ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್ ಬರುವುದು ವಾಡಿಕೆ. ಹೇ ಕಾಂಗ್ರೆಸಿಗರೇ, ಯುಪಿ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಅಸ್ಸಾಂಗೆ ಹೋಗಿ ನೋಡಿ, ಪದ್ಧತಿ ಬದಲಾಗಿದೆ. ಈಗ ಒಮ್ಮೆ ಬಿಜೆಪಿ ಬಂದರೆ ಮತ್ತೆ ಮತ್ತೆ ಬಿಜೆಪಿ ಬರುತ್ತದೆ, ಕಾಂಗ್ರೆಸ್‌ಗೆ ಅದೇ ಸಮಸ್ಯೆ, ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ರಾಹುಲ್ ಬಾಬಾ, ನೀವು ನಾಲ್ಕು ತಲೆಮಾರು ಆಳಿದರೂ ಮಹಿಳೆಯರಿಗೆ ಶೌಚಾಲಯ ಕಲ್ಪಿಸಲು ಸಾಧ್ಯವಾಗಿಲ್ಲ.ಪ್ರತಿ ಮನೆಯಲ್ಲೂ ಮಹಿಳೆಯರಿಗೆ ಶೌಚಾಲಯ ನೀಡಿ ಗೌರವಿಸುವ ಕೆಲಸ ಮಾಡಿದ್ದೇವೆ ಎಂದು ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ಮನೆಗೆ ವಿದ್ಯುತ್ ನೀಡುವ ಮೂಲಕ ಅವರ ಮನೆಗೆ ಬೆಳಕು ತರುವ ಕೆಲಸ ಮಾಡಿದ್ದೇವೆ. ನರೇಂದ್ರ ಮೋದಿ ಮತ್ತು ಜೈರಾಮ್ ಜೀ ಅವರು 5 ವರ್ಷಗಳಲ್ಲಿ ಹಿಮಾಚಲದ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್‌ಗಳನ್ನು ತಲುಪಿಸುವ ಕೆಲಸವನ್ನು ಮಾಡಿದ್ದಾರೆ.ಪ್ರತಿ ಮನೆಗೆ ನಲ್ಲಿಯಿಂದ ನೀರು ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ.ಬಿಜೆಪಿ ಆಯುಷ್ಮಾನ್ ಭಾರತ್ ಯೋಜನೆ ಮತ್ತು ಹಿಮ್‌ಕೇರ್ ಮೂಲಕ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಿದೆ ಎಂದರು.
ಹಿಮಾಚಲದಲ್ಲಿ ನಿವೃತ್ತ ಸೇನಾ ಸಿಬ್ಬಂದಿ 40 ವರ್ಷಗಳಿಂದ ‘ಒಂದು ಶ್ರೇಣಿ ಒಂದು ಪಿಂಚಣಿ’ಗೆ ಬೇಡಿಕೆ ಸಲ್ಲಿಸುತ್ತಿದ್ದರು, ಆದರೆ ಕಾಂಗ್ರೆಸ್ ಪಕ್ಷವು ‘ಒಂದು ಶ್ರೇಣಿ ಒಂದು ಪಿಂಚಣಿ’ ನೀಡುತ್ತಿಲ್ಲ.2014ರಲ್ಲಿ ನೀವು ಮೋದಿಜಿಯವರನ್ನು ಪ್ರಧಾನಿಯನ್ನಾಗಿ ಮಾಡಿದಾಗ ಮೋದಿಜಿಯವರು ‘ಒನ್ ರ್ಯಾಂಕ್ ಒನ್ ಪೆನ್ಷನ್’ ಜಾರಿಗೊಳಿಸಿ ಸೈನಿಕರನ್ನು ಗೌರವಿಸಿದರು ಎಂದರು.
ಮೋದಿಯವರ ನಾಯಕತ್ವದಲ್ಲಿ ಭಾರತ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂದು ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದ್ದೇವೆ. ಅಟಲ್ ಜಿ ಅವರು ದೇಶದ ಆರ್ಥಿಕತೆಯನ್ನು 16 ರಿಂದ 11 ನೇ ಸ್ಥಾನಕ್ಕೆ ಏರಿಸಿದ್ದರು. ಕಾಂಗ್ರೆಸ್ 10ನೇ ಸ್ಥಾನಕ್ಕೆ ತರಲು ಸಾಧ್ಯವಾಗಲಿಲ್ಲ ಎಂದು ಶಾ ಟೀಕಿಸಿದರು.
ಇಡೀ ದೇಶದಲ್ಲಿ ಹಿಮಾಚಲವನ್ನು ದೇವಭೂಮಿ ಎಂದು ಕರೆಯಲಾಗುತ್ತದೆ, ಇದು ದೇವ-ದೇವತೆಗಳ ನಾಡು.ಆದರೆ ಈ ಹಿಮಾಚಲವು ದೇವಭೂಮಿ ಮಾತ್ರವಲ್ಲ ವೀರಭೂಮಿ ಕೂಡ ಎಂದು ನಾನು ಯಾವಾಗಲೂ ಹೇಳುತ್ತೇನೆ. ಇಲ್ಲಿನ ವೀರ ತಾಯಂದಿರು ಗರಿಷ್ಠ ಪುತ್ರರನ್ನು ಕಳುಹಿಸಿ ತಾಯಿ ಭಾರತಿಯನ್ನು ಸುರಕ್ಷಿತವಾಗಿಡುವ ಕೆಲಸವನ್ನು ಮಾಡಿದ್ದಾರೆ ಎಂದರು.