Advertisement

ಟ್ಯಾಂಕರ್‌ ನೀರಿನ ಲಾಬಿಗೆ ಅವಕಾಶವಿಲ್ಲ

04:21 PM Dec 13, 2018 | Team Udayavani |

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ವಿಪತ್ತು ಪರಿಹಾರ ನಿಧಿಯಡಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಒಂದು ವಾರದೊಳಗೆ ಪರಿಹಾರ ಒದಗಿಸಬೇಕು ಎಂದು ಜಿಪಂ ಸಿಇಒ ಜಿ.ಜಗದೀಶ್‌ ಸೂಚಿಸಿದರು.

Advertisement

 ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಬರ ಪರಿಸ್ಥಿತಿ ನಿರ್ವಹಣಾ ಸಭೆಯಲ್ಲಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ತಾಪಂ ಇಒಗಳಿಗೆ ಸೂಚನೆ ನೀಡಿದರು. ಈ ಕೂಡಲೇ ಸಂಬಂಧಪಟ್ಟದ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಸಿದ್ಧಪಡಿಸಿರುವ ಕ್ರಿಯಾಯೋಜನೆಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಸಲ್ಲಿಸುವಂತೆ ತಿಳಿಸಿದ ಅವರು, ಪ್ರಸಕ್ತ ವರ್ಷ ಯಾವುದೇ ಕಾರಣಕ್ಕೂ ಟ್ಯಾಂಕರ್‌ ಲಾಬಿಗೆ ಅವಕಾಶ ಇಲ್ಲ. ಬಂಗಾರಪೇಟೆ ಡಿ.ಕೆ. ಹಳ್ಳಿಯಲ್ಲಿ ಉದ್ಬವಿಸಿದ್ದ ಟ್ಯಾಂಕರ್‌ ಸಮಸ್ಯೆಗೆ ಈಗ ಕಡಿವಾಣ ಹಾಕಲಾಗಿದೆ ಎಂದು ಸಭೆಗೆ ತಿಳಿಸಿದರು. 

ಹಲವಾರು ಕಡೆ ಕೊಳವೆ ಬಾವಿಗಳು ನಿಷ್ಕ್ರಿಯಗೊಂಡಿರುವ ಕಾರಣ ಹೊಸದಾಗಿ ಕೊಳವೆ ಬಾವಿ ತೆರೆಸಲು ಓರ್ವ ಭೂ ವಿಜ್ಞಾನಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಈ ಬಗ್ಗೆ ಟೆಂಡರ್‌ ಜಾಹೀರಾತು ನೀಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ರಾಜ್ಯದಲ್ಲಿ ಹಲವಾರು ಕಡೆ ತೀವ್ರ ಬರಗಾಲ ಎದುರಾಗಿರುವ ಕಾರಣ ಸರ್ಕಾರ ನರೇಗಾ ಅಡಿಯಲ್ಲಿ ಈ ಹಿಂದೆ ಇದ್ದ 100 ಕಡ್ಡಾಯ ಮಾನವ ದಿನಗಳ ಬದಲಾಗಿ ಕನಿಷ್ಠ 150 ಮಾನವ ದಿನಗಳನ್ನು ಸೃಜಿಸುವಂತೆ ಸೂಚನೆ ನೀಡಿದೆ. ಅರ್ಜಿ ಸಲ್ಲಿಸಿರುವವರಿಗೆ ಯಾವುದೇ ಕಾರಣಕ್ಕೂ ಕೆಲಸ ತಪ್ಪಿಸುವಂತಿಲ್ಲ. ಈ ಬಗ್ಗೆ ಬರ ಪರಿಸ್ಥಿತಿ ನಿರ್ವಹಣಾ ಹೋಬಳಿ ಮಟ್ಟದ ನೋಡಲ್‌ ಅಧಿಕಾರಿಗಳು ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದರು. 

ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಗುರುತಿಸಿ ಹೋಬಳಿ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರತಿ ಶನಿವಾರ ಸಭೆ ಸೇರಿ ಕೈಗೊಳ್ಳಬಹುದಾದ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸುವಂತೆ ಅವರು ನೋಡಲ್‌ ಅಧಿಕಾರಿಗಳಿಗೆ ತಿಳಿಸಿದರು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಮೇವು ಬೆಳೆಯಲು ಮಿನಿ ಕಿಟ್‌ಗಳನ್ನು ಆದಷ್ಟು ಬೇಗ ರೈತರಿಗೆ ವಿತರಿಸಿ. ಈ ಹಿಂದೆ ಬೆಳೆದಿರುವ ಬೆಳೆ
ಕಟಾವು ಹಂತ ತಲುಪುವ ಸಮಯಕ್ಕೆ ಮಿನಿಕಿಟ್‌ ವಿತರಿಸಿದ್ದಲ್ಲಿ ಕಟಾವಿನ ಕೂಡಲೇ ಹೊಸದಾಗಿ ಬೀಜ ಬಿತ್ತನೆಗೆ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಮಿನಿಕಿಟ್‌ ವಿತರಣೆಗೆ ಮುಂಚಿತವಾಗಿಯೇ ಯೋಜನೆ ರೂಪಿಸುವಂತೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ನೋಡಲ್‌ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next