Advertisement

Taluk Office: ವರ್ಷ ಕಳೆದರೂ ಆರಂಭವಾಗದ ತಾಲೂಕು ಕಚೇರಿ

04:54 PM Nov 09, 2023 | Team Udayavani |

ಚೇಳೂರು: ಚೇಳೂರು ನೂತನ ತಾಲೂಕಾಗಿ ಘೋಷಣೆಯಾಗಿ ವರ್ಷ ಕಳೆದರೂ ತಾಲೂಕು ಕೇಂದ್ರದಲ್ಲಿ ಕಚೇರಿಗಳು ಇನ್ನೂ ತೆರೆದಿಲ್ಲ. ವರ್ಷದ ಹಿಂದೆ ಉದ್ಘಾಟನೆಗೊಂಡ ತಾಲೂಕು ಕಚೇರಿ ಕಟ್ಟಡ ಕಾರ್ಯಾರಂಭಗೊಳ್ಳದೆ ಬಿಕೋ ಎನ್ನುತ್ತಿದೆ.

Advertisement

ಚೇಳೂರನ್ನು 2019 ಫೆ.08ರಂದು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗಿದ್ದು, 2022ರಲ್ಲಿ ಸರ್ಕಾರದ ರಾಜ್ಯಪತ್ರದಲ್ಲಿ ತಾಲೂಕು ಕೇಂದ್ರವಾಗಿ ಅಧಿಕೃತ ಆದೇಶವಾಗಿದೆ. 2023ರ ಮಾರ್ಚ್‌ನಲ್ಲಿ ತಾಲೂಕು ಕಚೇರಿ ಏನೋ ಉದ್ಘಾಟನೆಯಾಯಿತು. ಆದರೆ, ಈವರೆಗೂ ತಹಶೀಲ್ದಾರ್‌ ಕಚೇರಿ ಹಾಗೂ ತಾಲೂಕು ಕಚೇರಿಗೆ ಸಂಬಂಧಿಸಿದ ವಿವಿಧ ಅಧಿಕಾರಿಗಳ ಮಟ್ಟದ ಕಚೇರಿಗಳು ಮಾತ್ರ ಆರಂಭಗೊಂಡಿಲ್ಲ.

ಪ್ರತಿ ಕೆಲಸಕ್ಕೂ ಬಾಗೇಪಲ್ಲಿಗೆ ತೆರಳಬೇಕು: ಸರ್ಕಾರದಿಂದ ಆಗಬೇಕಾದ ಪ್ರತಿ ಕೆಲಸ ಕಾರ್ಯಗಳಿಗೂ ಬಾಗೇಪಲ್ಲಿಗೆ ತೆರಳಬೇಕಾದ ದುಸ್ಥಿತಿ ಎದುರಾಗಿದೆ. ಚೇಳೂರು ತಾಲೂಕು ಕೇಂದ್ರವಾದರೂ ಕಡತಗಳು ವಿಲೇವಾರಿಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಭೂತ ಬಂಗಲೆಯಂತಿರುವ ತಾಲೂಕು ಕಚೇರಿ ಕಟ್ಟಡಕ್ಕೆ ಮಾಸಿಕ ಬಾಡಿಗೆ ಕಟ್ಟಲಾಗುತ್ತಿದೆಯೇ ಹೊರತು ಕಚೇರಿಗೆ ಸಿಬ್ಬಂದಿ ನೇಮಕಾತಿ ನಡೆದಿಲ್ಲ. ಮುಖ್ಯವಾಗಿ ರೈತ ವರ್ಗಕ್ಕೆ ಬೇಕಾಗಿರುವ ತಾಪಂ ಕಚೇರಿ, ಕೃಷಿ, ತೋಟಗಾರಿಕೆ, ಉಪನೋಂದಣಾಧಿಕಾರಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಿಡಿಪಿಒ ಕಚೇರಿ, ನ್ಯಾಯಾಲಯ ಮತ್ತಿತರ ಕಚೇರಿ ಪ್ರಾರಂಭಿಸಬೇಕಾಗಿದೆ. ನೂತನ ತಾಲೂಕು ಮಿನಿ ವಿಧಾನಸೌಧ ಸಂಕೀರ್ಣಗಳಿಗೆ ಮಂಜೂರಾತಿ ಮಾಡಬೇಕಾಗಿದೆ.

