Advertisement
ಅನುಭವ ನೀಡದ ಕಲಿಕೆ ಕಲಿಕೆಯಾಗದು. ಅದೇ ರೀತಿಯಲ್ಲಿ ಮಗುವಿಗೆ ಕಲಿಕೆ ಅನುಭವವೂ ಆಗಬೇಕು. ಈ ರೀತಿಯಲ್ಲಿ ಯೋಚಿಸಿದರೆ ಕೊರೊನಾ ಕಲಿಸಿದ ಪಾಠ ಬಹಳ ದೊಡ್ಡದಿದೆ. ಕೊರೊನಾದಿಂದ ಹಾಳಾಯಿತು, ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬಿತ್ತು ಎಂದೆಲ್ಲ ಯೋಚಿಸುವುದಕ್ಕಿಂತಲೂ ಇದು ನಮ್ಮನ್ನು ಬದುಕಲು ಕಲಿಸಿದೆ. ಮಾತ್ರವಲ್ಲ ಒಟ್ಟು ವ್ಯವಸ್ಥೆಯನ್ನು ಅವಲೋಕಿಸುವಂತೆ ಮಾಡಿದೆ ಎಂದು ಸ್ವೀಕರಿಸೋಣ.
Related Articles
Advertisement
ಇಲ್ಲಿ ಬದಲಾಗಬೇಕಾದ ಪಾತ್ರಧಾರಿಗಳಾಗಿರುವ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪಾತ್ರ ಶಿಕ್ಷಣ ಇಲಾಖೆ ಮತ್ತು ಸರಕಾರದ್ದೂ ಇದೆ. ಜತೆಗೆ ಹೆತ್ತವರೂ ಇರುತ್ತಾರೆ. ಈವರೆಗೆ ಶಿಕ್ಷಣ ವ್ಯವಸ್ಥೆಯನ್ನು ಅರ್ಥ ಸಂಬಂಧಿಯಾಗಿ, ಮಾರುಕಟ್ಟೆ ನೀತಿಗನುಗುಣವಾಗಿ ಬದಲಾಯಿಸಿಕೊಂಡಿದ್ದೇವೆ. ಶಿಕ್ಷಣದಿಂದ ಬದಲಾಗಬೇಕಾಗಿದ್ದ ವ್ಯವಸ್ಥೆ ತಿರುಗ ಮುರುಗ ಆಗಿದ್ದೇ ನಮ್ಮ ದೌರ್ಬಲ್ಯಕ್ಕೆ ಕಾರಣವಾಗಿದೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಣ ಏನು, ಹೇಗೆ ಎಂಬ ಬಗ್ಗೆ ಕೆಲವು ಅಭಿಪ್ರಾಯಗಳು:
01. ಮಕ್ಕಳಿಗೆ ಶಾಲೆ ಅರ್ಧ ದಿನಕ್ಕೇ ಸೀಮಿತವಾಗಿರಬೇಕು.02. ಮಕ್ಕಳ ಚಟುವಟಿಕೆಗಳಿಗೆ ಉಳಿದ ಅರ್ಧ ದಿನಕ್ಕೆ ಹೆತ್ತವರು ತಯಾರಾಗಬೇಕು.
03. ಕನಿಷ್ಠ ಕಲಿಕಾ ಮಟ್ಟವನ್ನು ತಲುಪುವುದಕ್ಕೆ ಬೋಧನ ಚಟುವಟಿಕೆಗಳು ಆದ್ಯತೆ ಪಡೆಯಬೇಕು.
04. ಪಠ್ಯ ವಿಷಯಗಳ ಭಾರ ಎಲ್ಲ ತರಗತಿಗಳಲ್ಲೂ ಇದೆ. ಹಾಗಾಗಿ ಪಾಠ ಮುಗಿಸುವುದು, ಪರೀಕ್ಷೆಗೆ ತಯಾರಾಗುವುದು, ಪಾಸು ಮಾಡುವುದು, ಹೆಚ್ಚು ಅಂಕ ಪಡೆಯುವುದೇ ಮೊದಲಾದ ಅಂತಿಮ ಉತ್ಪನ್ನ (product)ಕೇಂದ್ರಿತ ಶೈಕ್ಷಣಿಕ ವಾತಾವರಣ ಬದಲಾಗಬೇಕು. ಉತ್ತೀರ್ಣ-ಅನುತ್ತೀರ್ಣ ಎಂಬುದೇ ಇರಬಾರದು (ಗ್ರೇಡ್ ಆಧಾರಿತ).
05. ಇವತ್ತು ಶಾಲೆಗೆ ಬಂದ ವಿದ್ಯಾರ್ಥಿ “ನಾಳೆಯೂ ಶಾಲೆಗೆ ಹೋಗುವ’ ಎನ್ನುವ ಹಾಗಿನ ಒತ್ತಡ ರಹಿತ, ಸ್ವ-ಪ್ರೇರಣ ಕಲಿಕಾ ವಾತಾವರಣ ಶಾಲೆಯಲ್ಲಿ ಇರಬೇಕು.
06. ಮನೆ ಕೆಲಸ ಎಂಬ ಹೆಸರಿನಲ್ಲಿ, ಕ್ಲೀಷೆ ಎನ್ನಬಹುದಾದ ಪಾಠ ಕೇಂದ್ರಿತ ಬರವಣಿಗೆ ಮತ್ತು ಓದಿನ ಹೊರೆ ಇರಬಾರದು.
07. ಪ್ರಾಜೆಕ್ಟ್ ತಯಾರಿ ಮತ್ತು ಚಟುವಟಿಕೆಗಳು ಎಂಬ ಹೆಸರಿನ “ತುಂಡು ಜೋಡಣ’ ಕಾರ್ಯ(cut and paste) ಕಡಿಮೆಯಾಗಬೇಕು.
