ತೀರ್ಥಹಳ್ಳಿ: ಆಗುಂಬೆ ಘಾಟಿ ಆರಂಭದ ಚೆಕ್ ಪೋಸ್ಟ್‌ನಲ್ಲಿ ಸಣ್ಣವಾಹನ ಮಾಲೀಕರಿಗೆ ಅರಣ್ಯ ಇಲಾಖೆ ವಾಚರ್ ಹಾಗೂ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ರಾಜರೋಷವಾಗಿ ಲಂಚ ಕೇಳುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರನ್ನು ವರ್ಗಾವಣೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ತ್ತೈಮಾಸಿಕ ಸಭೆಯಲ್ಲಿ ಅರಣ್ಯ ಇಲಾಖೆ ವಾಚರ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿಗಳ ಆದೇಶದಂತೆ, ಸಣ್ಣಪುಟ್ಟ ವಾಹನಗಳನ್ನು ಘಾಟಿ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಬಾರದೆಂಬ ಆದೇಶ ಹಿಂದೆ ಇತ್ತು. ನಂತರ ಶಾಸಕರು ಸಣ್ಣವಾಹನಗಳ ಮಾಲಿಕರ ಸಂಘದೊಂದಿಗೆ ಚರ್ಚಿಸಿ ಅವಕಾಶ ನೀಡಿದ್ದರು. ಆದರೀಗ ವಿಪರೀತ ಲಂಚ ಕೇಳುತ್ತಿರುವ ಎರಡೂ ಇಲಾಖೆಯ ನೌಕರರ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು.
ತಾಲೂಕಿನಲ್ಲಿ ಗಾಂಜಾ ವ್ಯಾಪಾರ ಹಾಗೂ ಮಟ್ಕಾ ದಂಧೆ ವಿಪರೀತವಾಗಿದೆ. ಆದರೆ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಜಿಪಂ ಸದಸ್ಯ ಶ್ರೀನಿವಾಸ್ ಆರೋಪಿಸಿದರು. ಸಿಪಿಐ ಸುರೇಶ್ ಈಗಾಗಲೇ ಜಿಲ್ಲಾ ರಕ್ಷಣಾ ಧಿಕಾರಿಗಳ ಆದೇಶದಂತೆ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಉತ್ತರಿಸಿದರು.
ತಾಪಂ ಸ್ಥಾಯಿ ಸಮಿತಿ ಸದಸ್ಯ ಸೋಮಶೇಖರ್ ಮಾತನಾಡಿ, ತಾಲೂಕಿನಲ್ಲಿ 45 ಸರ್ಕಾರಿ ಹಿರಿಯ ಮತ್ತು ಕಿರಿಯ ಶಾಲೆಗಳು ದುಸ್ಥಿತಿ ಹಂತಕ್ಕೆ ತಲುಪಿವೆ ಎಂದು ಆರೋಪಿಸಿದಾಗ ಬಿಇಒ ಪ್ರಸನ್ನ ಕುಮಾರ್ ಈ ಬಗ್ಗೆ ಜಿಲ್ಲಾ ಶಿಕ್ಷಣ ನಿರ್ದೇಶಕರಿಗೆ ಮಾಹಿತಿ ನೀಡಿದ್ದೇವೆ ಎಂದರು. ಪಟ್ಟಣದ ಮುಖ್ಯ ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಕಾಶ್ ಅವರ ವರ್ಗಾವಣೆ ತಡೆಹಿಡಿಯಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗ್ರಾಮೀಣ ಪ್ರದೇಶದ ಆಯುಷ್ ವೈದ್ಯರು ಸೂಕ್ತ ಸಮಯದಲ್ಲಿ ಕಾರ್ಯ ನಿರ್ವಹಿಸದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯವರು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಮಳೆಗಾಲದ ಸಮಯದಲ್ಲಿ ತಾಲೂಕಿನ ಹಲವೆಡೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು, ಅವಘಡಗಳಾಗಿವೆ. ಅರಣ್ಯ ಇಲಾಖೆಯವರು ಮೆಸ್ಕಾಂನೊಂದಿಗೆ ಸಹಕರಿಸಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕರು ತಿಳಿಸಿದರು.
ಪಟ್ಟಣ ವ್ಯಾಪ್ತಿಯ ಕುರುವಳ್ಳಿಯಲ್ಲಿ ಮೆಸ್ಕಾಂನವರು ಮೀಟರ್‌ಗಾಗಿ ಲಂಚ ಕೇಳುತ್ತಿದ್ದಾರೆ ಎಂಬ ದೂರು ಬರುತ್ತಿದೆ. ಈ ವಿಚಾರದಲ್ಲಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಎಚ್ಚರಿಕೆ ನೀಡಿದರು. ತಾಪಂ ಅಧ್ಯಕ್ಷೆ ನವಮಣಿ ರವಿಕುಮಾರ್, ಉಪಾಧ್ಯಕ್ಷೆ ಯಶೋದಾ ಮಂಜುನಾಥ್, ತಾಪಂ ಅಧಿಕಾರಿ ಧನರಾಜ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಂದುವಳ್ಳಿ ಸೋಮಶೇಖರ್ ಉಪಸ್ಥಿತರಿದ್ದರು.