ಪುಣೆ, ನ. 7: ಬಹಳಷ್ಟು ವರ್ಷಗಳಿಂದ ಊರಿನಿಂದ ಮುಂಬಯಿಗೆ ನಾಟಕ, ಯಕ್ಷಗಾನ, ತಾಳಮದ್ದಳೆ ತಂಡಗಳನ್ನು ಕರೆತಂದು, ಮುಂಬಯಿ ಪುಣೆಗಳಲ್ಲಿ ಕಾರ್ಯಕ್ರಮದ ಪ್ರಾಯೋಜಕರನ್ನು ಹುಡುಕಿ ಪ್ರದರ್ಶನಗಳನ್ನು ಏರ್ಪಡಿಸಿ ಇಲ್ಲಿರುವ ಕಲಾಭಿಮಾನಿಗಳಿಗೆ ಕೇವಲ ಮನೋರಂಜನೆ ನೀಡುವುದು ಮಾತ್ರವಲ್ಲ ಕಲೆಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿರುವ ಪ್ರಕಾಶ ಶೆಟ್ಟಿ ಸುರತ್ಕಲ್ ಇವರ ಕಾರ್ಯವನ್ನು ಅಭಿನಂದಿಸಬೇಕಾಗಿದೆ.
ತುಳು ಯಕ್ಷಗಾನ ಪ್ರದರ್ಶನ ಹಾಗೂ ತುಳು ನಾಟಕಗಳ ಮೂಲಕ ನಮ್ಮ ಸಂಸ್ಕೃತಿಯ ಪೋಷಣೆ ಸಾಧ್ಯ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಕುರ್ಕಿಲ್ ಬೆಟ್ಟು ಅಭಿಪ್ರಾಯಪಟ್ಟರು.
ಅವರು ನ. 6ರಂದು ಪುಣೆಯ ನಾಟಕ ಕಲಾಭಿಮಾನಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರದೊಂದಿಗೆ ಪುಣೆ ಪಿಂಪ್ರಿಯ ವಲ್ಲಭ್ ನಗರದ ಆಚಾರ್ಯ ಅತ್ರೆ ಸಭಾಗೃಹದಲ್ಲಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಕಲಾವಿದರಿಂದ ಲಯನ್ ಸುಂದರ ರೈ ಮಂದಾರ ನಿರ್ದೇಶಿಸಿ, ನಟಿಸಿದ ತುಳು ಹಾಸ್ಯ ನಾಟಕ ಗಿರ್‌ಗಿಟ್ ಗಿರಿಧರೆ ಪ್ರದರ್ಶನದ ಮಧ್ಯಂತರದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಟಕದ ಮೂಲಕ ನೈಜ ಜೀವನಕ್ಕೆ ಸಂಬಂಧಪಟ್ಟ ಅದೆಷ್ಟೋ ವಿಚಾರಗಳನ್ನು ರಂಗದ ಮೂಲಕ ಪ್ರಸ್ತುತಪಡಿಸಿ ಸಮಾಜಕ್ಕೆ ಉತ್ತಮ ಸಂದೇಶ ಹಾಗೂ ಸಾಮಾಜಿಕ ಕಾಳಜಿಯನ್ನು ಸಾರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಇಂದಿನ ಉತ್ತಮ ಕಥಾವಸ್ತುವನ್ನೊಳಗೊಂಡ ಗಿರ್‌ಗಿಟ್ ಗಿರಿಧರೆ ನಾಟಕ ಅದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಇಂದಿನಕಾರ್ಯಕ್ರಮದಲ್ಲಿ ಕಲಾ ಪೋಷಣೆಯಲ್ಲಿ ನಿರತರಾಗಿರುವ ಹಾಗೂ ಉತ್ತಮ ಕಲಾವಿದರನ್ನು ಗುರುತಿಸಿ ಸಮ್ಮಾನಿಸುವ ಕಾರ್ಯವನ್ನೂ ಪ್ರಕಾಶ್ ಶೆಟ್ಟಿಯವರು ಮಾಡುತ್ತಿರುವುದು ಗಮನಾರ್ಹವಾಗಿದೆ. ಅದೇ ರೀತಿ ಸಹಕಾರ ನೀಡುತ್ತಿರುವ ಕಲಾಭಿಮಾನಿಗಳ ಸಹಕಾರಕ್ಕೂ ಅಭಿನಂದನೆ ಸಲ್ಲಬೇಕಾಗಿದೆ. ಮುಂದೆಯೂ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸುವಂತಹ ಕಾಯಕ ನಡೆಯುತ್ತಿರಲಿ ಎಂದರು.
