ಅಲ್ಲಿ ಮರದ ಕವಾಟಿನ ಕೆಳಗಿನ ಭಾಗದಲ್ಲಿ ಸಣ್ಣ ಮಣ್ಣಿನ ಪಾತ್ರೆ ಇದೆ ನೋಡು, ಅದನ್ನು ತೆಗೆದುಕೊಂಡು ಬಾ ಮಗಳೇ, ಊಟಕ್ಕೆ ಕುಳಿತುಕೊಳ್ಳುವ ಮೊದಲೇ ಇಟ್ಟುಕೊಳ್ಳಬೇಕಿತ್ತು. ಮರೆತೇ ಹೋಯ್ತು” ಅಜ್ಜಿ ಹೇಳುತ್ತಿದ್ದರೆ, ಪುಳ್ಳಿ, “”ಇವತ್ತಿಗೂ ಉಳಿದಿದೆಯಾ ಅದು” ಎಂದು ಮುಖ ಸಿಂಡರಿಸುತ್ತ ಒಳ ಹೋಗಿ ಪುಟ್ಟ ಮಡಿಕೆಯಲ್ಲಿ ತುಂಬಿದ್ದ ನಿನ್ನೆ ಮಾಡಿದ ಹಾಗಲ ಗೊಜ್ಜನ್ನು ತಂದು ಅಜ್ಜಿಯ ಬಾಳೆಲೆಯ ಪಕ್ಕದಲ್ಲಿಟ್ಟಳು. “”ಅಜ್ಜೀ, ನೀನ್ಯಾಕೆ ಯಾವಾಗಲೂ ಅಜ್ಜನ ಊಟ ಮುಗಿದ ನಂತರವೇ ಊಟಕ್ಕೆ ಕುಳಿತುಕೊಳ್ಳೋದು? ನಮ್ಮಲ್ಲಿ ಅಪ್ಪ-ಅಮ್ಮ-ನಾನು ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುತ್ತೇವೆ. ನಿನಗೂ ಅಜ್ಜನ ಜೊತೆಗೇ ಕುಳಿತು ಊಟ ಮಾಡಿದರೇನು?” ಅಜ್ಜಿಯ ನಡೆ ಕಾಲೇಜಿಗೆ ಹೋಗುವ ಮೊಮ್ಮಗಳಿಗೆ ಯಾವತ್ತೂ ಕೌತುಕದ್ದೇ; ಹಾಗಾಗಿಯೇ ಪ್ರಶ್ನೆ ಮಾಡಿದ್ದಳು.
ಅಜ್ಜಿ ಗೊಜ್ಜಿನ ಪಾತ್ರೆಯಿಂದ ಕೊಂಚ ಗೊಜ್ಜನ್ನು ಬಾಳೆಯ ಬದಿಗೆ ಬಡಿಸಿಕೊಳ್ಳುತ್ತ ಮಾತು ಪ್ರಾರಂಭಿಸಿದಳು, “”ಮಧ್ಯಾಹ್ನದ ಹೊತ್ತಿಗೆ ನಿನ್ನಜ್ಜ ಊಟಕ್ಕೆ ಬರುವಾಗ ಜೊತೆಗೊಬ್ಬರೋ ಇಬ್ಬರೋ ನೆಂಟರಿಷ್ಟರನ್ನೂ ಕರೆತರುತ್ತಿದ್ದರು. ಈಗಿನ ಕಾಲದ ಹಾಗೆ ಸ್ಟವ್, ಕುಕ್ಕರ್ ಎಲ್ಲವೂ ಎಲ್ಲಿತ್ತು ಮಗಾ ಆಗ. ಬಂದ ಕೂಡಲೇ ಇದ್ದದ್ದನ್ನು ಬಡಿಸಿ ಬಂದವರು ಉಪವಾಸ ಬೀಳದ ಹಾಗೇ ನೋಡಿಕೊಂಡು ಅಜ್ಜನ ಮರ್ಯಾದೆ ಕಾಪಾಡುವುದೇ ದೊಡ್ಡದಾಗಿತ್ತು ನೋಡು” “”ಮತ್ತೆ ನಿನಗೆ ಊಟ ಉಳಿಯದೇ ಇದ್ದರೆ ಏನು ಮಾಡುತ್ತಿ¨ªೆ?” ಅಜ್ಜಿಯ ಹೊಟ್ಟೆಯ ಚಿಂತೆ ಮೊಮ್ಮಗಳದ್ದು.
