ಹೊನ್ನಾಳಿ: ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ನ್ಯಾಮತಿ ತಾಲೂಕಿನ ಫಲವನಹಳ್ಳಿÛ ಗ್ರಾಮಕ್ಕೆ ತಾಲೂಕು ಆಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಿದೆ.
ಹೊನ್ನಾಳಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಅವರು ತಾ.ಪಂ ಇಒ ರಾಘವೇಂದ್ರ ಅವರೊಂದಿಗೆ ಚರ್ಚಿಸಿ ಅವಳಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವಂತಹ ಗ್ರಾಮಗಳನ್ನು ಗುರ್ತಿಸಿ, ತಕ್ಷಣ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು. ನಂತರ ಅಗತ್ಯವಿದ್ದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿ ಎಂದು ಸೂಚಿಸಿದರು.
ತಾ.ಪಂ ಇಒ ರಾಘವೇಂದ್ರ ಅವರು ಪಿಡಿಓಗೆ ಸೂಚನೆ ನೀಡಿ ತಕ್ಷಣ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ.
ತಾ.ಪಂ ಇಒ ಪತ್ರಿಕೆಯೊಂದಿಗೆ ಮಾತನಾಡಿ, ದಿನಕ್ಕೆ 3ರಿಂದ 4 ಟ್ಯಾಂಕರ್ ನೀರನ್ನು ಫಲವನಹಳ್ಳಿ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಗ್ರಾಮಸ್ಥರು ಮನೆಯ ಮುಂದೆ ಪಾತ್ರೆ, ಕೊಡಗಳನ್ನು ಇಟ್ಟು ಟ್ಯಾಂಕರ್ ನೀರು ಸಂಗ್ರಹಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಲೋಕಸಭೆ ಮತದಾನದ ಮುನ್ನಾದಿನ ಫಲವನಹಲಿÛ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕುಡಿಯುವ ನೀರು ಸಮಸ್ಯೆ ತಕ್ಷಣ ಬಗೆಹರಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ನಂತರ ಅಧಿಕಾರಿಗಳ ಮನವೊಲಿಕೆಯಿಂದಾಗಿ ಪ್ರತಿಭಟನೆ ಹಿಂಪಡೆಯಲಾಗಿತ್ತು. ಪತ್ರಿಕೆಯ ಏ. 29ರ ಸಂಚಿಕೆಯಲ್ಲಿ ಮತದಾನ ಬಹಿಷ್ಕಾರ ಬೆದರಿಕೆ ಹಾಕಿದ್ದ ಗ್ರಾಮಸ್ಥರಿಗೆ ಅಧಿಕಾರಿಗಳು ನೀಡಿದ್ದ ಭರವಸೆ ಈಡೇರುವುದೇ ಎಂಬ ಶೀರ್ಷಿಕೆಯಡಿ ಗ್ರಾಮಸ್ಥರ ಸಮಸ್ಯೆ ಸುದ್ದಿ ಪ್ರಕಟವಾಗಿತ್ತು. ಆ ವರದಿಯನ್ನು ನೋಡಿ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆ ನಿವಾರಣೆಗೆ ಮುಂದಾಗಿ ಟ್ಯಾಂಕರ್ ನೀರು ಪೂರೈಕೆ ಆರಂಭಿಸಿದ್ದಾರೆ.