08. ಸ್ವತಂತ್ರ ಬರವಣಿಗೆ ಮತ್ತು ಓದಿಗೆ (ಪಾಠಕ್ಕೆ ಪೂರಕ ಮತ್ತು ಹೊರಗಿನ) ಸಂಬಂಧಿಸಿದಂತೆ ಚಟುವಟಿಕೆಗಳು ಬೇಕು.
09. ವೀಕ್ಷಣೆ, ಭೇಟಿ, ಸಂದರ್ಶನ, ಮಾತುಕತೆ ಮುಂತಾದ ಚಟುವಟಿಕೆಗಳನ್ನು ಪಾಠದ ಚಟುವಟಿಕೆ ಯಾಗಿ ಜೋಡಿಸಿಕೊಳ್ಳಬೇಕು.
10. ಮನೆ ಕೆಲಸ, ಹೆತ್ತವರಿಗೆ ಸಹಕರಿಸುವ ಕೆಲಸ, ಮನೆಗೆ ಸಂಬಂ ಧಿಸಿದ ದುಡಿಮೆ, ಸಾರ್ವ ಜನಿಕ ಸೊತ್ತು, ಸ್ಥಳಗಳ ಮತ್ತು ವ್ಯವಸ್ಥೆಗಳ ಪರಿಚಯ ಮಾಡಿಕೊಳ್ಳುವಂಥ ಚಟುವಟಿಕೆಗಳು (Involvement activities) ಕಲಿಕೆಯ ಭಾಗವಾಗಿರಬೇಕು.
11. ಮನೆಯಲ್ಲಿ ಮತ್ತು ಸುತ್ತಮುತ್ತ ದೊರೆಯುವ ವಸ್ತು, ಪರಿಕರಗಳನ್ನು ಬಳಸಿ ತಯಾರಿಸಬಹುದಾದ ಕ್ರಿಯಾತ್ಮಕ ರಚನ ಕಾರ್ಯಗಳನ್ನು ಮಕ್ಕಳಿಂದ ಮಾಡಿಸಬೇಕು.
12. ಯೋಚನೆಗೆ, ವಿಮರ್ಶೆಗೆ, ಪ್ರಶ್ನೆ ಮಾಡು ವಿಕೆಗೆ, ಹುಡುಕುವುದಕ್ಕೆ, ಗುರುತಿಸುವಿಕೆಗೆ, ಗಮನಿಸುವಿಕೆಗೆ… ಮುಂತಾದ ಬೌದ್ಧಿಕ ಮತ್ತು ರಂಜನೀಯ ಚಟುವಟಿಕೆಗಳನ್ನು ಮಕ್ಕಳಿಗೆ ನೀಡು ವಂತೆ ಬೋಧನ ಪ್ರಕ್ರಿಯೆಯನ್ನು ಬದಲಾಯಿಸಿಕೊಳ್ಳಬೇಕು.
ಅನುಭವ ನೀಡದ ಕಲಿಕೆ ಕಲಿಕೆಯಾಗದು. ಅದೇ ರೀತಿಯಲ್ಲಿ ಮಗುವಿಗೆ ಕಲಿಕೆ ಅನುಭವವೂ ಆಗಬೇಕು. ಈ ರೀತಿಯಲ್ಲಿ ಯೋಚಿಸಿದರೆ ಕೊರೊನಾ ಕಲಿಸಿದ ಪಾಠ ಬಹಳ ದೊಡ್ಡದಿದೆ. ಕೊರೊನಾದಿಂದ ಹಾಳಾಯಿತು, ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬಿತ್ತು ಎಂದೆಲ್ಲ ಯೋಚಿಸುವುದಕ್ಕಿಂತಲೂ ಇದು ನಮ್ಮನ್ನು ಬದುಕಲು ಕಲಿಸಿದೆ. ಮಾತ್ರವಲ್ಲ ಒಟ್ಟು ವ್ಯವಸ್ಥೆಯನ್ನು ಅವಲೋಕಿಸುವಂತೆ
ಮಾಡಿದೆ ಎಂದು ಸ್ವೀಕರಿಸೋಣ. ಇಲ್ಲಿ ಆನ್‌ಲೈನ್ ಕಲಿಕೆ, ಬಹುಮಾಧ್ಯಮದ ಮೂಲಕ ಕಲಿಕೆ ಎಂಬುದು ನೇರ ತರಗತಿಗೆ ಪರ್ಯಾಯವಲ್ಲ. ಹಾಗಾಗಿ ಆ ಬಗ್ಗೆ ಪ್ರಸ್ತಾವಿಸುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಪೇಟೆ ಮಕ್ಕಳು, ಹಳ್ಳಿ ಮಕ್ಕಳು, ಸರಕಾರಿ-ಆಂಗ್ಲ ಮಾಧ್ಯಮ-ಖಾಸಗಿ ಅನುದಾನಿತವೆಂಬ ವರ್ಗೀಕರಣ ಇಲ್ಲದೆ, ರಾಜ್ಯಕ್ಕೊಂದು ಏಕ ರೂಪದ ಶೈಕ್ಷಣಿಕ ವೇಳಾಪಟ್ಟಿ ತಯಾರಾಗಬೇಕು. -ರಾಮಕೃಷ್ಣ ಭಟ್ ಚೊಕ್ಕಾಡಿ
ಮುಖ್ಯ ಶಿಕ್ಷಕರು, ಎಸ್.ಡಿ.ಎಂ. ಪ್ರೌಢಶಾಲೆ ಬೆಳಾಲು, ಬೆಳ್ತಂಗಡಿ