ಚಿಂಚೋಳಿ: ಪಟ್ಟಣದ ಚಂದಾಪುರ ಸರ್ಕಾರಿ ಬೀಜೋತ್ಪಾದನಾ ಕೇಂದ್ರಕ್ಕೆ ಒಳಪಟ್ಟಿರುವ ಜಮೀನಿನಲ್ಲಿ ತಾಲೂಕು ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.
ಚಂದಾಪುರ ನಗರದ ಸರಕಾರಿ ಬೀಜೋತ್ಪಾದನಾ ಕೇಂದದ 10 ಎಕರೆ ಜಮೀನಿನಲ್ಲಿ ತಾಲೂಕು ಆಡಳಿತ ಕಟ್ಟಡ ನಿರ್ಮಾಣಕ್ಕಾಗಿ 2017-18ನೇ ಸಾಲಿನ ಕೆಕೆಆರ್ ಡಿಬಿ ವತಿಯಿಂದ 10 ಕೋಟಿ ರೂ. ಮಂಜೂರಿಯನ್ನು ಆಗಿನ ಕಾಂಗ್ರೆಸ್ ಶಾಸಕರಾಗಿದ್ದ ಡಾ| ಉಮೇಶ ಜಾಧವ ಸರ್ಕಾರದಿಂದ ಅನುದಾನ ಮಂಜೂರಿಗೊಳಿಸಿದ್ದರು. ಕಾಮಗಾರಿ ಗುತ್ತಿಗೆ ಪಡೆದಿರುವ ಕರ್ನಾಟಕ ಹೌಸಿಂಗ್ ಮಂಡಳಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದೆ.
ಚಿಂಚೋಳಿ-ತಾಂಡೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆಯುತ್ತಿರುವ ತಾಲೂಕು ಆಡಳಿತ ಕಟ್ಟಡ ಕಚೇರಿ ಇನ್ನು ಮುಂದೆ ಜನರಿಗೆ ಉಪಯೋಗವಾಗಲಿದೆ. ನೆಲಮಹಡಿಯಲ್ಲಿ ಖಜಾನೆ ಕಚೇರಿ, ಉಪ-ನೋಂದಣಿ ಕಚೇರಿ, ನೆಮ್ಮದಿ, ಭೂಮಿ, ಸಕಾಲ, ಗ್ರೇಡ್-2 ತಹಶೀಲ್ದಾರ್ ಕಚೇರಿ, ಶಾಸಕರ ಚೇಂಬರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಮೂಹಿಕ ಶೌಚಾಲಯ ಒಳಗೊಂಡಿದೆ.
ಮೊದಲ ಮಹಡಿಯಲ್ಲಿ ತಹಶೀಲ್ದಾರ್ ಕಚೇರಿ, ಕೋರ್ಟ್ ಹಾಲ್ ಮತ್ತು ಸಭೆಯ ಸಭಾಂಗಣ ಮತ್ತು ತಹಶೀಲ್ದಾರ್ ಸಿಬ್ಬಂದಿಗಳ ಕೋಣೆಗಳು, ತಾಲೂಕು ಭೂಮಾಪಕರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚುನಾವಣೆ ವಿಭಾಗ, ಕಾರ್ಮಿಕ ಇಲಾಖೆ, ಶೌಚಾಲಯ ಕೋಣೆಗಳು ನಿರ್ಮಾಣವಾಗುತ್ತಿವೆ. ಎರಡನೇ ಮಹಡಿಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಾರ್ಪೋರೇಶನ್, ತೋಟಗಾರಿಕೆ ಇಲಾಖೆ, ಉದ್ಯೋಗ ಮತ್ತು ತರಬೇತಿ ಮಿಟಿಂಗ್ ಹಾಲ್, ಶೌಚಾಲಯಗಳ ಕೋಣೆಗಳು ನಿರ್ಮಾಣವಾಗುತ್ತಿವೆ.
ಚಂದಾಪುರ ನಗರದಲ್ಲಿ ತಾಲೂಕ ಕಚೇರಿಗಳಿಗೆ ಬೇರೆ ಬೇರೆ ಕಡೆ ಜನರು ಅಲೆದಾಡುವುದನ್ನು ತೊಂದರೆ ಆಗುತ್ತಿರುವುದರಿಂದ ಸಾರ್ವಜನಿಕರ ಅಲೆದಾಡುವುದನ್ನು ತಪ್ಪಿಸುವುದಕ್ಕಾಗಿ ಮತ್ತು ಜನರಿಗೆ ಸರ್ಕಾರಿ ಕೆಲಸ ಕಾರ್ಯಗಳು ಆಗುವುದಕ್ಕಾಗಿ ಆಗಿನ ಶಾಸಕ ಡಾ| ಉಮೇಶ 10ಕೋಟಿ ರೂ.ಅನುದಾನ ಮಂಜೂರಿಗೊಳಿಸಿ ಸುಸಜ್ಜಿತವಾದ ಕಟ್ಟಡ ಆಗುತ್ತಿದೆ. ಒಂದೇ ಕಟ್ಟಡದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಿರುವುದರಿಂದ ಜನರ ಕೆಲಸ ಕಾರ್ಯಗಳಿಗೆ ಅನುಕೂಲವಾಗಿದೆ. -ಡಾ| ಅವಿನಾಶ ಜಾಧವ, ಶಾಸಕ
ತಾಲೂಕು ಕಟ್ಟಡ ಕಚೇರಿ ನಿರ್ಮಾಣದಿಂದ ಗ್ರಾಮೀಣ ಪ್ರದೇಶ ಜನರಿಗೆ ಮತ್ತು ವೃದ್ಧರಿಗೆ ಮಹಿಳೆಯರಿಗೆ ಅಂಗವಿಕಲರಿಗೆ ಬಹಳಷ್ಟು ಉಪಯೋಗ ಆಗಲಿದೆ. ಕೆಲಸಗಳು ಅತಿವೇಗದಿಂದ ನಡೆಯುತ್ತಿವೆ. ಸಂಸದ ಡಾ| ಉಮೇಶ ಜಾಧವ ಪರಿಶ್ರಮದಿಂದ ಹೊಸ ಕಟ್ಟಡ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಖುಷಿ ತಂದಿದೆ.
-ಕೆ.ಎಂ. ಬಾರಿ, ಪುರಸಭೆ ಮಾಜಿ ಉಪಾಧ್ಯಕ್ಷ
ಚಿಂಚೋಳಿ ಪಟ್ಟಣದ ಚಂದಾಪುರ ನಗರದ ಸರಕಾರಿ ಬೀಜೋತ್ಪಾದನಾ ಕೇಂದ್ರ ಜಮೀನುದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾಲೂಕು ಆಡಳಿತ ಕಟ್ಟಡ ಕಚೇರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅ ಧಿಕಾರದಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ತಾಲೂಕಿನ ಜನರಿಗೆ ಅನುಕೂಲವಾಗಲು ಮಂಜೂರಿಗೊಳಿಸಿದ್ದಾರೆ. ಆ ಕಟ್ಟಡ ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು ಸಂತಸವನ್ನುಂಟು ಮಾಡಿದೆ.
-ದೀಪಕನಾಗ ಪುಣ್ಯಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ
-ಶಾಮರಾವ ಚಿಂಚೋಳಿ