ತೀರ್ಥಹಳ್ಳಿ: ಸಾಹಿತ್ಯ ಕ್ಷೇತ್ರವು ಜಾತಿ, ಭಾಷೆ, ಗಡಿ ಮೀರಿದ ಕ್ಷೇತ್ರವಾಗಿದೆ. ಜಾತ್ಯತೀತ, ಪಕ್ಷಾತೀತವಾಗಿ ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಕನ್ನಡಿಗರಾದ ನಾವುಗಳು ಕ್ರಿಯಶೀಲರಾಗಿ ಕನ್ನಡ ಭಾಷೆ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ ನೀಡಿದರು.
ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಭಾಷೆ ಉಳಿಯಬೇಕಾದರೆ ಆ ಭಾಗದ ಭಾಷಿಗನ ಸ್ವಾಭಿಮಾನದಿಂದ ಮಾತ್ರ ಸಾಧ್ಯ. ಆದರೆ ಇಂದು ಕೆಲವು ಸಾಹಿತಿಗಳು, ವಿಚಾರವಾದಿಗಳು ಕನ್ನಡ ಭಾಷೆ ಬಗ್ಗೆ ಭಾಷಣ ಮಾಡುತ್ತಾ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುತ್ತಿದ್ದಾರೆ. ಇಂದು ಸ್ಥಳೀಯ ಭಾಷೆಗಳನ್ನು ಕೊಲ್ಲುವ ಕೆಲಸ ಆಂಗ್ಲ ಭಾಷೆ ಮಾಡುತ್ತಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮಾದರಿ ಕನ್ನಡ ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಇಂದು ಆಂಗ್ಲ ಕಲಿಯುವ ಮಕ್ಕಳ ಎದುರು ಕನ್ನಡ ಶಾಲೆಗಳ ಮಕ್ಕಳು ಕೀಳರಿಮೆಯಿಂದ ಬದುಕಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರ್ಕಾರಗಳು ಭಾಷೆ ವಿಚಾರದಲ್ಲಿ ಬದ್ಧತೆ ಬೆಳೆಸಿಕೊಳ್ಳಬೇಕಾಗಿದೆ. ಐಎಎಸ್ ಅಧಿಕಾರಿಗಳಿಂದ ಇಂದು ಕನ್ನಡ ಭಾಷೆ ಕಟ್ಟಲಾಗುವುದಿಲ್ಲ. ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳು ಸರ್ಕಾರದ ಮೂಲೆ ಸೇರುತ್ತಿವೆ. ಇಂದು ಬಹಳಷ್ಟು ಕನ್ನಡ ಸಮ್ಮೇಳನದಲ್ಲಿ ವಿಚಾರವಾದಿಗಳು ಎನಿಸಿಕೊಂಡವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸಾಹಿತ್ಯ ನಿಂತ ನೀರಲ್ಲ, ಸಾಹಿತ್ಯದ ನದಿ ನಿರಂತರವಾಗಿ ಹರಿಯಬೇಕಾದರೆ ಪ್ರೋತ್ಸಾಹ, ಬೆಂಬಲ ಅಗತ್ಯ ಎಂದರು.
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಟಿ.ಎಲ್.ಸುಬ್ರಮಣ್ಯ ಅಡಿಗ ಮಾತನಾಡಿ, ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿ ನುಡಿತೇರು ಎಳೆಯಲು ನನಗೆ ಸಿಕ್ಕ ಅವಕಾಶಕ್ಕಾಗಿ ಕನ್ನಡ ತಾಯಿಗೆ ಗೌರವ ಸಲ್ಲಿಸುತ್ತಿದ್ದೇನೆ. ಕನ್ನಡವೆಂಬ ಮಾವಿನ ಮರಕ್ಕೆ ಹೆಚ್ಚು ಕೋಗಿಲೆಗಳು ಬರುವಂತಾದರೆ ಸಮ್ಮೇಳನಗಳು ಯಶಸ್ವಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಹಕಾರಿ ಕ್ಷೇತ್ರದ ಎಚ್.ಎನ್.ವಿಜಯದೇವ್, ರಂಗಭೂಮಿ ಕಲಾವಿದ ಸಂದೇಶ್ ಜವಳಿ, ಮ್ಯಾಥ್ಯು ಸುರಾನಿ, ವೈದ್ಯಕೀಯ ಕ್ಷೇತ್ರದಿಂದ ಡಾ| ನಾರಾಯಣಸ್ವಾಮಿ, ಡಾ| ಶಿವಪ್ರಕಾಶ್, ಡಾ| ಜೀವೇಂದರ್ ಜೈನ್, ಆಯುರ್ವೇದ ಪಂಡಿತರಾದ ಮಂಗಳ ಶಿವಣ್ಣ, ಸಂಗೀತ ಕ್ಷೇತ್ರದಿಂದ ರಮೇಶ್ ಗಾಂವ್ಕರ್, ಜಾನಪದ ಕ್ಷೇತ್ರದಿಂದ ಯೋಗೇಶ್, ಸುರೇಶ್ ಆಡಿನಸರ, ಚುಟುಕು ಸಾಹಿತ್ಯ ಕ್ಷೇತ್ರದಿಂದ ಸುಲೋಚನ, ಸುರೇಶ್, ಕೆ.ಕೆ.ರಾಘವೇಂದ್ರ, ಸಮಾಜ ಸೇವೆಯಿಂದ ಪಿ.ಸಿ.ಸತೀಶ್‌ಶೆಟ್ಟಿ, ಪಾಂಡುರಂಗಪ್ಪ, ಎಸ್.ಕೆ.ಧರ್ಮೆಶ್, ಡಾನ್ ರಾಮಣ್ಣ, ಶ್ರಮಿಕರಾದ ರಾಮ ಲಕ್ಷ್ಮ್ಮಣ ಸಹೋದರರು, ಮೈಕ್ ರಮೇಶ್ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಅಧ್ಯಕ್ಷ ಸತೀಶ್ ಆಡಿನಸರ, ಜಿಪಂ ಸದಸ್ಯೆ ಅಪೂರ್ವ ಶರ, ಭಾರತೀ ಪ್ರಭಾಕರ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಟಿ.ವಿ.ಸತೀಶ್, ವೆಂಟಕೇಶ್ ಹೆಗ್ಡೆ ಇನ್ನಿತರರಿದ್ದರು.