Advertisement

ಎಂಟು ದಿನದಲ್ಲಿ 8 “ಭ್ರಷ್ಟ ಪಿಡಿಒ’ಗಳ ಅಮಾನತು

11:40 PM Feb 15, 2020 | Lakshmi GovindaRaj |

ರಾಯಚೂರು: ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ, ಅವರ ಆಶೋತ್ತರಗಳಿಗೆ ಧ್ವನಿಯಾಗಬೇಕಿದ್ದ ಗ್ರಾಪಂಗಳು ಭ್ರಷ್ಟಾಚಾರದ ತಾಣವಾಗುತ್ತಿವೆ. ಜಿಲ್ಲೆಯಲ್ಲಿ ಈಚೆಗೆ ನಡೆದ ಪ್ರಕರಣಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ಸರ್ಕಾರದ ಸೌಲಭ್ಯ ತಲುಪಿಸಬೇಕಾದ ಸ್ಥಳೀಯ ಸಂಸ್ಥೆಗಳ ಪಿಡಿಒ, ಕಾರ್ಯದರ್ಶಿ, ಚುನಾಯಿತ ಪ್ರತಿನಿ ಧಿಗಳು ಈ ಸಂಸ್ಥೆಗಳನ್ನು ಹಣ ದೋಚುವ ಯಂತ್ರಗಳಂತೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಲ್ಲಿ ಎಂಟು ಜನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಕ್ರಮಗಳ ಆರೋಪದಡಿ ಅಮಾನತು ಮಾಡಲಾಗಿದೆ.

Advertisement

ಖಾತ್ರಿಯಲ್ಲಿ ಕತ್ರಿ: ಜನ ಗುಳೆ ಹೋಗುವುದನ್ನು ತಪ್ಪಿಸಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆಂದು ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ಆದರೆ, ಈ ಯೋಜನೆ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಇದರಲ್ಲಿ ಅಕ್ರಮ ಹಣ ದುರ್ಬಳಕೆ ಮಾಡಿಕೊಂಡ ಆರೋಪದಡಿ ಮೂವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ನಕಲಿ ಜಾಬ್‌ ಕಾರ್ಡ್‌ ಸೃಷ್ಟಿಸುವುದು, ಜನರಿಂದ ಮಾಡಿಸಬೇಕಾದ ಕೆಲಸಗಳನ್ನು ಜೆಸಿಬಿಗಳ ಮೂಲಕ ಮಾಡಿಸುವುದು, ಇಲ್ಲದ ಕಾಮಗಾರಿ ತೋರಿಸಿ ಹಣ ಎತ್ತುವಳಿ ಮಾಡುವುದು ಸೇರಿ ನಾನಾ ರೀತಿಯಲ್ಲಿ ಹಣ ದುರ್ಬಳಕೆ ಮಾಡಲಾಗಿದೆ.

ನಾನಾ ಬಗೆಯ ಅಕ್ರಮ: ಸ್ವಚ್ಛ ಭಾರತ್‌ ಯೋಜನೆ ಶೌಚಗೃಹಗಳ ನಿರ್ಮಾಣದಲ್ಲೂ ಅಕ್ರಮ ಎಸಗಲಾಗಿದೆ. ನಿರ್ಮಿಸದ ಶೌಚಗೃಹಗಳಿಗೂ ಹಣ ಎತ್ತಲಾಗಿದೆ. ಈ ರೀತಿ ಅಕ್ರಮ ಎಸಗಿದ ಇಬ್ಬರನ್ನು ಅಮಾನತು ಮಾಡಲಾಗಿದೆ. ವಸತಿ ಯೋಜನೆ ಅನುಷ್ಠಾನದಲ್ಲಾದ ಲೋಪದಡಿ ಒಬ್ಬ ಪಿಡಿಒ, ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಾದ ಲೋಪದಡಿ ಒಬ್ಬ ಪಿಡಿಒ ಅನ್ನು ಅಮಾನತಿನಲ್ಲಿಡಲಾಗಿದೆ. ಕರ ವಸೂಲಿ ಕಾರ್ಯದಲ್ಲಿ ನಿರ್ಲಕ್ಷ ವಹಿಸಿದ ಒಬ್ಬ ಗ್ರೇಡ್‌ -1 ಕಾರ್ಯದರ್ಶಿಯನ್ನೂ ಅಮಾನತು ಮಾಡಲಾಗಿದೆ. ಇದು ಮೇಲ್ನೋಟಕ್ಕೆ ಕಂಡು ಬರುವ ಅಕ್ರಮಗಳಾದರೆ, ಕಾಣದ ಸಾಕಷ್ಟು ಯಡವಟ್ಟುಗಳು ಗ್ರಾಪಂಗಳಲ್ಲಿ ನಡೆಯುತ್ತಿದೆ.

