Advertisement

ಪ್ರತಿಭಾವಂತ ನಿರುದ್ಯೋಗಿ ಕಥೆ-ವ್ಯಥೆ

10:15 AM Jan 06, 2018 | Team Udayavani |

ಮೂರು ವರ್ಷ ಚಿಕ್ಕವನಾದ ತಮ್ಮ ತಿಂಗಳಿಗೆ ಲಕ್ಷ ದುಡಿಯುತ್ತಾನೆ. ಅಪ್ಪನೂ ಕೆಲಸಕ್ಕೆ ಹೋಗುತ್ತಾರೆ. ಅಮ್ಮ ಮನೆ ನೋಡಿಕೊಳ್ಳುತ್ತಾರೆ. ಎಲ್ಲರೂ ತನ್ನನ್ನು ದಂಡಪಿಂಡ ಎಂದು ನಿಂದಿಸುತ್ತಾರೆಂಬ ಬೇಸರ ಆತನನ್ನು ಬಲವಾಗಿ ಕಾಡುತ್ತದೆ. ಆತ ಓದಿದ್ದು ಇಂಜಿನಿಯರಿಂಗ್‌. ಪ್ರತಿಭಾವಂತ ಕೂಡಾ. ಒಂದೇ ಮಾತಲ್ಲಿ ಹೇಳಬೇಕಾದರೆ “ಪ್ರತಿಭಾವಂತ ನಿರುದ್ಯೋಗಿ’. ಆತನಿಗೆ ತಿಂಗಳಿಗೆ ಐವತ್ತು ಸಾವಿರ ಸಂಬಳ ಬರೋ ಕೆಲಸವೇನೋ ಸಿಗುತ್ತೆ.

Advertisement

ಆದರೆ, ಆತ ಹೋಗಲ್ಲ. ಆತನಿಗೆ ತನ್ನ ಇಷ್ಟದ ಕನ್‌ಸ್ಟ್ರಕ್ಷನ್‌ ಫೀಲ್ಡ್‌ನಲ್ಲೇ ಕೆಲಸ ಬೇಕು. ಈ ಮೂಲಕ ಕನಸು ಈಡೇರಿಸಿಕೊಳ್ಳಬೇಕೆಂಬ ಆಸೆ. ಈ ಆಸೆ ಹೊತ್ತುಕೊಂಡು ತಿರುಗುವ ಆತ ತನ್ನ ಆಸೆ, ಕನಸು ಈಡೇರಿಸಿಕೊಳ್ಳುತ್ತಾನಾ ಎಂಬ ಕುತೂಹಲವಿದ್ದರೆ ನೀವು “ಬೃಹಸ್ಪತಿ’ ಸಿನಿಮಾ ನೋಡಬಹುದು. “ಬೃಹಸ್ಪತಿ’ ಒಂದು ಪಕ್ಕಾ ಕ್ಲಾಸ್‌ ಅಂಡ್‌ ಮಾಸ್‌ ಸಿನಿಮಾ. ಚಿಕ್ಕ ಕುಟುಂಬವೊಂದರಿಂದ ಆರಂಭವಾಗುವ ಸಿನಿಮಾ ದೊಡ್ಡ ಕನಸಿನೊಂದಿಗೆ ಸಾಗುತ್ತದೆ.

ಇದು ತಮಿಳಿನ “ವಿಐಪಿ’ ಚಿತ್ರದ ರೀಮೇಕ್‌. ಅಲ್ಲಿ ಧನುಶ್‌ ಮಾಡಿದ ಪಾತ್ರವನ್ನು ಇಲ್ಲಿ ಮನೋರಂಜನ್‌ ಮಾಡಿದ್ದಾರೆ. ಹಾಗಾಗಿ, ಪರಿಸರ ಬದಲಾಗಿದೆಯೇ ಹೊರತು ಕಥೆಯ ವಿಷಯದಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಆ ಮಟ್ಟಿಗೆ ನಿರ್ದೇಶಕ ನಂದಕಿಶೋರ್‌ ಮೂಲ ಕಥೆಗೆ “ನ್ಯಾಯ’ ಒದಗಿಸಿದ್ದಾರೆ. ಹಾಗೆ ನೋಡಿದರೆ ಕಥೆ ತೀರಾ ಅದ್ಭುತವಾದುದು ಅಥವಾ ಈ ಹಿಂದೆ ಬಾರದೇ ಇರುವಂಥದ್ದೇನೂ ಅಲ್ಲ.

ಒಬ್ಬ ಮಧ್ಯಮ ವರ್ಗದ ಹುಡುಗನ ಕನಸು ಹಾಗೂ ಮುಂದೆ ಅದು ಈಡೇರುವ ವೇಳೆ ಎದುರಾಗುವ ತೊಂದರೆ, ತೊಡಕುಗಳನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಇದು ಕೂಡಾ ಅದೇ ಕೆಟಗರಿಗೆ ಸೇರುವ ಸಿನಿಮಾ. ಆದರೆ, ಕಥೆಯ ವಿಚಾರದಲ್ಲಿ ಭಿನ್ನವಾಗಿದೆಯಷ್ಟೇ. ಮೊದಲೇ ಹೇಳಿದಂತೆ “ಪ್ರತಿಭಾವಂತ ನಿರುದ್ಯೋಗಿ’ಯ ಕಥೆಯನ್ನು ಮಜಾವಾಗಿ ಹಾಗೂ ಸುತ್ತಿ ಬಳಸದೇ ನೇರವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಹಾಗೆ ನೋಡಿದರೆ “ಬೃಹಸ್ಪತಿ’ ಮಾಸ್‌ಗಿಂತ ಹೆಚ್ಚಾಗಿ ಕ್ಲಾಸ್‌ ಸಿನಿಮಾ. ಫ್ಯಾಮಿಲಿ ಡ್ರಾಮಾ ಎಂದರೂ ತಪ್ಪಲ್ಲ. ಆ ಮಟ್ಟಿಗೆ ಸಿನಿಮಾದಲ್ಲಿ ಸೆಂಟಿಮೆಂಟ್‌ ಇದೆ. ತಾಯಿ-ಮಗನ ಬಾಂಧವ್ಯ, ತಂದೆಯ ಸಾತ್ವಿಕ ಸಿಟ್ಟು, ತಮ್ಮನ ಮುಗ್ಧತೆ … ಚಿತ್ರದ ಆರಂಭದಲ್ಲಿ ಬಹುತೇಕ ಈ ಅಂಶಗಳೇ ತುಂಬಿಕೊಂಡಿವೆ. ಹಾಗಾಗಿ, ಇಲ್ಲಿ ನೀವು ಹೆಚ್ಚಿನದ್ದೇನೂ ನಿರೀಕ್ಷಿಸುವಂತಿಲ್ಲ. ಸಿನಿಮಾದ ಕಥೆ, ನಾಯಕನ ಸವಾಲು ಆರಂಭವಾಗೋದೇ ದ್ವಿತೀಯಾರ್ಧದಲ್ಲಿ.

Advertisement

ಮೊದಲರ್ಧ ಕ್ಲಾಸ್‌ ಆದರೆ, ದ್ವಿತೀಯಾರ್ಧ ಮಾಸ್‌ ಎನ್ನಬಹುದು. ಇನ್ನು, ಚಿತ್ರ ನೋಡಿದಾಗ ನಿಮಗೆ ನಿರೂಪಣೆ ಇನ್ನೊಂದಿಷ್ಟು ವೇಗವಾಗಿರಬೇಕಿತ್ತು ಎನಿಸದೇ ಇರದು. ಅದು ಬಿಟ್ಟರೆ ಹೆಚ್ಚು ಏರಿಳಿತಗಳಿಲ್ಲದೇ ತುಂಬಾ ಕೂಲ್‌ ಆಗಿ ಸಾಗುವ ಸಿನಿಮಾ “ಬೃಹಸ್ಪತಿ’. ಸಾಧುಕೋಕಿಲ ಅವರ ಕಾಮಿಡಿ ಇಲ್ಲಿ ವಕೌìಟ್‌ ಆಗಿದೆ. ನಾಯಕ ಮನೋರಂಜನ್‌ ಅವರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.

ಮಧ್ಯಮ ವರ್ಗದ ಹುಡುಗನ ಆಸೆ, ಪೋಲಿತನ, ತಾಯಿ ಸೆಂಟಿಮೆಂಟ್‌, ಕಮಿಟ್‌ಮೆಂಟ್‌ ಹಾಗೂ ಗ್ಯಾಪಲ್ಲೊಂದ್‌ ಲವ್‌ … ಹೀಗೆ ಹಲವು ಶೇಡ್‌ನ‌ ಪಾತ್ರಗಳಲ್ಲಿ ಮನೋರಂಜನ್‌ ಚೆನ್ನಾಗಿ ನಟಿಸಿದ್ದಾರೆ. ಮುಖ್ಯವಾಗಿ ಅವರಿಲ್ಲಿ ಗಮನ ಸೆಳೆಯೋದು ಡ್ಯಾನ್ಸ್‌ ಹಾಗೂ ಫೈಟ್‌ನಲ್ಲಿ. ಸೆಂಟಿಮೆಂಟ್‌ ದೃಶ್ಯಗಳಲ್ಲಿ ಹಾಗೂ ಡೈಲಾಗ್‌ ಡೆಲಿವರಿಯಲ್ಲಿ ಪಳಗಬೇಕು. ನಾಯಕಿ ಮಿಶಿ ಚಕ್ರವರ್ತಿಗೆ ಇಲ್ಲಿ ಹೆಚ್ಚೇನು ಕೆಲಸವಿಲ್ಲ.

ಆಗಾಗ ಮುಖದರ್ಶನ ನೀಡಿದ್ದಾರಷ್ಟೇ. ಉಳಿದಂತೆ ಚಿತ್ರದಲ್ಲಿ ಸಿತಾರಾ, ಸಾಯಿಕುಮಾರ್‌, ಅವಿನಾಶ್‌, ಕುರಿ ಪ್ರತಾಪ್‌, ಪ್ರಕಾಶ್‌ ಬೆಳವಾಡಿ, ಸಾಧು ಕೋಕಿಲ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಯೋಗಾನಂದ ಮುದ್ದಾನ್‌ ಅವರ ಸಂಭಾಷಣೆ ಚುರುಕಾಗಿದೆ. ಹರಿಕೃಷ್ಣ ಸಂಗೀತದ ಹಾಡುಗಳು ಹೆಚ್ಚೇನು ಮೋಡಿ ಮಾಡುವುದಿಲ್ಲ. 

ಚಿತ್ರ: ಬೃಹಸ್ಪತಿ
ನಿರ್ಮಾಣ: ರಾಕ್‌ಲೈನ್‌ ವೆಂಕಟೇಶ್‌
ನಿರ್ದೇಶನ: ನಂದ ಕಿಶೋರ್‌
ತಾರಾಗಣ: ಮನೋರಂಜನ್‌, ಮಿಶಿ ಚಕ್ರವರ್ತಿ, ಸಿತಾರಾ, ಸಾಯಿಕುಮಾರ್‌, ಅವಿನಾಶ್‌, ಕುರಿ ಪ್ರತಾಪ್‌, ಪ್ರಕಾಶ್‌ ಬೆಳವಾಡಿ, ಸಾಧುಕೋಕಿಲ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next