Advertisement
ಕಂದಾಯ ಇಲಾಖೆಯ ಬಹುತೇಕ ಕೆಲಸಗಳ ಕಡಬದಲ್ಲಿಯೇ ಆಗುತ್ತಿ ದ್ದರೂ ಉಪ ನೋಂದಣಿ ಕಚೇರಿ, ಪತ್ರಾಂಕಿತ ಉಪ ಖಜಾನೆ (ಟ್ರೆಜರಿ), ಆಹಾರ ಇಲಾಖೆ ಮುಂತಾದ ಕಂದಾಯ ಇಲಾಖೆಗೆ ಸಂಬಂಧಿಸಿದ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗದಿರುವು ದರಿಂದಾಗಿ ಜನರು ತಮ್ಮ ಅಗತ್ಯಗಳಿಗೆ ಈ ಹಿಂದಿನಂತೆಯೇ ಪುತ್ತೂರಿಗೆ ಹೋಗ ಬೇಕಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿಗೆ ಅಲೆಯುವುದು ತಪ್ಪಿಲ್ಲ. ಕೆಲ ಸಂದರ್ಭಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಕಡಬ ತಾಲೂಕಿನ ವ್ಯಾಪ್ತಿಯ ಶಾಲೆಗಳ ದಾಖಲೆ ಪತ್ರಗಳಿಗೆ ಕಡಬ ತಾಲೂಕಿನ ಬದಲು ಪುತ್ತೂರು ತಾಲೂಕು ಎಂದು ಹಳೆಯ ಮೊಹರು (ಸೀಲ್) ಹಾಕಿಸಿಕೊಂಡು ಬನ್ನಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದ ಘಟನೆಗಳೂ ನಡೆದಿವೆ.
ತಾಲೂಕು ಉದ್ಘಾಟನೆಗೆ ಮೊದಲೇ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಸಿದ್ಧತೆ ನಡೆಸಬೇಕು ಎಂದು ಕಳೆದ ವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರಗಿದ್ದ ತಾಲೂಕು ಉದ್ಘಾಟನೆಯ ಸಮಾಲೋಚನ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ತಾಲೂಕು ಉದ್ಘಾಟನೆಯ ಸಂದರ್ಭದ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಆರಂಭಗೊಳ್ಳಬೇಕು ಎಂದು ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಸರಕಾರಿ ಕಟ್ಟಡಗಳು ಲಭ್ಯವಿಲ್ಲದೇ ಹೋದರೆ ತಾತ್ಕಾಲಿಕ ನೆಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಸ್ಥಾಪಿಸಿ ಮುಂದಿನ ದಿನಗಳಲ್ಲಿ ಕಚೇರಿ ಕಟ್ಟಡ ನಿರ್ಮಿಸಲು ಸೂಕ್ತ ಭೂಮಿ ಗುರುತಿಸಬೇಕು. ಆಯಾ ಕಚೇರಿಗೆ ಅಧಿಕಾರಿ ಮತ್ತು ಸಿಬಂದಿಗಳನ್ನು ನಿಯೋಜಿಸಬೇಕು. ಪೂರ್ಣಪ್ರಮಾಣದ ಅಧಿಕಾರಿ ಇಲ್ಲದಿದ್ದರೆ ಪ್ರಭಾರ ವ್ಯವಸ್ಥೆ ಮಾಡಬೇಕು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು. ಆದರೆ ಕಂದಾಯ ಇಲಾಖೆಯನ್ನು ಹೊರತುಪಡಿಸಿದರೆ ಉಳಿದ ಯಾವುದೇ ಕಚೇರಿಗಳ ತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ. ಒತ್ತಡ ಹೇರಬೇಕಾದ ಜನಪ್ರತಿನಿಧಿಗಳು ಕೂಡ ತೆಪ್ಪಗೆ ಕುಳಿತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.
Related Articles
ಆಹಾರ ಇಲಾಖೆ, ಉಪ ನೋಂದಣಿ ಕಚೇರಿ, ಪತ್ರಾಂಕಿತ ಉಪ ಖಜಾನೆ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ತಾಲೂಕು ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕ ಇಲಾಖೆ, ಪಶು ಸಂಗೋಪನ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ, ಅಬಕಾರಿ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಗ್ರಂಥಾಲಯ ಹಾಗೂ ಅಗ್ನಿಶಾಮಕ ದಳ ತಾಲೂಕು ಮಟ್ಟದ ಕಚೇರಿಗಳು ಕಡಬದಲ್ಲಿ ತೆರೆಯಬೇಕಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಉನ್ನತಾಧಿಕಾರಿಗಳು ಈ ಕುರಿತು ಗಮನಹರಿಸುವ ಅಗತ್ಯವಿದೆ.
ಸರಕಾರ ಆದೇಶ ನೀಡಿದೆ
ನೂತನ ಕಡಬ ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಳು ಕಡಬದಲ್ಲಿಯೇ ಆಗುತ್ತಿದೆ. ಉಪ ನೋಂದಣಿ ಕಚೇರಿ, ಪತ್ರಾಂಕಿತ ಉಪ ಖಜಾನೆ ಇತ್ಯಾದಿ ತೆರೆಯಲು ಸ್ವಲ್ಪ ಕಾಲಾವಕಾಶದ ಅಗತ್ಯವಿದೆ. ಇತರ ಸರಕಾರಿ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಸರಕಾರದ ಆದೇಶವಿದೆ. ತಾಲೂಕು ಮಟ್ಟದ ಕಚೇರಿ ತೆರೆಯದ ಇಲಾಖೆಗಳಿಗೆ ಜ್ಞಾಪನ ಪತ್ರ ಕಳುಹಿಸಲಾಗುವುದು.
– ಕೃಷ್ಣಮೂರ್ತಿ ಎಚ್.ಕೆ. ಸಹಾಯಕ ಆಯುಕ್ತರು, ಪುತ್ತೂರು
Advertisement
•ನಾಗರಾಜ್ ಎನ್.ಕೆ.