ಸದಸ್ಯರೇನು ಕಡಿಮೆಯಲ್ಲ!: ಬಹುತೇಕ ಪಂಚಾಯಿತಿಗಳ ಸದಸ್ಯರು ಇಂಥ ಅಕ್ರಮ ಕೂಪ ಪೋಷಿಸುವವರೇ ಆಗಿದ್ದಾರೆ. ಸದಸ್ಯರ ಅಣತಿ ಯಂತೆಯೇ ಅ ಧಿಕಾರಿಗಳು ಅಕ್ರಮ ಮಾಡುತ್ತಾರೆಂಬ ಆರೋಪಗಳು ಇವೆ. ಈ ರೀತಿ ಸಾಮೂಹಿಕ ಅಕ್ರಮದ ಆರೋಪ ಎದುರಿಸಿದ ಹಿನ್ನೆಲೆಯಲ್ಲಿ ಎರಡು ಗ್ರಾಪಂ ಸದಸ್ಯರ ಸದಸ್ಯತ್ವವನ್ನೇ ರದ್ದು ಮಾಡಲಾಗಿದೆ. ಬಿಚ್ಚಾಲಿ ಹಾಗೂ ಉಡುಮಗಲ್‌ ಖಾನಾಪುರ ಗ್ರಾಪಂಗಳ ಏಳೆಂ ಟು ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗಿದೆ. ಮುಕ್ಕುಂ ದ ಗ್ರಾಪಂ ಸದಸ್ಯರ ಮೇಲೂ ಆರೋಪ ಕೇಳಿ ಬಂದಿದ್ದು,

ಅವರ ವಿರುದ್ಧ ತನಿಖೆ ನಡೆಸಲು ಜಿಪಂ ಸಿಇಒ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ. ಹೀಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸ್ಥಾಪಿತಗೊಂಡ ಸ್ಥಳೀಯ ಸಂಸ್ಥೆಗಳು ಅಕ್ರಮ ಕೂಪಗಳಾಗಿ ಮಾರ್ಪಡುತ್ತಿರುವುದು ವಿಪರ್ಯಾಸ. ಸಾಕಷ್ಟು ಗ್ರಾಪಂಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಅದು ಕೂಡ ಅಕ್ರಮಕ್ಕೆ ಅನುವು ಮಾಡಿಕೊಡುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಿದೆ.

Advertisement

ಉದ್ಯೋಗ ಖಾತ್ರಿ ಸೇರಿ ವಿವಿಧ ಯೋಜನೆಗಳಲ್ಲಿ ಅಕ್ರಮ ಎಸಗಿದ ಆರೋಪದಡಿ ಎಂಟು ಪಿಡಿಒಗಳನ್ನು ಅಮಾನತು ಮಾಡಿ, ತನಿಖೆ ಆರಂಭಿಸಲಾಗಿದೆ. ಇನ್ನೂ ಎರಡು ಗ್ರಾಪಂಗಳಲ್ಲಿ ಸದಸ್ಯರು ಹಣ ದುರ್ಬಳಕೆ ಮಾಡಿಕೊಂಡಿದ್ದರಿಂದ ಸದಸ್ಯತ್ವ ರದ್ದು ಮಾಡಲಾಗಿದೆ. ಮತ್ತೂಂದು ಗ್ರಾಪಂ ವಿರುದ್ಧ ಕ್ರಮಕ್ಕೆ ಆರ್‌ಸಿ ಅವರಿಗೆ ಶಿಫಾರಸು ಮಾಡಲಾಗಿದೆ.
-ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next