ಕುಂದಾಪುರದ ವ್ಯಾಸರಾಜ ಮಠದಲ್ಲಿ ನಡೆದ ಗಾಣಿಗ ಸಮಾಜದ ಕುಲಗುರು ಶ್ರೀ ಲಕ್ಷ್ಮೀಂದ್ರ ತೀರ್ಥರ ಚಾತುರ್ಮಾಸ್ಯ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗಾಣಿಗ ಸಮಾಜದ ಕಲಾವಿದರ ಕೂಡುವಿಕೆಯಲ್ಲಿ ತಾಮ್ರಧ್ವಜ ಕಾಳಗ -ಚಿತ್ರಾಕ್ಷಿ ಕಲ್ಯಾಣ ಎನ್ನುವ ಯಕ್ಷಗಾನ ಪ್ರದರ್ಶನಗೊಂಡಿತು.ವೀರರಸವೇ ಪ್ರಧಾನವಾಗಿರುವ ತಾಮ್ರಧ್ವಜ ಕಾಳಗ ಪ್ರಸಂಗದಲ್ಲಿ ಪರಂಪರೆಯ ತಾಮ್ರಧ್ವಜನಾಗಿ ದೀರ್ಘ ಮುಂಡಾಸಿಗೆ ಆಳಂಗದ ಗತ್ತು, ಅದಟ್ಟುವಿನ ಮೂಲಕ ಗಮನ ಸೆಳೆದವರು ಗೋಪಾಲ ಗಾಣಿಗ ಆಜ್ರಿ. ಕಲೆಯಲ್ಲಿ ಅವರ ಅನುಭವ, ಸಿದ್ಧಿಯಿಂದ ತಾಮ್ರದ್ವಜ ಕೇವಲ ಪಾತ್ರ ಎಂದೆನಿಸುವುದಿಲ್ಲ. ಮಯೂರಧ್ವಜನಾಗಿ ಶ್ರೀನಿವಾಸ ಗಾಣಿಗರು ಸಂಪ್ರದಾಯದ ಕಿರೀಟ ವೇಷದಲ್ಲಿ ರಾಜ ಗಾಂಭೀರ್ಯ ಮುಖಮುದ್ರೆಯಿಂದ ಭಕ್ತಿ, ಧರ್ಮ, ವಚನಬದ್ಧತೆಯನ್ನು ಪ್ರತಿಬಿಂಬಿಸಿದರು. ಅರ್ಜುನನಾಗಿ ಸರ್ವ ಗಾಣಿಗರು ತನ್ನ ಕುಣಿತ ಮಾತುಗಾರಿಕೆಯಿಂದ ಮನ ಗೆದ್ದರೆ, ಸಾಂಪ್ರಾದಾಯಿಕವಾದ ತಾಮ್ರಧ್ವಜದ ಅರ್ಜುನನನ್ನು ಕಾಣಲು ಸಾಧ್ಯವಾಯಿತು. ಕೃಷ್ಣನಾಗಿ ಕಾಣಿಸಿಕೊಂಡಿದ್ದು, ಸುರೇಂದ್ರ ಗಾಣಿಗರು. ಸುಂದರ ವದನ, ಲಾಲಿತ್ಯಪೂರಿತ ಮಾತುಗಾರಿಕೆ ಮೂಲಕವೇ ಗಮನ ಸೆಳೆದರು.