ರೇಕಾರ್ಡ್‌ಗಳೇ ಬಂದಿಲ್ಲ: ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು, ಏನಿಗದಲೆ, ಬುರುಡಗುಂಟೆ, ಟಿ. ಗೊಲ್ಲಹಲ್ಲಿ ಕಂದಾಯ ವೃತ್ತಗಳು. ಬಾಗೇಪಲ್ಲಿ ತಾಲೂಕಿನ ನಾರೇಮದೇಪಲ್ಲಿ, ಸೋಮನಾಥಪುರ,ಕುರುಬರಹಳ್ಳಿ, ಫೋಲನಾಯಕನಹಳ್ಳಿ ಕಂದಾಯ ವೃತ್ತಗಳ ಹಳೇ ಪಹಣಿ, ಮ್ಯುಟೇಷನ್‌ ರೇಕಾರ್ಡ್‌ ಆಫ್ ರೈಟ್ಸ್‌ ಪುಸ್ತಕಗಳು, ಸರ್ವೆ ಇಲಾಖೆ ಬುಕ್‌ಗಳು ಬರಬೇಕಾಗಿದೆ. ಭೂಮಿ ಸೆಕ್ಷನ್‌ ಪ್ರಾರಂಭ ಮಾಡಬೇಕಾಗಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡಿರುವ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ತಾಲೂಕುಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ಅಗತ್ಯಾನುಸಾರವಾಗಿ ನೀಡಬೇಕು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಹೇಗೆ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡೋಣ.

Advertisement

ಡಿ.15 ರೊಳಗೆ ವರದಿ ಸಲ್ಲಿಸಿ: ಚೇಳೂರು ತಾಲೂಕು ಕೇಂದ್ರದಲ್ಲಿ ಸ್ಥಾಪಿಸಲು ಉದ್ದೇಶಿತ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೆ ಬೇಕಾಗಿರುವ ಜಾಗ ಮತ್ತು ಅನುದಾನಕ್ಕೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿಯನ್ನು ಡಿ.15 ರೊಳಗೆ ನೀಡಲು ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಬಾಗೇಪಲ್ಲಿ ಶಾಸಕ ಎಸ್‌.ಎಸ್‌.ಸುಬ್ಟಾರೆಡ್ಡಿ ಚೇಳೂರು ತಾಲೂಕಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಹೊಸ ತಾಲೂಕಿನ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಅಗತ್ಯ ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಮುಗಿಸಿ, ಸ್ಥಳೀಯವಾಗಿ ಜನರಿಗೆ ಸೇವೆ ಸಿಗುವಂತಹ ವ್ಯವಸ್ಥೆ ಒದಗಿಸಬೇಕು. ಈಗಾಗಲೇ ತಾತ್ಕಾಲಿಕವಾಗಿ ಆರಂಭವಾಗಿರುವ ಸರ್ಕಾರಿ ಕಚೇರಿಗಳು ಸಮರ್ಪಕವಾಗಿ ನಡೆಯಬೇಕು. ಬಾಗೇಪಲ್ಲಿಯಿಂದ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕನಿಷ್ಠ ವಾರಕ್ಕೊಮ್ಮೆ ಚೇಳೂರು ತಾಲೂಕು ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಎಂದು ಸೂಚಿಸಿದರು.

ಡೀಸಿ ಆದೇಶಕ್ಕೆ ಬೆಲೆ ಇಲ್ಲ: ಜಿಲ್ಲಾಧಿಕಾರಿಗಳ ಆದೇಶದಂತೆ ಚೇಳೂರು ತಾಲೂಕು ಕೇಂದ್ರದಲ್ಲಿ ತಹಶೀಲ್ದಾರ್‌ ಕಚೇರಿಯನ್ನು ಪ್ರಾರಂಭಿಸಿ ಕಚೇರಿಗೆ ಅಧಿಕೃತವಾಗಿ ಅಧಿಕಾರಿ ಸಿಬ್ಬಂದಿಯನ್ನು ಹೆಚ್ಚುವರಿ ಪ್ರಭಾರೆಯಲ್ಲಿರಿಸಿ ಮುಂದಿನ ಆದೇಶದವರೆಗೆ ನಿಯೋಜನೆ ಮಾಡಿ ಆದೇಶಿಸಲಾಗಿತ್ತು. ಅದರಂತೆ ಬಾಗೇಪಲ್ಲಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಾಗೇಪಲ್ಲಿ ಮತ್ತು ಚೇಳೂರು ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ವಾರಗಳ ವೇಳಾಪಟ್ಟಿ ಹಾಕಲಾಗಿದೆ. ಆದರೆ, ಕಾಟಾಚಾರಕ್ಕೆ ಒಂದೆರಡು ಸಲ ಬಂದು ಹೋದರೆ ಮತ್ತೆ ಯಾವ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿದೆ.