ಅಜ್ಜಿ ಮುಖದಲ್ಲಿ ಸಂಜೆಯ ಸೂರ್ಯನ ರಂಗೇರಿಸಿಕೊಳ್ಳುತ್ತ, “”ಹಾಗಾಗಲು ನಿನ್ನಜ್ಜ ಎಲ್ಲಿ ಬಿಡುತ್ತಿದ್ದರು ಹೇಳು? ಗಂಡ ಉಂಡೆದ್ದ ಎಲೆಯಲ್ಲೇ ಊಟ ಮಾಡುವುದು. ನನ್ನತ್ತೆ-ಅಜ್ಜಿಯರ ಕಾಲದಿಂದ ನಡೆದು ಬಂದ¨ªಾಗಿತ್ತು ನೋಡು. ನಿನ್ನಜ್ಜ ತಮ್ಮ ಎಲೆಯ ಬದಿಯಲ್ಲಿ ನನ್ನ ಹೊಟ್ಟೆ ತುಂಬುವಷ್ಟು ಅನ್ನದ ರಾಶಿ ಬಿಟ್ಟು, “”ನೀನು ಬಡಿಸಿದ್ದು ಕೊಂಚ ಹೆಚ್ಚಾಯಿತು ನೋಡು, ಈಗಲೇ ಕೈಕೊಟ್ಟು ಏಳಿಸುವಂತಾಗಿದೆ” ಎಂದು ಅವರ ಹೊಟ್ಟೆಯ ಮೇಲೆ ಕೈಯಾಡಿಸುತ್ತ ಏಳುತ್ತಿದ್ದರು. ನಿಜವಾಗಿ ಹೊಟ್ಟೆ ತುಂಬಿರುತ್ತಿತ್ತೆಂದಲ್ಲ. ನಾನು ಉಪವಾಸ ಮಲಗಬಾರದೆಂದಷ್ಟೇ ಆ ನಾಟಕ, ಈಗ ಆ ಅಭ್ಯಾಸವೇ ಮುಂದುವರಿದಿದೆ ಅಷ್ಟೇ” ಅಜ್ಜಿಯ ಕಣ್ಣಲ್ಲಿ ನಗೆಯ ಜೊತೆಗೇ ಮೂಡಿದ ಹನಿ ಸಂತಸದ್ದೇ ಆಗಿತ್ತು.
“”ಅಮ್ಮಾ, ರಾತ್ರೆಗೆ ನನ್ನ ಹಾಸ್ಟೆಲ್ ಫ್ರೆಂಡ್ಸ್ ಬರ್ತಾರಮ್ಮಾ, ಮಾಮೂಲಿ ಊಟ ಬೇಡ. ಏನಾದ್ರೂ ಸ್ಪೆಷಲ್ ತಿಂಡಿ ಮಾಡ್ಕೊಡು” ಎಂದು ಫೋನಿಗೆ ಬಂದ ಮಗನ ಮೆಸೇಜಿಗೆ ಅಮ್ಮ ತಲೆಯ ಮೇಲೆ ಕೈ ಇಟ್ಟು ಕುಳಿತಿದ್ದಳು. ತಿಂಡಿ ಮಾಡಲು ಕಷ್ಟ ಎಂದೇನಲ್ಲ. ಮಧ್ಯಾಹ್ನದ ಅಡುಗೆಯೇ ರಾತ್ರೆಗಾಗುವಷ್ಟು ಮಾಡಿದ್ದಳಲ್ಲ! ಅದನ್ನೇನು ಮಾಡುವುದಿನ್ನು- ಎಂಬ ತಲೆಬಿಸಿ. ಆದರೆ, ಅಮ್ಮ ಎಂದಿದ್ದರೂ ಅಮ್ಮನೇ. ಮಧ್ಯಾಹ್ನದ ಅನ್ನಕ್ಕೆ ಅದರ ಎರಡು ಭಾಗದಷ್ಟು ಅಕ್ಕಿಹುಡಿಯನ್ನು ಬೆರೆಸಿ, ಉಪ್ಪು, ಒಂದಿಷ್ಟು ನೀರು ಚಿಮುಕಿಸಿ ಒಲೆಯ ಮೇಲೆ ಇಟ್ಟು ಕಾಸಿದ್ದಳು. ಹಿಟ್ಟು ಒಂದೇ ಮು¨ªೆಯಂತಾದಾಗ ಉಂಡೆ ಮಾಡಿ ಉಗಿಯಲ್ಲಿ ಬೇಯಲಿಟ್ಟು, ಬೆಂದ ನಂತರ ಅದನ್ನು ಶ್ಯಾವಿಗೆ ಅಚ್ಚಿಗೆ ಹಾಕಿ ಶ್ಯಾವಿಗೆ ಮಾಡಿಟ್ಟಳು. ಮಧ್ಯಾಹ್ನದ ಮಂದ ಸಾಂಬಾರಿಗೆ ಒಂದಿಷ್ಟು ಹೊಸ ತರಕಾರಿ ಬೇಯಿಸಿ ಹಾಕಿ, ಅದು ತೆಳುವಾಗುವಷ್ಟು ನೀರು ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು-ಹುಳಿ-ಖಾರ ಸೇರಿಸಿ, ಪರಿಮಳಭರಿತ ಒಗ್ಗರಣೆ ಕೊಟ್ಟಳು. ದೇವರ ಮನೆಯ ಮೂಲೆಯಲ್ಲಿ ಯಾವಾಗಲು ಇರುತ್ತಿದ್ದ ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸಿ, ಬೆಲ್ಲ, ತೆಂಗಿನಹಾಲು ಬೆರೆಸಿದ ರಸಾಯನ. ಪಟ್ಟಾಗಿ ಉಂಡೆದ್ದ ಗೆಳೆಯರನ್ನು ನೋಡಿ ಅಮ್ಮನ ಕಡೆಗೆ ಹೆಮ್ಮೆಯ ನೋಟ ಬೀರಿದ್ದ ಮಗ. ತನ್ನಲ್ಲೇ ಉಳಿದ ರಹಸ್ಯವನ್ನು ಬಯಲು ಮಾಡದೇ ನಸುನಕ್ಕ ಅಮ್ಮ.
ಮದುವೆಯಾದ ಬಳಿಕ ಮೊದಲ ಬಾರಿ ಮಗಳೊಬ್ಬಳೇ ಅಮ್ಮನ ಮನೆಯಲ್ಲಿ ಒಂದೆರಡು ದಿನ ಉಳಿಯಲೆಂದು ತವರಿಗೆ ಬಂದಿದ್ದಳು. ಕೆಲತಿಂಗಳ ಮೊದಲಷ್ಟೇ ಮದುವೆಯಾಗಿತ್ತು ಅವಳಿಗೆ. ಅದರ ಜೊತೆಗೆ ಅವಳ ಹೆಚ್ಚಿನ ವಿದ್ಯಾಭ್ಯಾಸದ ಕಲಿಕೆಯ ಹೊರೆ, ಮದುವೆಯ ಹೊಸ ಜವಾಬ್ದಾರಿಗಳು. ಅವಳಮ್ಮನಿಗೋ ಮಗಳು ಇದೆಲ್ಲವನ್ನೂ ಸಂಭಾಳಿಸಿಯಾಳೇ ಎಂಬ ಆತಂಕವಿದ್ದುದು ಸಹಜ. ದಿನನಿತ್ಯ ಮಗಳಿಗೆ ಫೋನಿನಲ್ಲಿ ಗಂಟೆಗಟ್ಟಲೆ ಕೊಡುವ ಸಲಹೆ-ಸೂಚನೆಗಳಿದ್ದರೂ ಈಗ ಮಗಳು ಕಾಲಿಗೆ ನೀರು ಹಾಕಿಕೊಂಡು ಒಳನುಗ್ಗುವ ಮುನ್ನವೇ ಅಮ್ಮನ ಪ್ರಶ್ನೆಪತ್ರಿಕೆ ಸಿದ್ಧವಾಗಿತ್ತು. “”ಕಾಲೇಜಿಗೆ ಹೋಗುವ ಮೊದಲು ಅಡುಗೆಯೆಲ್ಲ ಹೇಗೇ ಮಾಡ್ತೀಯಾ? ನಾನು ಹೇಳಿದ ಹಾಗೆ ತರಕಾರಿಯೆಲ್ಲ ಮೊದಲ ದಿನವೇ ಕತ್ತರಿಸಿ ತಯಾರು ಮಾಡಿಕೊಳ್ತೀಯಾ ತಾನೆ? ದಿನಾ ಹೊರಗಿನ ಹಾಳುಮೂಳು ತಿಂದು ಆರೋಗ್ಯ ಕೆಡಿಸಿಕೊಳ್ತಾ ಇಲ್ಲ ಅಲ್ವಾ?”