ಸಕುಲಧ್ವಜನಾಗಿ ನಾಗೇಂದ್ರ ಗಾಣಿಗ, ವೃಷಕೇತುವಾಗಿ ಅಣ್ಣಪ್ಪ ಗಾಣಿಗ, ಅನಿರುದ್ಧನಾಗಿ ಸುಬ್ರಹ್ಮಣ್ಯ ಗಾಣಿಗ, ಕುಮುದಧ್ವಜನಾಗಿ ಕೃಷ್ಣ ಗಾಣಿಗ, ಗುರುವಾಗಿ ಶಂಕರ ಗಾಣಿಗ, ಶಿಷ್ಯನಾಗಿ ಗೋವಿಂದ ಗಾಣಿಗ ಕಲಾ ಪ್ರೌಢಿಮೆ ಮೆರೆದರು. ನಂತರ ನಡೆದ ಚಿತ್ರಾಕ್ಷಿ ಕಲ್ಯಾಣ ನವರಸ ಅಭಿವ್ಯಕ್ತಿಯಿಂದ ರಂಜಿಸಿತು. ರಕ್ತಜಂಘನಾಗಿ ಸಂಜು ಗಾಣಿಗ ಕ್ರೌರ್ಯ, ಶೌರ್ಯ, ಅಬ್ಬರದೊಂದಿಗೆ ರಕ್ಕಸ ಪಾತ್ರದ ಔಚಿತ್ಯವನ್ನು ಬಿಂಬಿಸಿದರು. ಮಾತುಗಾರಿಕೆ ಗಡಸು, ಕುಣಿತದಲ್ಲಿನ ಅಬ್ಬರ, ಅಭಿವ್ಯಕ್ತಿಯಲ್ಲಿ ಅವರು ಅನುಸರಿಸುತ್ತಿರುವ ಬಗೆ ಅನನ್ಯ. ರುದ್ರಕೋಪನಾಗಿ ಪ್ರವೀಣ ಗಾಣಿಗ ಪ್ರಥಮಾರ್ಧದಲ್ಲಿ ಮಿಂಚಿದರೆ ನಂತರ ಪ್ರಶಾಂತ ಗಾಣಿಗ ಅಭಿನಯದಲ್ಲಿ ಭರವಸೆ ಮೂಡಿಸಿದರು. ಚಂದ್ರಸೇನನಾಗಿ ನಾಗೇಂದ್ರ ಗಾಣಿಗ, ನಾರದನಾಗಿ ರಾಜೇಂದ್ರ ಗಾಣಿಗರ ಪಾತ್ರೋಚಿತ ಅಭಿನಯ, ವೇದವ್ಯಾಸನಾಗಿ ಕಾಣಿಸಿಕೊಂಡ ಕೋಡಿ ವಿಶ್ವನಾಥ ಗಾಣಿಗರು ಪಾತ್ರಕ್ಕೊಂದು ಹೊಸ ಆಯಾಮ ಒದಗಿಸಿದರು.
ಸತ್ಯಶೀಲೆಯಾಗಿ ಕೃಷ್ಣ ಗಾಣಿಗ, ಗಂಗೆಯಾಗಿ ಶ್ರೀಧರ ಗಾಣಿಗ, ಚಿತ್ರಾಕ್ಷಿಯಾಗಿ ವಿಜಯ ಗಾಣಿಗ ಸ್ತ್ರೀ ಭೂಮಿಕೆಗಳಿಗೆ ಅರ್ಥಪೂರ್ಣ ನ್ಯಾಯ ನೀಡಿದರು. ರಕ್ತಕೇಷಿಯಾಗಿ ಹೆಣ್ಣು ಬಣ್ಣದ ವೇಷದ ಮೂಲಕ ನಾಗೇಶ ಗಾಣಿಗರು ಮಿಂಚಿದರೆ ಅಜ್ಜಿಯಾಗಿ ಶಂಕರ ಗಾಣಿಗ ನಗೆಯ ಕಚಗುಳಿ ಇಟ್ಟರು.
ಹಿಮ್ಮೇಳದಲ್ಲಿ ಭಾಗವತ ಗೋಪಾಲ ಗಾಣಿಗ ಹೇರಂಜಾಲು ಮತ್ತು ಪಲ್ಲವ ಗಾಣಿಗ ಹೇರಂಜಾಲು ದ್ವಂದ್ವ ಕಂಠಸಿರಿಯಲ್ಲಿ ರಾಗಧಾರೆ ಹರಿಸಿದರು. ಮದ್ದಳೆಯಲ್ಲಿ ಬಾಲಕೃಷ್ಣ ಗಾಣಿಗ, ಚಂಡೆಯಲ್ಲಿ ಸುಬ್ರಹ್ಮಣ್ಯ ಗಾಣಿಗ ಉತ್ತಮ ಸಾಥ್ ನೀಡಿದರು. ಭಾಗವತ ಗಣೇಶ ಅವರು ಸ್ನೇಹ ಪೂರ್ವಕವಾಗಿ ಭಾಗವಹಿಸಿದ್ದು ಒಟ್ಟಂದಕ್ಕೆ ಕಾರಣವಾಯಿತು.
ನಾಗರಾಜ್ ವಂಡ್ಸೆ