ಶಾರದಾ ಆರ್ಟ್ಸ್ ಐಸಿರಿ ಕಲಾವಿದ ತಂಡದ ರೂವಾರಿ, ನಿರ್ದೇಶಕ, ನಟ ಲಯನ್ ಸುಂದರ ರೈ ಮಂದಾರ ಮಾತನಾಡಿ, ಇಂದಿನ ನಾಟಕ ಪ್ರದರ್ಶನಕ್ಕೆ ತುಂಬು ಹೃದಯದ ಸಹಕಾರ ನೀಡಿದ ಜಯಾನಂದ ಶೆಟ್ಟಿ ಹಾಗೂ ಪುಣೆಯ ಗಣ್ಯ ಕಲಾಪೋಷಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರ ಸಹಕಾರದಿಂದಲೇ ಇಂದು ಪುಣೆಯಲ್ಲಿ ಒಂದು ಪ್ರದರ್ಶನ ನೀಡಲು ಸಾಧ್ಯವಾಯಿತು. ತುಳು ಭಾಷೆ, ತುಳುನಾಡ ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವುದರಿಂದಲೇ ನಿಮ್ಮೆಲ್ಲರ ಸಹಕಾರದಿಂದ ತುಳು ನಾಟಕವಾಗಲಿ, ಯಕ್ಷಗಾನವಾಗಲಿ ಇಲ್ಲಿ ಪ್ರದರ್ಶನಗೊಳ್ಳಲು ಸಾಧ್ಯ. ತುಳು ಭಾಷೆಯ, ತುಳು ಸಂಸ್ಕೃತಿಯ ನಾಟಕ, ಯಕ್ಷಗಾನಗಳಿಗೆ ಇದೇ ರೀತಿಯ ಸಹಕಾರವನ್ನು ನೀಡಿ ಪ್ರೋತ್ಸಾಹಿಸುವ ಕಾರ್ಯ ಇಲ್ಲಿ ನಡೆಯುತ್ತಿರಲಿ.ಪುಣೆಯ ಕಲಾಭಿಮಾನಿಗಳ ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ವೇದಿಕೆಯಲ್ಲಿ ಪಿಂಪ್ರಿ-ಚಿಂಚಾಡ್ ಬಂಟರ ಸಂಘದ ಅಧ್ಯಕ್ಷ ವಿಜಯ್ ಎಸ್. ಶೆಟ್ಟಿ ಬೋರ್ಕಟ್ಟೆ, ಮಾಜಿ ಅಧ್ಯಕ್ಷರಾದ ಎರ್ಮಾಳ್ ವಿಶ್ವನಾಥ ಶೆಟ್ಟಿ, ಎರ್ಮಾಳ್ ಸೀತಾರಾಮ ಶೆಟ್ಟಿ, ತುಳುಕೂಟ ಪುಣೆ ಇದರ ಗೌರವಾಧ್ಯಕ್ಷ ತಾರಾನಾಥ ಕೆ ರೈ ಮೇಗಿನಗುತ್ತು, ತುಳು ಸಂಘ ಪಿಂಪ್ರಿ-ಚಿಂಚಾಡ್ ಇದರ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಹೊಟೇಲ್ ಉದ್ಯಮಿ ಎರ್ಮಾಳ್ ಬಾಲಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ತಂಡದ ಮುಂಬಯಿ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್ ಹಾಗೂ ತಂಡದ ನಿರ್ದೇಶಕ ಸುಂದರ ರೈ ಮಂದಾರ ಶಾಲು ಹೊದೆಸಿ ಗೌರವಿಸಿದರು.
ಈ ಸಂದರ್ಭ ಉದ್ಯಮಿ ಹಾಗೂ ಕಲಾಪೋಷಕ ಜಯಾನಂದ ಶೆಟ್ಟಿ ಹಾಗೂ ಹಿರಿಯ ಕಲಾವಿದ ಅನಿಲ್ ರಾಜ್ ಉಪ್ಪಳ ಇವರುಗಳನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಅತಿಥಿ-ಗಣ್ಯರ ಹಸ್ತದಿಂದ ಸಮ್ಮಾನಿಸಲಾಯಿತು. ಕಾರ್ಯಕ್ರಮವನ್ನು ಪತ್ರಕರ್ತ ಕಿರಣ್ ಬಿ. ರೈ ಕರ್ನೂರು ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮತ್ತೆ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇದರ ಹೆಸರಾಂತ ಕಲಾವಿದರು ಅಭಿನಯಿಸಿದ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಸಾರಥ್ಯದ ಕುಸಲ್ದರಸೆ ನವೀನ್ ಡಿ. ಪಡೀಲ್ ಇವರ ಸಹಕಾರದೊಂದಿಗೆ ಸೋಮನಾಥ್ ಮಂಗಲ್ಪಾಡಿ ರಚಿಸಿ, ರಂಗ್‌ದ ರಾಜೆ, ಚಲನಚಿತ್ರ ನಟ, ತುಳುರಂಗಭೂಮಿಯ ಹೆಮ್ಮೆಯ ಕಲಾವಿದ ಅಭಿನಯಿಸಿದ ತುಳು ಹಾಸ್ಯ ನಾಟಕ ಗಿರ್‌ಗಿಟ್ ಗಿರಿಧರೆ ಪ್ರದರ್ಶನ ಮುಂದುವರಿಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದರು.