ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ವಿಪರೀತವಾಗಿದ್ದರೂ, ಭಾರತ-ಬಾಂಗ್ಲಾದೇಶ ನಡುವಿನ ನ. 3ರ ಮೊದಲ ಟಿ20 ಪಂದ್ಯ ಇಲ್ಲಿ ನಡೆಯುವುದು ಖಚಿತ ಎಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಈ ಪಂದ್ಯವನ್ನು ರದ್ದುಪಡಿಸಿ ಎಂದು ಈಗಾಗಲೇ ಹಲವರು ಮನವಿ ಮಾಡಿದ್ದಾರೆ.
3 ಗಂಟೆಗಳ ಕಾಲ ನಡೆಯುವ ಪಂದ್ಯದ ವೇಳೆ ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಬಹಳ ತೊಂದರೆಯಾಗುತ್ತದೆ. ಹೀಗಾಗಿ ಪಂದ್ಯ ನಡೆಸಬೇಡಿ ಎಂದು ಕೆಲವು ಪರಿಸರತಜ್ಞರು ಆಗ್ರಹಿಸಿದ್ದಾರೆ. ಆದರೆ ನ. ಮೂರರ ವೇಳೆ ವಾತಾವರಣ ತಿಳಿಯಾಗಿರುತ್ತದೆ ಎಂಬ ಭರವಸೆಯಿದೆ ಎಂದು ಬಿಸಿಸಿಐ ಹೇಳಿದೆ.
ಪಂದ್ಯ ಬೇಡ ಎಂಬ ಸಲಹೆಗೆ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕ್ರಿಕೆಟ್ ಪಂದ್ಯವೊಂದು ಬಹಳ ಸಣ್ಣ ವಿಷಯ. ವಾಯುಮಾಲಿನ್ಯ ದೊಡ್ಡ ವಿಚಾರ. ದಿಲ್ಲಿ ಜನ ಪಂದ್ಯ ನಡೆಯಬೇಕೋ, ಬೇಡವೋ ಎಂದು ವಾದಿಸುವ ಬದಲು ಸಮಸ್ಯೆ ಬಗೆಹರಿಸಿಕೊಳ್ಳಲು ಯೋಚಿಸಬೇಕು’ ಎಂಬ ರಚನಾತ್ಮಕ ಸಲಹೆ ನೀಡಿದ್ದಾರೆ.
ಬದಲಾವಣೆ ಈಗ ಅಸಾಧ್ಯ
ಟಿ20 ಪಂದ್ಯದ ದಿನಾಂಕ ನಿಗದಿಯಾಗಿ ಬಹಳ ದಿನವಾಗಿದೆ. ಆದ್ದರಿಂದ ಸದ್ಯ ಇಲ್ಲಿ ಯಾವುದೇ ಬದಲಾವಣೆ ಮಾಡುವ ಸ್ಥಿತಿಯಲ್ಲಿ ಬಿಸಿಸಿಐ ಇಲ್ಲ. ಪಂದ್ಯ ರದ್ದು ಮಾಡಿದರೆ ದಿಲ್ಲಿ ಕ್ರಿಕೆಟ್ ಸಂಸ್ಥೆಗೆ ಭಾರೀ ನಷ್ಟವಾಗಲಿದೆ. ಆದರೆ ಚೆಂಡು ಕಾಣಿಸದೇ ಇರುವ ಸ್ಥಿತಿ ಎದುರಾದರೆ ಮಾತ್ರ ಪಂದ್ಯ ರದ್ದಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.