ಚಿಕ್ಕಬಳ್ಳಾಪುರ ನೂತನ ಚೇಳೂರು ತಾಲೂಕು ಆಡಳಿತ ಕಚೇರಿಯನ್ನು 45 ಎಕರೆ ಜಾಗದಲ್ಲಿ ಹೈಟೆಕ್‌ ಆಗಿ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಕಟ್ಟಡದ ರೂಪು ರೇಷೆಯ ವಿನ್ಯಾಸ ಅಧ್ಯಯನಕ್ಕಾಗಿ ಗುಜರಾತಿನ ಗಾಂಧಿನಗರ, ಛತ್ತಿಸ್‌ಗಡದ ರಾಯಪುರ ಸೇರಿದಂತೆ ವಿವಿಧೆಡೆ ತೆರಳಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಜಿಲ್ಲಾಡಳಿತವು ಚೇಳೂರಿನಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡಂತೆ ಆಡಳಿಸೌದ ನಿರ್ಮಾಣಕ್ಕೆ ಅಗತ್ಯ ಜಮೀನು ಮಂಜೂರು ಮಾಡಲಾಗುತ್ತದೆ. ಡಾ. ಎಂ.ಸಿ.ಸುಧಾಕರ್‌,ಜಿಲ್ಲಾ ಉಸ್ತುವಾರಿ ಸಚಿವ

ಜನರಿಗೆ ಯಾವುದೇ ರೀತಿಯಾದ ತೊಂದರೆಯಾಗದಂತೆ ನೋಡುಕೊಳ್ಳುತ್ತಿ ದ್ದೇವೆ, ಸಮಯಕ್ಕೆ ತಕ್ಕಂತೆ ಜನರಿಗೆ ಕೆಲಸ ಮಾಡಿಕೊಡುತ್ತಿದ್ದೇವೆ. ಚೇಳೂರು ಅಭಿವೃದ್ಧಿ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಈಶ್ವರಪ್ಪ ,ಪ್ರಭಾರಿ ತಹಶೀಲ್ದಾರ್‌,ಚೇಳೂರು

ಡಿಸೆಂಬರ್‌ ಅಂತ್ಯದೊಳಗಾಗಿ ಚೇಳೂರು ನೂತನ ತಾಲೂಕಿನಲ್ಲಿ ತಹಶೀಲ್ದಾರ್‌, ಉಪತಹಶೀಲ್ದಾರ್‌, ಇಬ್ಬರು ರಾಜಸ್ವ ನಿರೀಕ್ಷಕರು, 8 ಮಂದಿ ಗ್ರಾಮ ಲೆಕ್ಕಾಧಿಕಾರಿ ಗಳು, ಇತರ ಸಿಬ್ಬಂದಿಯೊಂದಿಗೆ ಎಲ್ಲ ದಾಖಲೆಗಳ ಸಹಿತ ರೈತರ,ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಚೇಳೂರು ತಾಲೂಕಿನಲ್ಲೇ ನಿರ್ವಹಿಸಲಾಗುವುದು.ಪ್ರಶಾಂತ್‌.ಕೆ.ಪಾಟೀಲ್‌ ತಹಶೀಲ್ದಾರ್‌, ಬಾಗೇಪಲ್ಲಿ ತಾಲೂಕು.

ತಾಲೂಕು ಕೇಂದ್ರವೆಂದು ಘೋಷಣೆಯಾಗಿ 4 ವರ್ಷ ಕಳೆದರೂ ಸಹ ಯಾವೊಬ್ಬ ಅಧಿಕಾರಿಯನ್ನು ಇಲ್ಲಿ ನೇಮಕ ಮಾಡಿಲ್ಲ. ರೈತರು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ನಿತ್ಯ ಬಾಗೇಪಲ್ಲಿಗೆ ಅಳವಾಡಬೇಕಾಗಿದೆ. ನೂತನ ಚೇಳೂರು ತಾಲೂಕು ಅಭಿವೃದ್ಧಿಯ ಬಗ್ಗೆ ಯಾವೊಬ್ಬಜನಪ್ರತಿನಿಧಿ, ಅಧಿಕಾರಿಗಳೂ ಸಹ ಗಮನಹರಿಸುತ್ತಿಲ್ಲ. ಜೆ.ವಿ.ಚಲಪ, ಕೆ.ವಿ.ಶ್ರೀನಿವಾಸ ರೆಡ್ಡಿ ಚೇಳೂರು ತಾಲೂಕು ಹೋರಾಟಗಾರರು. 

-ಲೋಕೇಶ್‌.ಪಿ.ವಿ

Advertisement

Udayavani is now on Telegram. Click here to join our channel and stay updated with the latest news.

Next