“”ಉಹೂಂ, ಇಲ್ಲಾ ಅಮ್ಮಾ. ನಾನೇನು ಅಡುಗೆ ಮಾಡಿಕೊಳ್ತಿಲ್ಲ” ಮಗಳಿನ್ನೂ ಮಾತು ಮುಂದುವರಿಸುವ ಮೊದಲೇ ಅಮ್ಮನಿಗೆ ಅವಸರ. “”ಅಯ್ಯೋ, ಮತ್ತೇನೇ ಮಾಡ್ತೀಯಾ?”
“”ಇದ್ದಾರಲ್ಲಮ್ಮಾ ನಿನ್ನ ಅಳೀಮಯ್ಯ, ನಳಮಹಾರಾಜ. ಸದ್ಯಕ್ಕೆ ನಾನವರಿಗೆ ಅಡುಗೆಯ ಪರಿಕರ ಒದಗಿಸುವ ಕೈಯಾಳು ಅಷ್ಟೇ. ಅವರಿಗೆ ಅಡುಗೆ ಮಾಡೋದು ಭಾರೀ ಇಷ್ಟ. ಅಡುಗೆಯ ಚಾನೆಲ್ ನೋಡ್ಕೊಂಡು ಎಷ್ಟೆಲ್ಲ ಅಡುಗೆ ಮಾಡ್ತಾರೆ ಗೊತ್ತಾ? ನಮ್ಮಲ್ಲಿ ಅಂತ ಅಲ್ಲ. ನಾವು ರಜ ಸಿಕ್ಕಾಗ ಅತ್ತೆ-ಮಾವ ಇರುವಲ್ಲಿಗೆ ಹೋಗಿದ್ದೆವಲ್ಲ, ಅಲ್ಲಿಯೂ ಮಗ ಬಂದರೆ ಸಾಕು, ಅತ್ತೆ ಅಡುಗೆ ಕೋಣೆಯನ್ನು ಮಗನಿಗೊಪ್ಪಿಸಿ ಆರಾಮವಾಗಿ ಕೂತ್ಕೊತಾರೆ”
ಅಮ್ಮನಿಗಿದು ಹೊಸ ಸುದ್ದಿ. ಈಗಲೂ, ಬಿಸಿನೀರು ಬೇಕಿದ್ರೂ ಅಮ್ಮನೇ ಮಾಡಿಕೊಡಲಿ ಎಂದು ಬಯಸುವ ತನ್ನ ಮಗನಿಗೆ ಹೋಲಿಸಿತು ಈ ಮುದ್ದಿನ ಅಳಿಯನನ್ನು. ಇಂದಿನಿಂದಲೇ ತನ್ನ ಮಗನನ್ನೂ ಕೊಂಚ ತಯಾರು ಮಾಡಬೇಕು. ನಮ್ಮ ಮನೆಗೆ ಬರುವ ಹುಡುಗಿಯೂ ತನ್ನ ತಾಯಿಮನೆಗೆ ಹೋಗಿ ಹೀಗೇ ಮಾತನಾಡುವಂತಾದರೆ… ಆಹಾ!
ಹೊಟ್ಟೆ ತುಂಬುವುದು ನಿಜಕ್ಕೂ ಆಹಾರದಿಂದಲ್ಲ. ಆ ಆಹಾರವನ್ನು ಪ್ರೀತಿಯಿಂದ ಉಣ್ಣುವಂತೆ ಮಾಡುವ ಮನಸ್ಸುಗಳಿಂದ.
ಅನಿತಾ ನರೇಶ ಮಂಚಿ