ ಕೈ ಮೇಲಿದ್ದ ಶೋಭಾ ಹೆಸರಿನ ಕುರಿತು ಮಾಹಿತಿ ಬರೆದಿದ್ದ ಪೊಲೀಸರು ಆತನ ಪೋಷಕರ ಪತ್ತೆಗೆ ರೈಲ್ವೆ ನಿಲ್ದಾಣ, ಬಸ್‌ಸ್ಟಾಂಡ್ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಪ್ರಕಟಿಸಿದ್ದರು. ಆದರೆ ಇಪ್ಪತ್ತು ದಿನ ಕಳೆದರೂ ಯಾರೊಬ್ಬರು ಶವ ತಮ್ಮದೆಂದು ಮುಂದೆ ಬಂದಿರಲಿಲ್ಲ. ಕಡೆಗೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು.
* ಮಂಜುನಾಥ ಲಘುಮೇನಹಳ್ಳಿ